ಕರಾವಳಿ

‘ಬಂಧಿಸಿ ಬಳ್ಳಾರಿ ಜೈಲಿಗಟ್ಟಿದರೂ ಅಡ್ಡಿಲ್ಲ, KA-20ಗೆ ಟೋಲ್ ಸಂಗ್ರಹ ನಿಲ್ಲಿಸಿ’ (Video)

Pinterest LinkedIn Tumblr

ಕುಂದಾಪುರ: ಕೆಎ-20 ನೋಂದಾವಣಿಯ ವಾಹನಗಳಿಗೆ ಸಾಸ್ತಾನ ಟೋಲ್ ಕೇಂದ್ರದಲ್ಲಿ ಇಂದಿನಿಂದ ಟೋಲ್ ಸಂಗ್ರಹ ಆರಂಭಿಸಿದ್ದು ಇದನ್ನು ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯವರು ನಾಗರಿಕರನ್ನು ಒಗ್ಗೂಡಿಸಿಕೊಂಡು ಪ್ರತಿಭಟನೆ ನಡೆಸಿದರು.

ಇದೇ ಸಂದರ್ಭ ನವಯುಗ ಕಂಪೆನಿ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಕೂಡಲೇ ಟೋಲ್ ಸಂಗ್ರಹ ನಿಲ್ಲಿಸುವಂತೆ ಆಗ್ರಹಿಸಿದರು. ಪ್ರತಿಭಟನಾಕಾರರ ಜೊತೆ ಡಿವೈಎಸ್ಪಿ ಹಾಗೂ ತಹಶಿಲ್ದಾರ್ ಮಾತುಕತೆ ನಡೆಸಲು ಮುಂದಾದರೂ ಕೂಡ ಇದಕ್ಕೆ ಜಗ್ಗದ ಅವರು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದು ಟೋಲ್ ಕೇಂದ್ರದ ಎದುರು ಹೆದ್ದಾರಿ ಬಳಿ ಕುಳಿತರು.

ಈ ವೇಳೆಯಲ್ಲಿ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಪ್ರತಾಪ್ ಶೆಟ್ಟಿ, ಕಳೆದ ಮೂರು ವರ್ಷಗಳಿಂದ ಕೆ‌ಎ-20ವಾಹನಗಳಿಗೆ ವಿನಾಯಿತಿ ನೀಡಬೇಕೆಂದು ಹೋರಾಟ ಮಾಡುತ್ತಾ ಬಂದಿದ್ದೇವೆ. 26ರಿಂದ ಸ್ಥಳೀಯ ವಾಹನಗಳಿಗೂ ನವಯುಗ ಕಂಪೆನಿ ಟೋಲ್ ಸಂಗ್ರಹ ಮಾಡುವುದಾಗಿ ಪ್ರಕಟಿಸಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿಕೊಂಡ ಬಳಿಕ 28ರಂದು ಜಿಲ್ಲಾ ಉಸ್ತುವಾರಿ ಸಚಿವರ ಸಭೆಗೂ ಮುನ್ನ ಟೋಲ್ ಸಂಗ್ರಹ ಮಾಡುವುದಿಲ್ಲವೆಂದು ಜಿಲ್ಲಾಧಿಕಾರಿಯವರು ಭರವಸೆ ನೀಡಿದ್ದರು. ಈ ಸಭೆ ಮುಗಿಯುವ ತನಕ ಟೋಲ್ ಸಂಗ್ರಹ ಆಗಬಾರದು. ನಮ್ಮ ಬೇಡಿಕೆಗಳು ಈಡೇರುವ ತನಕ ನಾವು ಕದಲುವುದಿಲ್ಲ. ನಾವು ಜೈಲಿಗೆ ಹೋಗಲು ಸಿದ್ಧರಿದ್ದೇವೆಂದರು.

ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆಗೆ ಮುಂದಾದವರನ್ನು ಪೊಲೀಸರು ಬಂಧಿಸಿದ್ದು ಈ ವೇಳೆ ಪೊಲೀಸರ ವಿರುದ್ಧ ಪ್ರತಿಭಟನಾಕಾರರು ಘೋಷಣೆಯನ್ನು ಕೂಗಿ ಆಕ್ರೋಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಕಾರ್ಯದರ್ಶಿ ಐರೋಡಿ ವಿಠಲ್ ಪೂಜಾರಿ, ಕಾನೂನು ಸಲಹೆಗಾರ ಶ್ಯಾಮಸುಂದರ್ ನಾಯರಿ, ಲಾರಿ ಮಾಲಿಕರ ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಕಾವೇರಿ, ಸೇರಿದಂತೆ ಹಲವರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಲಾಯಿತು.

ಬಿಗಿ ಬಂದೋಬಸ್ತ್…..
ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಡಿವೈಎಸ್ಪಿ ಜಯಶಂಕರ್, ಬ್ರಹ್ಮಾವರ ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್, ಆರ್.ಟಿ.ಓ. ಅಧಿಕಾರಿಗಳು ಇದ್ದರು. ಐವರು ಸಿಪಿಐ, 17 ಮಂದಿ ಪಿಎಸ್ಐ, 11 ಎಎಸ್ಐ, 80 ಮಂದಿ ಹೆಡ್ ಕಾನ್ಸ್‌ಟೇಬಲ್, ಕಾನ್ಸ್‌ಟೇಬಲ್ ಸೇರಿದಂತೆ ನೂರಾರು ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು. ಮುಂಜಾಗ್ರತಾ ಕ್ರಮವಾಗಿ 2 ಕೆ.ಎಸ್.ಆರ್.ಪಿ, 2 ಡಿಎಆರ್ ವಾಹನ, ಅಗ್ನಿಶಾಮಕ, ಅಂಬುಲೆನ್ಸ್, ಖಾಲಿ ಬಸ್ ನಿಯೋಜನೆ ಮಾಡಲಾಗಿತ್ತು.

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

Comments are closed.