ಕರಾವಳಿ

ಕೋಟೇಶ್ವರದಲ್ಲಿ ‘ಕೊಡಿ ಹಬ್ಬ’ದ ಸಂಭ್ರಮ; ಧ್ವಜಪುರದಲ್ಲಿ ಭಕ್ತಸಾಗರ! (Video)

Pinterest LinkedIn Tumblr

ಕುಂದಾಪುರ: ಕರ್ನಾಟಕ ಕರಾವಳಿಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದಲ್ಲಿ ಕೊಡಿ ಹಬ್ಬ ವಿಜೃಂಭಣೆಯಿಂದ ಶುಕ್ರವಾರ ಜರುಗಿತು. ಕೊಟೇಶ್ವರದ ಅಧಿದೇವ ಶ್ರೀ ಕೋಟಿಲಿಂಗೇಶ್ವರನ ವಾರ್ಷಿಕ ಬ್ರಹ್ಮರಥೋತ್ಸವವೇ ‘ಕೊಡಿಹಬ್ಬ’. ಈ ಉತ್ಸವದ ಹಿಂದೆ ವಿಶೇಷ ನಂಬಿಕೆ ಇದೆ. ವೃಶ್ಚಿಕ ಮಾಸದ ಪೂರ್ಣಿಮೆಯಂದು ನಡೆಯುವ ಕೊಡಿ ಹಬ್ಬದ ಸಂಭ್ರಮದ ಕ್ಷಣಗಳ ಝಲಕ್ ಇಲ್ಲಿದೆ.

ಬೆಳಿಗ್ಗೆ 12.45 ಕ್ಕೆ ದೇವಸ್ಥಾನದಿಂದ ವೈಭವದ ಮೆರವಣಿಗೆಯಲ್ಲಿ ಬಂದ ಬಿದಿರಿನ ಕೊಡಿ, ತಾಂಡವೇಶ್ವರ ದೇವರು, ತ್ರಿಶೂಲ, ಗೋಳೆ ದೇವರು ಹಾಗೂ ಕೋಟಿಲಿಂಗೇಶ್ವರ ಉತ್ಸವ ಮೂರ್ತಿಗಳನ್ನು ಜಯಕಾರಗಳೊಂದಿಗೆ ಸ್ವಾಗತಿಸಲಾಯಿತು. ಬಿದಿರಿನ ಕೊಡಿಯನ್ನು ಮೊದಲು ರಥದ ಮೇಲಕ್ಕೆ ಕೊಂಡೊಯ್ಯುವ ಮೂಲಕ ರಥಾರೋಹಣಕ್ಕೆ ಚಾಲನೆ ನೀಡಲಾಯಿತು. ನಂತರ ತಾಂಡವೇಶ್ವರ ದೇವರು, ತ್ರಿಶೂಲ ಹಾಗೂ ಗೋಳೆ ದೇವರು ರಥದ ಮೇಲಕ್ಕೆ ಏರಿಸಲಾಯಿತು.

 

ದೇವರ ಮೂರ್ತಿಗಳು ರಥವನ್ನು ಏರಿದ ಬಳಿಕ ನಂದಳಿಕೆಯ ಪಿ. ರವಿರಾಜ್‌ ಭಟ್‌ ಅವರು ಕೋಟಿಲಿಂಗೇಶ್ವರ ದೇವರ ಉತ್ಸವ ಮೂರ್ತಿಯನ್ನು ತಲೆ ಮೇಲಿರಿಸಿ ಚಂಡೆಗಳ ತಾಳಕ್ಕೆ ತಾಂಡವ ನರ್ತನ ಮಾಡಿದರು. ನಂತರ ನೆರೆದ ಭಕ್ತರು ಹರಹರ ಮಹಾದೇವ ಎನ್ನುವ ಜಯಘೋಷ ಮಾಡುತ್ತಿದ್ದಂತೆ ನರ್ತನದ ಮೂಲಕ ದೇವರೊಂದಿಗೆ ರಥದ ಮೇಲೇರಿದರು. ಉತ್ಸವ ಮೂರ್ತಿಯ ರಥಾರೋಹಣವಾದ ಬಳಿಕ ಮಂಗಳಾರತಿ, ಹಣ್ಣುಕಾಯಿ ಹಾಗೂ ರಥಕ್ಕೆ ಕಾಯಿ ಒಡೆಯುವ ಸೇವೆಗಳನ್ನು ಸಲ್ಲಿಸಲಾಯಿತು. ಬಳಿಕ ರಥ ಬೀದಿಯಲ್ಲಿ ರಥವನ್ನು ಎಳೆಯುವ ಮೂಲಕ ರಥೋತ್ಸವ ನಡೆಯಿತು. ದೇವಸ್ಥಾನ ತಂತ್ರಿ ಪ್ರಸನ್ನ ಕುಮಾರ ಐತಾಳ್ ನೇತ್ರತ್ವದಲ್ಲಿ ಧಾರ್ಮಿಕ ವಿಧಿ ನೆರವೇರಿಸಲಾಯಿತು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಪ್ತಕ್ಷೇತ್ರಗಳಲ್ಲಿ ಒಂದಾಗಿರುವ ಇತಿಹಾಸ ಪ್ರಸಿದ್ಧ ಕುಂದಾಪುರ ತಾಲೂಕಿನ ಕೋಟೇಶ್ವರದ ಮಹತೋಬಾರ ಕೋಟಿಲಿಂಗೇಶ್ವರ ದೇವಸ್ಥಾನ ಹಲವಾರು ಶತಮಾನಗಳಷ್ಟು ಪುರಾತನವಾದ ದೇವಳಗಳಲ್ಲಿ ಒಂದಾಗಿದೆ. ಇಲ್ಲಿ ನಡೆಯುವ ಕೊಡಿ ಹಬ್ಬದ ಉತ್ಸವದ ಹಿಂದೆ ಪರಂಪರಾನುಗತ ನಂಬಿಕೆ ಇದೆ. ವ್ಯವಹಾರಸ್ಥರಿಗೆ ಹೊಸ ಲೆಕ್ಕಚಾರ ಪ್ರಾರಂಭವಾಗಿ ಅಭಿವೃದ್ಧಿಯ ಕುಡಿಯೊಡೆಯುತ್ತದೆ, ಅವಿವಾಹಿತರಿಗೆ ಬಾಳಜೋಡಿ ಸಿಗುತ್ತದೆ, ನವ ವಿವಾಹಿತರಿಗೆ ಕರುಳ ಕುಡಿ ಚಿಗುರಿ ಸಂತಸ ಚಿಮ್ಮುತ್ತದೆ, ಕೃಷಿಕರಿಗೆ ಫಸಲು ತುಂಬಿ ಸಮೃದ್ಧಿಯ ಕುಡಿ ಮೊಳೆಯುತ್ತದೆ ಎಂಬ ನಂಬಿಕೆಯೇ ಜಿಲ್ಲೆಯ ಈ ಅತಿದೊಡ್ಡ ರಥೋತ್ಸವಕ್ಕೆ ‘ಕೊಡಿಹಬ್ಬ’ ಎಂದು ಹೆಸರು ಬರಲು ಕಾರಣವಾಯಿತು. ಒಟ್ಟಿನಲ್ಲಿ ಎಲ್ಲೆಡೆ ಸಂತಸ, ಸಮೃದ್ಧಿಯ ಕುಡಿಯೊಡೆಯುವಿಕೆಯ ನಂಬಿಕೆ ಇದೆ. ಇನ್ನು ರಥೋತ್ಸವದ ಮೊದಲು ಮಧ್ಯಾಹ್ನದ ಸುಮಾರಿಗೆ ದೇವಳದ ಎದುರಿಗಿನ ಬ್ರಹ್ಮರಥದ ಮೇಲೆ ಗರುಡ ಪಕ್ಷಿ ಮೂರು ಸುತ್ತು ಸುತ್ತುತ್ತದೆ, ಇದು ಜಾತ್ರೆಯ ಆರಂಭಕ್ಕೆ ಶುಭ ಸೂಚನೆ ಎಂಬ ನಿಟ್ಟಿನಲ್ಲಿ ರಥೋತ್ಸವ ಆರಂಭಗೊಳ್ಳುತ್ತದೆ. ಅಲ್ಲದೇ ರಾಜ್ಯದ ಪ್ರಮುಖ ದೊಡ್ದ ಗಾತ್ರದ ರಥಗಳಲ್ಲಿ ಕೋಟೇಶ್ವರದ ಈ ರಥವೂ ಒಂದು. ಈ ಬ್ರಹತ್ ಗಾತ್ರದ ಬ್ರಹ್ಮ ರಥದಲ್ಲಿ ವಿವಿಧ ಶಿಲ್ಪ ಕಲೆಯ ಕೆತ್ತನೆಗಳು ರಚಿಸಲ್ಪಟ್ಟಿದೆ.

ಹಬ್ಬದ ದಿನವಾದ ಶುಕ್ರವಾರ ಮುಂಜಾನೆ ಸೂರ್ಯ ಉದಯಕ್ಕೆ ಮುಂಚೆ ಇತಿಹಾಸ ಪ್ರಸಿದ್ದ ಕೋಟಿ ತೀರ್ಥ ಸರೋವರದಲ್ಲಿ ಶುಚಿಭೂತರಾಗಿ ದೇವಸ್ಥಾನಕ್ಕೆ ಬರುವ ಭಕ್ತರು ಸರೋವರದ ಸುತ್ತ ಅಪೇಕ್ಷಿತರು ಹಾಸಿದ ಬಿಳಿ ಬಟ್ಟೆಯ ಮೇಲೆ ಮುಡಿ ಅಕ್ಕಿ ಚಲ್ಲುವ ಪಾರಂಪರಿಕ ಸುತ್ತಕ್ಕಿ ಸೇವೆಯಲ್ಲಿ ಪಾಲ್ಗೊಂಡ ಬಳಿಕ ದೇವರ ದರ್ಶನ ಪಡೆದು ಸಂಪ್ರದಾಯಬದ್ದ ಪೂಜೆ ಸಲ್ಲಿಸಿದ್ರು. ಕೊಡಿ ಹಬ್ಬ ಅಂದರೆ ಕುಡಿ ಅರಳಿಸುವ ಪ್ರತೀತಿ. ನವ ದಂಪತಿ ಹಬ್ಬದಲ್ಲಿ ಕಬ್ಬು ಖರೀದಿಸುವುದು ವಾಡಿಕೆ. ಜಿಲ್ಲೆಯ ನಾನಾ ಕಡೆಯ ನವ ದಂಪತಿ ಶ್ರೀ ಕೋಟಿಲಿಂಗೇಶ್ವರನ ದರ್ಶನ ಪಡೆದು ಕಬ್ಬು ಖರೀದಿಸುವ ದೃಶ್ಯ ಕಂಡು ಬಂತು. ಮದ್ಯಾಹ್ನ ಸುಮುಹೂರ್ತದಲ್ಲಿ ದೇವಸ್ಥಾನದಿಂದ ವೈಭವದ ಮೆರವಣಿಗೆಯಲ್ಲಿ ಬಂದ ಕೋಟಿಲಿಂಗೇಶ್ವರ ಹಾಗೂ ಪರಿವಾರ ದೇವತೆಗಳನ್ನು ರಥದಲ್ಲಿ ಕುಳ್ಳಿರಿಸಿದ ಬಳಿಕ ಮಂಗಳರಾತಿ, ಹಣ್ಣುಕಾಯಿ ಹಾಗೂ ಕಾಯಿ ಒಡೆಯುವ ಸೇವೆಗಳನ್ನು ಮುಗಿಸಿದ ಬಳಿಕ ರಥ ಬೀದಿಯಲ್ಲಿ ರಥವನ್ನು ಎಳೆಯುವ ಮೂಲಕ ರಥೋತ್ಸವವನ್ನು ಆಚರಿಸಲಾಯಿತು.

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ, ಸದಸ್ಯರಾದ ಎನ್‌.ರಾಘವೇಂದ್ರ ರಾವ್‌ ನೇರಂಬಳ್ಳಿ, ಶಂಕರ ಚಾತ್ರಬೆಟ್ಟು, ಅಶೋಕ್ ಪೂಜಾರಿ, ಭಾರತಿ ಆನಂದ ದೇವಾಡಿಗ, ಸುಶೀಲ ಶೇಟ್‌, ಜ್ಯೋತಿ ಎಸ್‌ ನಾಯ್ಕ್‌, ಕಾರ್ಯನಿರ್ವಹಣಾಧಿಕಾರಿ ಗಣೇಶ್‌ ರಾವ್‌, ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಬಿ.ಹಿರಿಯಣ್ಣ, ಜಿಲ್ಲಾ ಗೃಹ ರಕ್ಷಕ ದಳ ಸೆಕಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ, ಸ್ಥಳೀಯ ಪ್ರಮುಖರಾದ ಮಾರ್ಕೋಡು ಸುಧೀರಕುಮಾರ ಶೆಟ್ಟಿ, ದಿನೇಶ್‌ ಕಾಮತ್‌, ಕೃಷ್ಣದೇವ ಕಾರಂತ್ ಕೋಣಿ, ಬುದ್ದರಾಜ್‌ ಶೆಟ್ಟಿ, ಡಾ.ಸುಧಾಕರ ನಂಬಿಯಾರ್‌, ಮಹೇಶ್ ಪೂಜಾರಿ ಕೋಡಿ, ರಮೇಶ್ ಭಟ್, ಗುರುರಾಜ್ ರಾವ್, ಪ್ರಭಾಕರ ಶೆಟ್ಟಿ ವಕ್ವಾಡಿ, ಡಿವೈಎಸ್‌ಪಿ ಬಿ.ಪಿ.ದಿನೇಶ್‌ಕುಮಾರ, ಸರ್ಕಲ್ ಇನ್ಸ್‌ಪೆಕ್ಟರ್‌ ಮಂಜಪ್ಪ, ಉಪನಿರೀಕ್ಷಕ ಹರೀಶ್ ಆರ್. ನಾಯ್ಕ್‌ ಇದ್ದರು.

ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿಯ ರಥಾರೋಹಣದ ಸಂದರ್ಭದಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ಕರಾವಳಿಯಲ್ಲಿ ಮರಳುಗಾರಿಕೆ ನಿಷೇಧದಿಂದಾಗಿ ವ್ಯಾಪಾರ ವಹಿವಾಟುಗಳಿಲ್ಲದೆ ಜನರ ಜೇಬೆಲ್ಲಾ ಖಾಲಿಖಾಲಿಯಾಗಿದ್ದು, ಮರಳುಗಾರಿಕೆಯ ನಿಷೇಧದ ಬಿಸಿ ಕೊಡಿ ಹಬ್ಬಕ್ಕೂ ತಟ್ಟಿದೆ. ಅಲ್ಲದೇ ವಾರದ ಮಧ್ಯಭಾಗದಲ್ಲಿ ರಥೋತ್ಸವ ಬಂದಿರುವುದು ಹಾಗೂ ಜನರಲ್ಲಿ ಜಾತ್ರಾ ಮಹೋತ್ಸವಗಳ ಆಸಕ್ತಿ ಕಡಿಮೆಯಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

ವಿದ್ಯುತ್ ಅಲಂಕಾರ, ಪ್ರತಿಕ್ರತಿಗಳು ಆಕರ್ಷಣೆ..!
ಪ್ರಸಿದ್ಧವಾದ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವೈಭವದ ಬ್ರಹ್ಮ ರಥೋತ್ಸವದಲ್ಲಿ ಅತ್ಯಾಕರ್ಷಣೀಯವಾಗಿರುವುದು ವಿದ್ಯುತ್ ದೀಪಾಲಂಕಾರ ಮತ್ತು ಕಟ್ಟೇ ಫ್ರೆಂಡ್ಸ್ ಹಾಗೂ ಸಂಘಟನೆಗಳು ಮಾಡುವ ವಿವಿಧ ಕಲಾಕ್ರತಿಗಳು.

ಈ ಬಾರಿ ರಾಮನಾಥಗೋಳಿ ಕಟ್ಟೆ ಪ್ರೆಂಡ್ಸ್ ಅವರು ಆದಿಯೋಗಿ ಪ್ರತಿಕ್ರತಿ ಮಾಡಿದ್ದು ಇದನ್ನು ಗೋಪಾಡಿಯ ಜೀವಿ ವೆಂಕಟೇಶ್ ಅಚಾರ್ಯ ಹಾಗೂ ವಿನೇಂದ್ರ ಆಚಾರ್ಯ ತಂಡ ನಿರ್ಮಿಸಿದ್ದರು. ಕೋಟೇಶ್ವರ ಮೀನು ಮಾರುಕಟ್ಟೆ ಎದುರು ಜಿ.ಜಿ.ಎಸ್ ಫ್ರೆಂಡ್ಸ್ ಅವರು ಸರ್ಧಾರ್ ವಲ್ಲಭಬಾಯಿ ಪಟೇಲ್ ಮತ್ತು ಪಿರಂಗಿ ಕಲಾಕ್ರತಿ ರಚಿಸಿದ್ದು ಆಕರ್ಷಣೀಯವಾಗಿತ್ತು. ಪಿರಂಗಿಯನ್ನು ಬಗ್ವಾಡಿಯ ಮಹಿಷ ಮರ್ದಿನಿ ಯುವಕಮಂಡಲದವರು ರಚಿಸಿದ್ದು ಮಾರ್ಕೋಡಿನ ರತ್ನಾಕರ ಪಟೇಲ್ ಪ್ರತಿಕ್ರತಿ ನಿರ್ಮಿಸಿದ್ದಾರೆ. ನಾಗಬನ ಕಟ್ಟೆ ಫ್ರೆಂಡ್ಸ್ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಹಲವು ಸಂಘಟನೆಗಳು ವಿದ್ಯುತ್ ದೀಪಾಲಂಕಾರ ವುಯವಸ್ಥೆ ಮಾಡಿದ್ದು ಆಕರ್ಷಣೀಯವಾಗಿದೆ.

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

Comments are closed.