ಮನೋರಂಜನೆ

ರಾಜ್ಯ ಚಲನಚಿತ್ರ ಪ್ರಶಸ್ತಿ: 2ನೇ ‘ಅತ್ಯುತ್ತಮ ಚಿತ್ರ ಪ್ರಶಸ್ತಿ’ಯನ್ನು ಮುಡಿಗೇರಿಸಿಕೊಂಡ ಹರೀಶ್ ಶೇರಿಗಾರ್ ನಿರ್ಮಾಣದ ‘ಮಾರ್ಚ್-22’ ಚಿತ್ರ

Pinterest LinkedIn Tumblr

2ನೇ ‘ಅತ್ಯುತ್ತಮ ಚಿತ್ರ-‘ಅತ್ಯುತ್ತಮ ಗೀತಾ ರಚನಕಾರ’ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡ ‘ಮಾರ್ಚ್-22’

ಬೆಂಗಳೂರು: 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ‘ಶುದ್ಧಿ’ ಸಿನಿಮಾ ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದ್ದರೆ, ‘ಮಾರ್ಚ್-22’ ಸಿನಿಮಾ 2ನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಇದೇ ಸಿನೆಮಾದ ‘ಮುತ್ತು ರತ್ನದ ಪ್ಯಾಟೆ’ ಎನ್ನುವ ಹಾಡನ್ನು ಬರೆದಿರುವ ಜೆ.ಎಂ.ಪ್ರಹ್ಲಾದ್ ಅವರಿಗೆ ‘ಅತ್ಯುತ್ತಮ ಗೀತಾ ರಚನಕಾರ’ ಪ್ರಶಸ್ತಿ ಕೂಡ ಬಂದಿದೆ.

ACME ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಖ್ಯಾತ ಉದ್ಯಮಿ ಹಾಗೂ ಹೆಸರಾಂತ ಹಿನ್ನೆಲೆ ಗಾಯಕ ಹರೀಶ್ ಶೇರಿಗಾರ್ ಹಾಗು ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಾಣದಲ್ಲಿ, ಕೋಡ್ಲು ರಾಮಕೃಷ್ಣ ನಿರ್ದೇಶನದಲ್ಲಿ ಮೂಡಿಬಂದ ‘ಮಾರ್ಚ್ 22’ ಚಿತ್ರ ಕನ್ನಡ ಚಿತ್ರರಂಗದಲ್ಲಿ ಅಪಾರ ಮೆಚ್ಚುಗೆ, ಉತ್ತಮ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ವಿಭಿನ್ನ ಕಥಾಹಂದರವನ್ನು ಇಟ್ಟುಕೊಂಡು ಹರೀಶ್ ಶೇರಿಗಾರ್ ನಿರ್ಮಿಸಿರುವ ‘ಮಾರ್ಚ್ 22’ ಚಿತ್ರ ಕರ್ನಾಟಕವಲ್ಲದೇ ಯುಎಇಯ ದುಬೈ, ಅಬುಧಾಬಿ, ಶಾರ್ಜಾದಲ್ಲಿ ಹಾಗು ಒಮಾನಿನ ಮಸ್ಕತ್ತಿನಲ್ಲಿ ಬಿಡುಗಡೆಗೊಂಡು ಕನ್ನಡ ಸಿನಿ ರಸಿಕರ ಮನಗೆದ್ದಿತ್ತು.

ಜೆ.ಎಂ.ಪ್ರಹ್ಲಾದ್ ಅವರ ‘ಮುತ್ತು ರತ್ನದ ಪ್ಯಾಟೆ’ ಎನ್ನುವ ಹಾಡಿಗೆ ’65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ ಪ್ರಧಾನ ಕಾರ್ಯಕ್ರಮದಲ್ಲಿ ‘ಅತ್ಯುತ್ತಮ ಗೀತಾ ರಚನಕಾರ’ ಪ್ರಶಸ್ತಿ ಬಂದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಹಿಂದೂ-ಮುಸ್ಲಿಮರ ಮಧ್ಯೆಗಿನ ಸೌಹಾರ್ದತೆ, ಸಾಮರಸ್ಯವನ್ನು ಸಾರುವ ಕಥೆಯನ್ನು ಹೊಂದಿರುವ ‘ಮಾರ್ಚ್ 22’ ಚಿತ್ರ 10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಆಯ್ಕೆಯಾಗುವ ಮೂಲಕ ಪ್ರದರ್ಶನ ಕಂಡು ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು.

ಚಿತ್ರದಲ್ಲಿ ಅನಂತ್ ನಾಗ್, ಗೀತಾ ಜೊತೆಗೆ ಶರತ್ ಲೋಹಿತಾಶ್ವ, ಅಶೀಷ್ ವಿದ್ಯಾರ್ಥಿ, ಸಾಧು ಕೋಕಿಲಾ, ಜೈಜಗದೀಶ್, ರವಿ ಕಾಲೇ, ವಿನಯಾ ಪ್ರಸಾದ್, ಪದ್ಮಜಾ ರಾವ್, ರಮೇಶ್ ಭಟ್, ಶ್ರೀನಿವಾಸ್ ಮೂರ್ತಿ, ರವೀಂದ್ರನಾಥ್, ಆರ್ಯವರ್ಧನ್ ಮತ್ತು ಕಿರಣ್ ರಾಜ್, ಮೇಘಶ್ರೀ, ದೀಪ್ತಿ ಶೆಟ್ಟಿ, ಕಿಶೋರ್, ಸೃಜನ್ ರೈ, ಶಾಂತಾ ಆಚಾರ್ಯ, ದುಬೈಯ ರಂಗಭೂಮಿ ಕಲಾವಿದರಾದ ಚಿದಾನಂದ ಪೂಜಾರಿ, ಸುವರ್ಣ ಸತೀಶ್, ಪ್ರಶೋಭಿತ ಮುಂತಾದವರು ನಟಿಸಿದ್ದಾರೆ.

ದುಬೈನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಹೆಸರಾಂತ ಉದ್ಯಮಿ ಹಾಗೂ ಕನ್ನಡಿಗ ಪದ್ಮಶ್ರೀ ಡಾ. ಬಿ.ಆರ್ ಶೆಟ್ಟಿ ಅವರು ಚಿತ್ರದ ‘ಮುತ್ತು ರತ್ನದ ಪ್ಯಾಟೆ’ ಹಾಡೊಂದರಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

ಮಣಿಕಾಂತ್ ಕದ್ರಿ ಹಾಗೂ ರವಿಶೇಖರ್ ಸಂಗೀತ ನೀಡಿರುವ ಈ ಚಿತ್ರದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೈಲಾಶ್ ಕೇರ್, ಕಾರ್ತಿಕ್, ಅನುರಾಧ ಭಟ್, ಹರೀಶ್ ಶೇರಿಗಾರ್, ರವಿಶೇಕರ್ ರಾಜಮಗ, ಅಕ್ಷತಾ ರಾವ್ ಅವರು ಹಾಡಿದ್ದು, ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿವೆ.

Comments are closed.