ಕರಾವಳಿ

ಮಡಿಕೇರಿಯಲ್ಲಿ ನಿಷೇಧಾಜ್ಞೆ ನಡುವೆಯೂ ಭಾರೀ ಪ್ರತಿಭಟನೆ – ಬಸ್ಸಿಗೆ ಕಲ್ಲು ತೂರಾಟ – ಹಲವರ ಬಂಧನ

Pinterest LinkedIn Tumblr

ಮಡಿಕೇರಿ, ನವೆಂಬರ್.10: ರಾಜ್ಯ ಸರಕಾರದ ವತಿಯಿಂದ ವಿಧಾನಸೌಧ ಸಹಿತ ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಶುಕ್ರವಾರ ಟಿಪ್ಪು ಜಯಂತಿ ಆಚರಿಸಲಾಗುತ್ತಿದ್ದು, ಹಲವು ಪ್ರತಿಭಟನಾ ಕಾರರನ್ನು ವಶಕ್ಕೆ ಪಡೆಯಲಾಗಿದೆ.

ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿ ಮಡಿಕೇರಿಯಲ್ಲಿ ಪ್ರತಿಭಟನೆ,ಬಸ್ಸ್ ಗಳಿಗೆ ಕಲ್ಲು ತೂರಾಟ ನಡೆದಿದೆ. ಮಡಿಕೇರಿಯಲ್ಲಿ ನಿಷೇಧಾಜ್ಞೆಯ ಹೊರತಾಗಿಯೂ ಭಾರೀ ಪ್ರತಿಭಟನೆಗಳನ್ನು ನಡೆಸಲಾಗುತ್ತಿದ್ದು ಹಲವರನ್ನು ವಶಕ್ಕೆ ಪಡೆಯಲಾಗಿದೆ.

ಮಡಿಕೇರಿಯ ಕಾಲೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲೆಸೆದ ಪರಿಣಾಮ ಬಸ್ಸಿನ ಗಾಜುಗಳು ಪುಡಿಯಾಗಿವೆ.ಮಡಿಕೇರಿಯಿಂದ ಕಾಲೂರು ಎಂಬಲ್ಲಿಗೆ ತೆರಳುತ್ತಿದ್ದ ಬಸ್ಸಿಗೆ ಕಲ್ಲೆಸೆಯಲಾಗಿದೆ. ಇದರಿಂದ ಬಸ್ಸಿನ ಮುಂಭಾಗದ ಹಾಗೂ ಬಲಬದಿಯ ಮೂರು ಗಾಜುಗಳಿಗೆ ಹಾನಿಯಾಗಿರುವುದು ವರದಿಯಾಗಿದೆ.

ಕಡಗದಾಳುವಿನಿಂದ ಸೋಮವಾರಪೇಟೆಗೆ ತೆರಳುತ್ತಿದ್ದ ಸರಕಾರಿ ಬಸ್ಸಿಗೂ ಕಲ್ಲೆಸೆಯಲಾಗಿದೆ. ಇಲ್ಲಿನ ಅದ್ದೂರು ಕಟ್ಟೆ ಎಂಬಲ್ಲಿ ಬಸ್ಸಿಗೆ ಕಲ್ಲೆಸೆದು ಹಾನಿಗೊಳಿಸಲಾಗಿದೆ.

ಕೆಲೆವೆಡೆ ರಸ್ತೆಗಳಿಗೆ ಮರಗಳನ್ನು ಕಡಿದುರುಳಿಸಲಾಗಿತ್ತು. ಅವುಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಜಿಲ್ಲಾದ್ಯಂತ ಕಳೆದ ಬಾರಿ ಟಿಪ್ಪು ಜಯಂತಿ ವೇಳೆ ಘರ್ಷಣೆಯಲ್ಲಿ ಸಾವನ್ನಪ್ಪಿದ ಕುಟ್ಟಪ್ಪ ಅವರ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸಂಪೂರ್ಣ ಬಂದ್‌ ವಾತಾವರಣ ಕಂಡು ಬಂದಿದೆ.

ಇದೇ ವೇಳೆ ಟಿಪ್ಪು ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಲು ಮುಂದಾದ ಶಾಸಕ ಅಪ್ಪಚ್ಚು ರಂಜನ್ ಸಹಿತ ಹಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಟಿಪ್ಪು ಜಯಂತಿ ಹಿನ್ನೆಲಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾದ್ಯಂತ 2000ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾದ್ಯಂತ ಶನಿವಾರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

Comments are closed.