ಕರಾವಳಿ

ತಮಿಳುನಾಡಿನಲ್ಲಿ ಕುಂದಾಪುರ ಮೂಲದ ಚಾಲಕನಿಗೆ ಹಲ್ಲೆ ನಡೆಸಿ ವಾಹನ ಜಖಂ ಮಾಡಿದ ವಿಡಿಯೋ ವೈರಲ್

Pinterest LinkedIn Tumblr

 

 

ಕುಂದಾಪುರ: ಕಾವೇರಿ ನದಿ ನೀರು ತಮಿಳುನಾಡಿಗೆ ಬಿಡುವ ವಿಚಾರದಲ್ಲಿ ಬೆಂಗಳೂರು ಸೇರಿದಂತೆ ವಿವಿದೆಡೆ ಗಲಾಟೆಗಳು ಆರಂಭವಾಗಿದೆ. ಕನ್ನಡಿಗರ ರೋಷಕ್ಕೆ ಕಾರಣವಾದ ಮುಖ್ಯ ಸಂಗತಿಯೆಂದರೇ ತಮಿಳುನಾಡಿನಲ್ಲಿ ಕರ್ನಾಟಕ ಮೂಲದ ವಾಹನಗಳ ಮೇಲೆ ನಡೆದ ದಾಳಿ, ಅದರಲ್ಲೂ ಕುಂದಾಪುರ ಮೂಲದ ವಾಹನ ಚಾಲಕನಿಗೆ ಥಳಿಸಿ ವಿಡಿಯೋ ವೈರಲ್ ಮಾಡಿದ್ದು ಕನ್ನಡಿಗರನ್ನು ಕೆರಳಿಸಿದೆ. ಕುಂದಾಪುರ ತಂಡದ ಚಾಲಕ ಮಂಜುನಾಥ ಕುಲಾಲ ಅವರ ಮೇಲೆ ತಮಿಳರು ಅಮಾನವೀಯ ಹಲ್ಲೆ ಮಾಡಿ ಇದನ್ನು ವೀಡಿಯೊ ಚಿತ್ರೀಕರಣ ನಡೆಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಬಳಿಕ ಎಲ್ಲೆಡೆ ಗಲಾಟೆ ಆರಂಭಗೊಂಡಿತು.

ತನ್ನ ತಂದೆ ತಾಯಿ ಹಾಗೂ ಮನೆಯ ಆಸುಪಾಸಿನ ಒಟ್ಟು 12 ಮಂದಿಯೊಂದಿಗೆ 38 ವರ್ಷ ಪ್ರಾಯದ ಕುಂದಾಪುರದ ರಟ್ಟಾಡಿ ನಿವಾಸಿ ಮಂಜುನಾಥ ಕುಲಾಲ್ ಎನ್ನುವವವರು ಕೋಣಿಯ ಆರ್ಸಿ ಕೋರ್ವಾಲ್ ಎನ್ನುವ ತನ್ನ ಸ್ನೇಹಿತನ ಟೆಂಪೋ ಟ್ರಾವೆಲ್ಲರ್ ವಾಹನದಲ್ಲಿ ರಾಮೇಶ್ವರ ಹಾಗೂ ತಮಿಳುನಾಡಿನ ವಿವಿಧ ದೇವಸ್ಥಾನಗಳಿಗೆ ಯಾತ್ರೆಗಾಗಿ ತೆರಳಿದ್ದರು. ಸೆ.9 ಶುಕ್ರವಾರದಂದು ತೆರಳಿದ ಅವರು ಒಂದು ವಾರಗಳ ಯಾತ್ರೆ ಮಾಡಿ ವಾಪಾಸ್ಸಾಗುವ ಯೋಜನೆ ರೂಪಿಸಿದ್ದರು. ಕನ್ಯಾಕುಮಾರಿ, ತ್ರಿವೆಂಡ್ರಮ್ ಮಾರ್ಗವಾಗಿ ಭಾನುವಾರ ರಾಮೇಶ್ವರ ತೆರಳಿದ ಇವರ ತಂಡವು ಅಲ್ಲಿ ದರ್ಶನ ಮುಗಿಸಿ ಸೋಮವಾರ ಮಧುರೈಗೆ ತೆರಳಲು ಯೋಚನೆ ನಡೆಸಿದ್ದರು. ಆದರೇ ಆಗಿದ್ದು ಮಾತ್ರ ಬೇರೆ…

tamilunadu_kundapura-manjunatha_halle-1 tamilunadu_kundapura-manjunatha_halle-2 tamilunadu_kundapura-manjunatha_halle-5

ಸೋಮವಾರ ಬೆಳಿಗ್ಗೆ ನಾಮ್‌ ತಮಿಳಾರ್‌ ಇಯಕ್ಕಂ ಎಂಬ ತಮಿಳು ಮೂಲದ ಸಂಘಟನೆಯ ಒಂದಷ್ಟು ಮಂದಿ ಸದಸ್ಯರು ರಾಮೇಶ್ವರದಲ್ಲಿ ನಿಲ್ಲಿಸಿದ್ದ ಕರ್ನಾಟಕ ನೋಂದಣಿಯ ವಾಹನಗಳಿಗೆ ಮತ್ತು ಅದರಲ್ಲಿದ್ದ ಕನ್ನಡಿಗರಿಗೆ ಮನಸೋ ಇಚ್ಛೆ ದಾಳಿ ನಡೆಸಿದರು. ಅದನ್ನು ಸಂಘಟನೆಯವರೇ ವೀಡಿಯೊ ಮಾಡಿ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ದಾಳಿಯಿಂದಾಗಿ ಮಂಜುನಾಥ ಅವರ ಕಿವಿಗೆ ಗಾಯವಾಗಿದೆ. ಉಳಿದಂತೆ ದೊಣ್ಣೆ ಮತ್ತು ಕೈಯಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ದಾಳಿ ನಡೆಸಿ ದಿಗ್ಬಂಧನ ಹಾಕಿದ ಪರಿಣಾಮ ಮಂಜುನಾಥ ಅವರ ವಾಹನದಲಿ ತೆರಳಿದ್ದ 12 ಮಂದಿ ಅತಂತ್ರರಾಗಿದ್ದರು. ಮಂಜುನಾಥ ಅವರ ತಂದೆ ಶೀನ ಕುಲಾಲ, ತಾಯಿ ಗಿರಿಯಮ್ಮ, ಅಮಾಸೆಬೈಲು ಮೂಲದ ವಿಠಲ ಶೆಟ್ಟಿ ಹಾಗೂ ಪತ್ನಿ ಮತ್ತು ಮಗಳು ಹಾಗೂ ಗಂಗೊಳ್ಳಿಯ ಕಾಮತ್‌ ಕುಟುಂಬದ ಮೂವರನ್ನು ಸುರಕ್ಷಿತಗೊಳಿಸಲಾಗಿತ್ತು.

ಮಂಜುನಾಥ ತಂದೆ-ತಾಯಿ ಸಹಿತ ಇತರರು ಊರಿಗೆ….
ಸೋಮವಾರ ಘಟನೆ ನಡೆದ ತರುವಾಯ ಮಂಜುನಾಥ ತಮಿಳುನಾಡು ಪೊಲೀಸ್ ಠಾಣೆಗೆ ದೂರು ನೀಡಿದ್ದಲ್ಲದೇ ಅವರ ರಕ್ಷಣೆಯಲ್ಲಿದ್ದರು. ಮಂಜುನಾಥ ಅವರ ಜೊತೆಗೆ ಬಂದಿದ್ದ ಅವರ ತಂದೆ ತಾಯಿ ಸೇರಿದಂತೆ ಇತರ 12 ಮಂದಿ ಬೆಳಿಗ್ಗೆನಿಂದ ಮಂಗಳವಾರ ಮುಂಜಾನೆಯವರೆಗೂ ಲಾಡ್ಜೊಂದರಲ್ಲಿ ತಂಗಿದ್ದು ಮಂಜುನಾಥ ಅವರ ಪರಿಚಿತರೋರ್ವರ ಸಹಕಾರ ಪಡೆದು ಮಂಗಳವಾರ ಮುಂಜಾನೆ ೪ ಗಂಟೆಗೆ ತಮಿಳುನಾಡಿನ ವೆರ್ನಕುಲಂ ತಲುಪಿ ಅಲ್ಲಿಂದ ರೈಲಿನಲ್ಲಿ ಕುಂದಾಪುರದತ್ತ ಪ್ರಯಾಣ ಬೆಳಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ‘ಕನ್ನಡಿಗ ವರ್ಲ್ಡ್’ಗೆ ಸ್ವತಃ ಮಂಜುನಾಥ ತಿಳಿಸಿದ್ದಾರೆ.

ಹಿಗ್ಗಾಮುಗ್ಗಾ ಹೊಡೆದರು…
ಸೋಮವಾರ ಬೆಳಿಗ್ಗೆ ನಾನು ಪಾರ್ಕಿಂಗ್‌ ಪ್ರದೇಶಕ್ಕೆ ಬಂದು ವಾಹನ ನಿಲ್ಲಿಸಿ ವಾಹನದಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದೆ. 7 ಗಂಟೆ ಸುಮಾರಿಗೆ ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಬಂದ 10-12 ಮಂದಿ ಇದ್ದ ತಂಡವೊಂದು ಕರ್ನಾಟಕ ನೋಂದಣಿಯ ವಾಹನಗಳ ಮೇಲೆ ಏಕಾಏಕಿ ದಾಳಿ ನಡೆಸಲಾರಂಭಿಸಿತು. ನನ್ನ ವಾಹನಕ್ಕೂ ಹೊಡೆದರು. ಗಾಜುಗಳನ್ನು ಪುಡಿ ಮಾಡಿದರು, ಹೆಡ್‌ ಲೈಟ್‌ ಒಡೆದು ಹಾಕಿ ವಾಹನಕ್ಕೆ ಮನಬಂದಂತೆ ಹೊಡೆದರು. ಅನಂತರ ನನ್ನ ಮೇಲೆಯೂ ಹಲ್ಲೆ ನಡೆಸಿದರು. ಅಲ್ಲಿದ್ದ ಇತರರ ಮೇಲೆಯೂ ಹಲ್ಲೆ ಹಿಗ್ಗಾಮುಗ್ಗಾ ನಡೆಸಿದರು. ಸದ್ಯ ಗೆಳೆಯ ಹಾಗೂ ಟೆಂಪೋ ಟ್ರಾವೆಲ್ಲರ್ ಮಾಲೀಕರಾದ ಅರ್ಸಿ ಕೋರ್ವಲ್ ಕೂಡ ತನ್ನ ಜೊತೆಗಿದ್ದು ಧೈರ್ಯ ತುಂಬುತ್ತಿದ್ದಾರೆಂದು ಮಂಜುನಾಥ ‘ಕನ್ನಡಿಗ ವರ್ಲ್ಡ್’ಗೆ ತಿಳಿಸಿದ್ದಾರೆ.

ಬಿಸ್ಕೀಟ್-ನೀರು ಮಾತ್ರ ಗತಿ…
ಸದ್ಯ ತಾನು ರಾಮನಾಥ ಪುರ ಎಂಬಲ್ಲಿ ತಂಗಿದ್ದು ಕರ್ನಾಟಕ ಮೂಲದ  2 ಬಸ್ಸು ಸೇರಿದಂತೆ ಒಟ್ಟು 8 ವಾಹನಗಳು ಇಲ್ಲಿ ರಕ್ಷಣೆಗೊಳಪಟ್ಟಿದೆ. ತಮಿಳುನಾಡು ಪೊಲೀಸರು ಎಸ್ಕಾರ್ಟ್ ಮೂಲಕ ಕರ್ನಾಟಕ ಗಡಿ ತಲುಪಿಸುವ ಭರವಸೆ ನೀಡಿದ್ದು ಅದಕ್ಕಾಗಿ ಕಾಯುತ್ತಿದ್ದೇವೆ. ಬಿಸ್ಕೀಟ್ ಹಾಗೂ ನೀರು ಬಿಟ್ಟರೇ ಇನ್ನೇನು ತಿನ್ನಲು ಸಿಗುತ್ತಿಲ್ಲ. ತುಂಬಾನೇ ಕಷ್ಟವಾಗುತ್ತಿದೆ’ ಎಂದು ತಮ್ಮ ನೋವನ್ನು ಮಂಜುನಾಥ ಹೇಳಿದ್ದಾರೆ.

‘ಕಾವೇರಿ ನಮ್ಮದು, ತಮಿಳರದ್ದಲ್ಲ’…
ವಾಹನ ಜಖಂಗೊಳಿಸಿ ನನ್ನ ಮೇಲೆ ಹಲ್ಲೆ ನಡೆಸಿದ ಹತ್ತಾರು ಮಂದಿ ಇದ್ದ ಆ ಸಂಘಟನೆಯವರು ನನ್ನ ಬಳಿ `ಕಾವೇರಿ ನದಿ ತಮಿಳುನಾಡಿಗೆ ಸೇರಿದ್ದು. ಕಾವೇರಿ ತಮಿಳರದ್ದು’ ಎಂದು ಹೇಳುವಂತೆ ಧಮಕಿ ಹಾಕಿದರು. ಆದರೇ ನಾನು ಅದನ್ನು ಹೇಳಿಲ್ಲ. ಕಾವೇರಿ ಎಂದಿಗೂ ಕನ್ನಡಿಗರದದ್ದು, ಬದಲಾಗಿ ತಮಿಳರದ್ದಾಗಲು ಸಾಧ್ಯವೇ ಇಲ್ಲ. ಆದ್ದರಿಂದ ನಾನು ಎಷ್ಟೇ ಹೊಡೆದರೂ ಆ ಮಾತು ಹೇಳಿಲ್ಲ. ಈಗಲೂ ಹೇಳುತ್ತೇನೆ, ‘ಕಾವೇರಿ ನಮ್ಮದು’.– ಇದು ಮಂಗಳವಾರ ಬೆಳಿಗ್ಗೆ ‘ಕನ್ನಡಿಗವರ್ಲ್ಡ್’ ಜೊತೆ ದೂರವಾಣಿಯಲ್ಲಿ ಮಾತನಾಡಿದ ಮಂಜುನಾಥ ಅವರ ಮಾತುಗಳು.

ಸಂದರ್ಶನ: ಯೋಗೀಶ್ ಕುಂಭಾಸಿ

Comments are closed.