https://youtu.be/7_HodRpeKws
ಚೆನ್ನೈ: ಅನಾರೋಗ್ಯದಿಂದಾಗಿ ತೀವ್ರನಿಗಾ ಘಟಕದಲ್ಲಿರುವ 82ರ ಹರೆಯದ ತಂದೆಯ ಐವಿಲೈನ್ ಅನ್ನು ತಪ್ಪಿಸಿ, ಆಸ್ತಿ ಪತ್ರಕ್ಕೆ ಸಹಿಹಾಕಿಸಿಕೊಳ್ಳಲು ಹೆತ್ತ ಮಗಳೇ ಯತ್ನಿಸಿದ ಘಟನೆ ಸಿಸಿ ಟಿ.ವಿಯಲ್ಲಿ ಸೆರೆಯಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹೃದಯ ಸಂಬಂಧಿ ಕಾಯಿಲೆಗೆ ತುತ್ತಾದ ವ್ಯಕ್ತಿ ಚಿಕಿತ್ಸೆಗಾಗಿ ಸ್ವತಃ ತನ್ನ ಮಗನ ಆಸ್ಪತ್ರೆಗೆ ದಾಖಲಾಗಿದ್ದರು.. ಈ ಸಂದರ್ಭದಲ್ಲಿ ಡಾ. ಜಯಸುಧಾ ತನ್ನ ಇಬ್ಬರು ಮಕ್ಕಳೊಂದಿಗೆ ಆಸ್ಪತ್ರೆಗೆ ಆಗಮಿಸಿದ್ದರು. ತೀವ್ರನಿಗಾ ಘಟಕದೊಳಗೆ ಪ್ರವೇಶಿಸಿದ ಜಯಸುಧಾ, ತಂದೆಯ ಜತೆಗೆ ವೈಯಕ್ತಿಕ ಸಮಾಲೋಚನೆ ನಡೆಸುವುದಾಗಿ ಸ್ಥಳದಲ್ಲಿದ್ದ ಸಿಬ್ಬಂದಿಯನ್ನು ಹೊರಕ್ಕೆ ಕಳುಹಿಸಿ ಬಾಗಿಲು ಹಾಕಿಕೊಂಡರು. ವೃದ್ಧನ ಕೈಗೆ ಹಾಕಿದ್ದ ಐವಿ ಲೈನ್ ತಪ್ಪಿಸಿ, ಆಸ್ತಿ ಪತ್ರಗಳಿಗೆ ಒತ್ತಾಯಪೂರ್ವಕವಾಗಿ ಬೆರಳಚ್ಚು ಪಡೆಯಲು ಜಯಸುಧಾ ಹಾಗೂ ಆಕೆಯ ಇಬ್ಬರು ಪುತ್ರರು ಯತ್ನಿಸಿದರು. ಇದರಲ್ಲಿ ಯಶಸ್ವಿ ಕೂಡಾ ಆಗಿದ್ದು, ಓರ್ವ ಪುತ್ರ ಈ ಆಸ್ತಿ ಪತ್ರವನ್ನು ತನ್ನ ಅಂಗಿಯ ಒಳಗೆ ಯಾರಿಗೂ ತಿಳಿಯದ ಹಾಗೆ ಬಚ್ಚಿಟುಕೊಂಡ.
ಘಟನೆ ನಡೆದ ಎರಡು ತಿಂಗಳಲ್ಲಿ ಚಿಕಿತ್ಸೆ ಫಲಿಸದೆ ಈ ಹಿರಿಯ ವ್ಯಕ್ತಿ ಮೃತರಾಗಿದ್ದರು. ಅಷ್ಟಕ್ಕೂ ಈ ಘಟನೆ ನಡೆದಿದ್ದು, 2015ರ ಸೆಪ್ಟೆಂಬರ 5ರಂದು (5-9-2015). ಇದೀಗ ಸಿಸಿಟಿವಿಯ ದೃಶ್ಯಾವಳಿ ಪರೀಕ್ಷಿಸಿದ ಮೃತ ವ್ಯಕ್ತಿಯ ಪುತ್ರ ಹಾಗೂ ಆಸ್ಪತ್ರೆಯ ಮುಖ್ಯಸ್ಥ ಡಾ. ಆರ್. ಜಯಪ್ರಕಾಶ್ ದೃಶ್ಯಾವಳಿಯನ್ನು ಬಿಡುಗಡೆಮಾಡಿ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ಕುರಿತು ಪೊಲೀಸ್ ಅಧಿಕಾರಿ ಥಿಯಾಗರಾಜನ್ ಪ್ರತಿಕ್ರಿಯಿಸಿ, ಜಯಸುಧಾ ಹಾಗೂ ಆಕೆಯ ಇಬ್ಬರು ಪುತ್ರ ಮೇಲೆ ಕೊಲೆ ಪ್ರಯತ್ನದ ಆರೋಪದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
Comments are closed.