ರಾಷ್ಟ್ರೀಯ

ಪಂಜಾಬ್‌ ಉಗ್ರ ದಾಳಿಗೆ ಎಸ್ಪಿ ಸೇರಿ 6 ಮಂದಿ ಬಲಿ, ಒಬ್ಬ ಉಗ್ರನ ಸಾವು…ವಿಡಿಯೋ ನೋಡಿ

Pinterest LinkedIn Tumblr

soldiers

ಗುರುದಾಸ್‌ಪುರ: ಎಂಟು ವರ್ಷಗಳ ನಂತರ ಪಂಜಾಬ್‌ನಲ್ಲಿ ಉಗ್ರರ ಗುಂಡು ಮತ್ತೆ ಸದ್ದು ಮಾಡಿದೆ. ಪಾಕಿಸ್ತಾನದ ಗಡಿ ಭಾಗದ ಗುರುದಾಸ್‌ಪುರದಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್‌ ಹಾಗೂ ಪೊಲೀಸ್‌ ಠಾಣೆ ಮೇಲೆ ಸೇನಾ ಸಮವಸ್ತ್ರ ಧರಿಸಿರುವ ಉಗ್ರರು ದಾಳಿ ನಡೆಸಿದ್ದಾರೆ.

ದಾಳಿಯಲ್ಲಿ ಮೂವರು ನಾಗರಿಕರು, ಎಸ್ಪಿ ಬಲ್ಜೀತ್‌ ಸಿಂಗ್‌ ಸೇರಿ ಮೂವರು ಪೊಲೀಸರು ಮೃತಪಟ್ಟಿದ್ದಾರೆ. ಇತರ 8 ಮಂದಿ ಗಾಯಗೊಂಡಿದ್ದಾರೆ. ಸುಮಾರು 10 ತಾಸಿನಿಂದ ಮುಂದುವರಿದಿರುವ ಗುಂಡಿನ ಚಕಮಕಿಯಲ್ಲಿ ಒಬ್ಬ ಉಗ್ರ ಮೃತಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.

ದಿನಾನಗರ್‌ ಪೊಲೀಸ್‌ ಠಾಣೆ ಬಳಿಯ ಖಾಲಿ ಕಟ್ಟಡದಲ್ಲಿ ಅಡಗಿರುವ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ‍ ಈ ಉಗ್ರ ದಾಳಿ ಹಿಂದೆ ಯಾವ ಸಂಘಟನೆಯ ಕೈವಾಡ ಇದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆದರೆ, ಪಾಕಿಸ್ತಾನ ಮೂಲದ ಲಷ್ಕರೆ ತಯ್ಬಾ ಈ ದಾಳಿ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಜಮ್ಮುವಿನಲ್ಲಿ ಈ ಹಿಂದೆ ಸಂಘಟನೆ ಇದೇ ರೀತಿಯ ದಾಳಿ ನಡೆಸಿತ್ತು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಖಲಿಸ್ಥಾನ್‌ ಉಗ್ರರು ದಾಳಿ ನಡೆಸಿರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂದು ಮೂಲಗಳು ಹೇಳಿವೆ.

ರೈಲು ರದ್ದು:

ಪಠಾನ್‌ಕೋಟ್-ಅಮೃತಸರ ಮಾರ್ಗದ ರೈಲು ಹಳಿಗಳ ಮೇಲೆ 5 ಸಜೀವ ಬಾಂಬ್‌ಗಳು ಪತ್ತೆಯಾದ ನಂತರ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.

ಕಟ್ಟೆಚ್ಚರ:

ದಾಳಿ ನಂತರ ಪಂಜಾಬ್‌ ಹಾಗೂ ಜಮ್ಮುವಿನ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ದಿಲ್ಲಿ, ಹರಿಯಾಣಾದಲ್ಲೂ ಹೈ ಅಲರ್ಟ್‌ ಘೋಷಿಸಲಾಗಿದೆ. ಪಂಜಾಬ್‌ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್ ಬಾದಲ್‌ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೊವಲ್‌ ಅವರೊಂದಿಗೆ ಗೃಹ ಸಚಿವ ರಾಜನಾಥ್‌ ಸಿಂಗ್‌ ಮಾತುಕತೆ ನಡೆಸಿದ್ದಾರೆ. ದಾಳಿ ಕುರಿತು ಸಂಸತ್ತಿನಲ್ಲಿ ಮಂಗಳವಾರ ಹೇಳಿಕೆ ನೀಡುವುದಾಗಿ ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ. ಒತ್ತೆ ಇಟ್ಟುಕೊಂಡಿರುವ ಬಗ್ಗೆ ಯಾವುದೇ ವರದಿ ಬಂದಿಲ್ಲ ಎಂದು ಗೃಹ ಸಚಿವಾಲಯದ ಸಹಾಯಕ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

2007ರಲ್ಲಿ ದಾಳಿ ನಡೆದಿತ್ತು:

2007 ಅಕ್ಟೋಬರ್‌ 14ರಂದು ಲೂಧಿಯಾನಾದ ಸಿನಿಮಾ ಮಂದಿರದಲ್ಲಿ ಶಕ್ತಿಶಾಲಿ ಬಾಂಬ್ ಸ್ಫೋಟಿಸಿ 30 ಮಂದಿ ಮೃತಪಟ್ಟಿದ್ದರು. 1980ರಿಂದ ಸಿಖ್‌ ಭಯೋತ್ಪಾದನೆಯಲ್ಲಿ ನಲುಗಿರುವ ರಾಜ್ಯದಲ್ಲಿ ನಡೆದಂಥ ಭೀಕರ ಉಗ್ರ ದಾಳಿ ಇದಾಗಿತ್ತು.

https://youtu.be/OHt4vi0ECB0

1 Comment

Write A Comment