ಕರಾವಳಿ

ಬಡವರನ್ನು ಮುಖ್ಯ ವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನ : ಶಾಸಕ ಕಾಮತ್

Pinterest LinkedIn Tumblr

ಮಂಗಳೂರು ಫೆಬ್ರವರಿ 26 : ನಗರದಲ್ಲಿ ಅಡುಗೆ ಅನಿಲ ವಂಚಿತ ಮನೆಗಳನ್ನು ಗುರುತಿಸಿ ಸೌಲಭ್ಯ ನೀಡಬೇಕು ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು.

ಅವರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮಂಗಳೂರು ಮಹಾನಗರಪಾಲಿಕೆಯ ವತಿಯಿಂದ ನಡೆದ ನಗರ ಬಡತನ ನಿರ್ಮೂಲನಾ ಕೋಶದಡಿ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಂಗಳೂರು ನಗರ ಪ್ರದೇಶವಾಗಿದ್ದರೂ ಕೂಡ ಅಡುಗೆ ಅನಿಲ ವಂಚಿತ ಮನೆಗಳಿರುವುದು ದುಖಃಕರ. ಹಾಗಾಗಿ ನಗರದಲ್ಲಿ ಅಡುಗೆ ಅನಿಲ ವಂಚಿತ ಮನೆಗಳನ್ನು ಗಮನಿಸಿದರೆ ತಕ್ಷಣ ಶಾಸಕರಿಗೆ ಅಥವಾ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ದಾಖಲೆಗಳು ಇಲ್ಲದ್ದಿದ್ದರೂ ಅದನ್ನು ಸರಿಪಡಿಸಿ ಅಗತ್ಯತೆಗಳನ್ನು ಪೂರೈಸಿಕೊಡಬೇಕು ಎಂದು ಹೇಳಿದರು.

ಬಡವರಿಗೆ ವಿವಿಧ ಯೋಜನೆಯಡಿ ಸವಲತ್ತುಗಳನ್ನು ವಿತರಿಸುವ ಮೂಲಕ ಸರಕಾರ ಜನರ ಕಣ್ಣೀರು ಒರೆಸುವ ಕಾರ್ಯ ಮಾಡುತ್ತಿದೆ. ಸರ್ಕಾರದ ಸವಲತ್ತುಗಳನ್ನು ಯೋಗ್ಯವಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು. ಮಹಾನಗರ ಪಾಲಿಕೆಯು ನಗರದ 873 ಫಲಾನುಭವಿಗಳನ್ನು ಗುರುತಿಸಿಕೊಂಡು ವಿವಿಧ ರೀತಿಯ ಸವಲತ್ತು ನೀಡುವ ಮೂಲಕ ಬಡವರ ಕಣ್ಣೀರು ಒರೆಸುವ ಕಾರ್ಯ ಮಾಡುತ್ತಿದೆ. ಈ ಕೆಲಸಕ್ಕೆ ನಾನು ಶ್ರಮಿಸಿದ ಎಲ್ಲಾ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದರು. ಇಂತಹ ಯೋಜನೆಗಳ ಮೂಲಕ ಬಡವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.

ಸಮಾಜದ ಜನರು ಕಷ್ಟದಲ್ಲಿಯೂ ಲವಲವಿಕೆಯಿಂದ ಜೀವನವನ್ನು ಸಾಗಿಸಬೇಕು ಎನ್ನುವ ಉದ್ದೇಶದಿಂದ ಇಂದು ಸರ್ಕಾರದ ವಿವಿಧ ಯೋಜನೆಗಳ ಅನ್ವಯ ಮಹಾನಗರ ಪಾಲಿಕೆ ವಿವಿಧ ಸವಲತ್ತುಗಳನ್ನು ನೀಡುವ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸುತ್ತಿದೆ. ಸರ್ಕಾರದ ಕೆಲಸ ದೇವರ ಕೆಲಸ ಎಂಬ ಧ್ಯೇಯದಂತೆ ಸರ್ಕಾರವು ಅನೇಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದೆ. ಇದು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿ, ಹಸಿವು ಮುಕ್ತ ಸಮಾಜ ನಿರ್ಮಾಣವಾಗುವುದೇ ಸರ್ಕಾರದ ಮುಖ್ಯ ಉದ್ದೇಶವಾಗಿರುತ್ತದೆ ಎಂದು  ಕಾಮತ್ ಹೇಳಿದರು.

ಕಾರ್ಯಕ್ರಮದಲ್ಲಿ ಒಟ್ಟು 873 ಫಲಾನುಭವಿಗಳಿಗೆ ಬಡತನ ನಿರ್ಮೂಲನ ಕೋಶದಡಿ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ನಗರ ಬಡತನ ನಿರ್ಮೂಲನಾ ಕೋಶದಡಿ 24.10% ಮೀಸಲು ನಿಧಿಯನ್ವಯ ಪಕ್ಕಾ ಮನೆ, ಒಳಚರಂಡಿ ವ್ಯವಸ್ಥೆ, ಶೌಚಾಲಯ ನಿರ್ಮಾಣ, ಮನೆ ದುರಸ್ಥಿ, ನಳ್ಳಿ ನೀರು, ಕ್ರೀಡಾ ಪ್ರೋತ್ಸಾಹ ಧನ ಸೇರಿ ಒಟ್ಟು 3 ಲಕ್ಷದ 54 ಸಾವಿರ ರೂಪಾಯಿಗಳ ಚೆಕ್‍ನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

ಮಂಗಳೂರು ಮಹಾನಗರ ಪಾಲಿಕೆಯ ನಗರ ಬಡತನ ನಿರ್ಮೂಲನಾ ಕೋಶದಡಿ 7.25% ಮೀಸಲು ನಿಧಿಯನ್ವಯ ಪಕ್ಕ ಮನೆ, ನಳ್ಳಿ ನೀರು, ಶೌಚಾಲಯ ನಿರ್ಮಾಣ, ಶಸ್ತ್ರ ಚಿಕಿತ್ಸೆ ಧನಸಹಾಯ, ಅಡುಗೆ ಅನಿಲ (ಸಾಕೇಂತಿಕವಾಗಿ 4 ಮಂದಿಗೆ) ಒಟ್ಟು 9 ಲಕ್ಷದ 78 ಸಾವಿರ ರೂಪಾಯಿಗಳ ಚೆಕನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

ಮಂಗಳೂರು ಮಹಾನಗರ ಪಾಲಿಕೆಯ ನಗರ ಬಡತನ ನಿರ್ಮೂಲನಾ ಕೋಶದಡಿ 5% ವಿಕಲಚೇತನ ಕಲ್ಯಾಣ ಕಾರ್ಯಕ್ರಮದಡಿ ಆರೋಗ್ಯ ಸಂಬಂಧಿತ ಸವಲತ್ತಗಳಾದ ದ್ವಿಚಕ್ರ ವಾಹನ, ವೀಲ್ ಚೇರ್, ಶ್ರವಣ ಸಾಧನ, ಕೃತಕ ಕಾಲುಗಳನ್ನು ಫಲಾಭಿವಿಗಳಿಗೆ ವಿತರಿಸಲಾಯಿತು. ವೈದಕೀಯ ವೆಚ್ಚಕ್ಕೆ ಸಂಬಂಧಪಟ್ಟಂತೆ ಧನಸಹಾಯ ನೀಡಲಾಯಿತು.

ಕ್ರೀಡಾ ಪ್ರೋತ್ಸಾಹ ಧನ, ವಿದ್ಯಾ ಪ್ರೋತ್ಸಾಹ ಧನ, ಪೋಷಕ ಭತ್ಯೆ, ಪಕ್ಕಾ ಮನೆ ಸೇರಿದಂತೆ ಒಟ್ಟು 52 ಲಕ್ಷದ 91 ಸಾವಿರದ 133 ರೂಪಾಯಿಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಉಪ ಆಯುಕ್ತ ಡಾ. ಸಂತೋಷ್ ಕುಮಾರ್, ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Comments are closed.