ಕರಾವಳಿ

ಕೋಟೇಶ್ವರ ವಿ.ಎಸ್.ಎಸ್ ಸೊಸೈಟಿ ಚುನಾವಣೆ; ಕಾಂಗ್ರೆಸ್‌ಗೆ ಭರ್ಜರಿ ಗೆಲುವು: ಬಿಜೆಪಿಗೆ ಮುಖಭಂಗ!

Pinterest LinkedIn Tumblr

ಕುಂದಾಪುರ: ಕೋಟೇಶ್ವರ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆ ಭಾನುವಾರ ಕೋಟೇಶ್ವರ ಸರಕಾರಿ ಶಾಲೆಯಲ್ಲಿ ನಡೆದಿದ್ದು ಸಂಜೆ 4 ಗಂಟೆಗೆ ಮತದಾನ ಪ್ರಕ್ರಿಯೆ‌ ಮುಗಿದು ಬಳಿಕ ಮತ ಎಣಿಕೆ ಕಾರ್ಯ ನಡೆದಿದ್ದು ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದ್ದು ಬಿಜೆಪಿಗೆ ಬಾರೀ ಮುಖಭಂಗ ಉಂಟಾಗಿದೆ.

ಇಪ್ಪತ್ತು ವರ್ಷಗಳ ಬಳಿಕ ನಡೆದ ಕೋಟೇಶ್ವರ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆ ಇದಾಗಿದ್ದು ಇಷ್ಟು ವರ್ಷವೂ ರಾಜಿ ನಡೆದು ಕಾಂಗ್ರೆಸ್ ಆಡಳಿತವಿತ್ತು. ಹಲವು ವರ್ಷಗಳ ಬಳಿಕ ಕೋಟೇಶ್ವರ ವಿ.ಎಸ್.ಎಸ್. ಸೊಸೈಟಿಗೆ ಈ ಬಾರಿ 13 ಸ್ಥಾನಕ್ಕೆ ಚುನಾವಣೆ ನಡೆದಿದ್ದು ಬಾರೀ ಜಿದ್ದಾಜಿದ್ದಿ ನಡೆದಿತ್ತು. ಅರುಣ್ ಕುಮಾರ್ ಎಸ್.ವಿ. ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

  

ಗೆಲುವಿನ ಸರದಾರರು…
ಕಾಂಗ್ರೆಸ್ ಬೆಂಬಲಿತರಾಗಿ ಹಿಂದುಳಿದ ವರ್ಗ ಮೀಸಲು ಸ್ಥಾನ ಪ್ರವರ್ಗ-ಎ ಯಿಂದ ಸ್ಪರ್ಧಿಸಿದ ಅಶೋಕ್ ಪೂಜಾರಿ ಬೀಜಾಡಿ (674 ಮತ), ಸಾಮಾನ್ಯ ಸ್ಥಾನದಿಂದ ಶರತ್ ಕುಮಾರ್ ಹೆಗ್ಡೆ (615 ಮತ), ಭರತ್ ಕುಮಾರ್ ಶೆಟ್ಟಿ (606 ಮತ), ಗೋಪಾಲ ಶೆಟ್ಟಿ(564 ಮತ), ನರಸಿಂಹ ವಿ. (533 ಮತ), ಮೋಹನ್ ದಾಸ್ ಶೆಟ್ಟಿ (526 ಮತ), ವಾದಿರಾಜ್ ಹತ್ವಾರ್ (478 ಮತ), ಮಹಿಳಾ ಮೀಸಲು ಸ್ಥಾನದಿಂದ ಸ್ಪರ್ಧಿಸಿದ ಆಶಲತಾ ಶೆಟ್ಟಿ (535 ಮತ), ಸುಧಾ (523 ಮತ), ಹಿಂದುಳಿದ ವರ್ಗ ಮೀಸಲು ಸ್ಥಾನ ಪ್ರವರ್ಗ-ಬಿ ಯಿಂದ ಚಂದ್ರಶೇಖರ್ ಶೆಟ್ಟಿ (630 ಮತ), ಪ. ಜಾತಿ ಮೀಸಲು ಸ್ಥಾನದಿಂದ ಸ್ಪರ್ಧಿಸಿದ ಸುರೇಶ್ ಕೆ.ವಿ. (464 ಮತ), ಪ.ಪಂಗಡ ಮೀಸಲು ಸ್ಥಾನದಿಂದ ಚಿಕ್ಕು (402 ಮತ) ಪಡೆದಿದ್ದಾರೆ. ಇನ್ನು ಬಿಜೆಪಿ ಬೆಂಬಲಿತರಾಗಿ ಸಾಮಾನ್ಯ ಮೀಸಲಾತಿ ಸ್ಥಾನದಿಂದ ನವೀನ್ ಹೆಗ್ಡೆ 529 ಮತ ಗಳಿಸಿದ್ದಾರೆ.

ಗೆದ್ದು ಬೀಗಿದ ಕಾಂಗ್ರೆಸ್…
ಕಳೆದ ಇಪ್ಪತ್ತು ವರ್ಷಗಳಿಂದಲೂ ಕೋಟೇಶ್ವರ ಸೊಸೈಟಿಯಲ್ಲಿ ಅಧಿಕಾರ ಹೊಂದಿದ್ದ ಕಾಂಗ್ರೆಸ್ ಇದೀಗಾ ಮತ್ತೆ ಅಧಿಕಾರ ಗದ್ದುಗೆ ಏರುವುದು ನಿಶ್ಚಿತವಾಗಿದೆ. 13 ಸ್ಥಾನಗಳ ಪೈಕಿ 12 ಸ್ಥಾನವನ್ನು ಕಾಂಗ್ರೆಸ್ ಬೆಂಬಲಿತ ಗೆದ್ದು ಬೀಗಿದರೆ ಬಿಜೆಪಿ ಬೆಂಬಲಿತ ಓರ್ವ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಒಟ್ಟು 1395 ಮತಗಳ ಪೈಕಿ 4 ಗಂಟೆಗೆ ಮುಕ್ತಾಯವಾದ ಮತದಾನ ಪ್ರಕ್ರಿಯೆಯಲ್ಲಿ 1155 ಮತಗಳು ಚಲಾವಣೆಯಾಗಿದ್ದು 82% ಮತದಾನ ನಡೆದಿತ್ತು. ಹದಿಮೂರು ಸ್ಥಾನಗಳ ಪೈಕಿ ಒಂದು ಸೀಟು ಮಾತ್ರ ಕಳೆದುಕೊಂಡರು ಕೂಡ ಕಾಂಗ್ರೆಸ್ ಅತ್ಯುತ್ತಮ ಗೆಲುವನ್ನೇ ತನ್ನದಾಗಿಸಿಕೊಂಡಿದೆ. ಇಪ್ಪತ್ತಕ್ಕೂ ಅಧಿಕ ವರ್ಷಗಳಿಂದ ರಾಜಿ ಸೂತ್ರದಲ್ಲೇ ನಡೆಯುತ್ತಿದ್ದ ವ್ಯವಸ್ಥೆ ಈ ವರ್ಷ ಮಾತ್ರ ಚುನಾವಣೆ ಆಗಲೇಬೇಕೆಂಬ ಹಿನ್ನೆಲೆಯಲ್ಲಿ ಮತದಾನ ನಡೆದು ಕಾಂಗ್ರೆಸ್ ಗೆಲವಿನ ನಗೆ ಬೀರಿದೆ.

ಬಿಜೆಪಿಗೆ ನುಂಗಲಾರದ ತುತ್ತು!
ಹೇಳಿಕೇಳಿ ಕೋಟೇಶ್ವರವು ಬಿಜೆಪಿಯ ಭದ್ರಕೋಟೆ ಮಾತ್ರವಲ್ಲ ಶಕ್ತಿಕೇಂದ್ರವೂ ಹೌದು‌. ಅಷ್ಟೇ ಅಲ್ಲದೇ ಬಿಜೆಪಿ ಸರಕಾರ, ಅವರದ್ದೇ ಶಾಸಕರು, ಜಿ.ಪಂ, ತಾ.ಪಂ, ಗ್ರಾಮಪಂಚಾಯತ್ ಬಹುತೇಕ ಅವರದ್ದೇ ಇದ್ದರೂ ಕೂಡ ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 12 ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದ್ದು ಸುಳ್ಳಲ್ಲ. ಒಂದು ಸೀಟು ಪಡೆದ ಬಿಜೆಪಿ ಸದ್ಯ ಸೋಲಿನ ಪರಾಮರ್ಷೆಯಲ್ಲಿದೆ.

ಕಾಂಗ್ರೆಸ್ ಹರ್ಷ, ವಿಜಯೋತ್ಸವ..
ಅದೇನೇ ಇರಲಿ ಗೆಲವಿನ ಬಗ್ಗೆ ಕಾಂಗ್ರೆಸ್ ವಿಜಯೋತ್ಸವ ನಡೆಸಿದ್ದು ಪಟಾಕಿ ಸಿಡಿಸಿ ಸಿಹಿ ಹಂಚಿ ಕಾರ್ಯಕರ್ತರು ಸಂಭ್ರಮಿಸಿದರು. ಕುಂದಾಪುರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ,ಮಾಜಿ ಬ್ಲಾಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಮುಖಂಡರಾದ ಬಿ. ಹೆರಿಯಣ್ಣ, ಮಹೇಶ್ ಹೆಗ್ಡೆ, ಇಚ್ಚಿತಾರ್ಥ ಶೆಟ್ಟಿ, ಗಣೇಶ್ ಶೇರಿಗಾರ್ ಮೊದಲಾದವರು ಉಪಸ್ಥಿತರಿದ್ದರು.

ಬೆಳಿಗ್ಗೆ ಕೈ-ಕಮಲ ಹೋಯ್ ಕೈ!
ಮತದಾನ ಪ್ರಕ್ರಿಯೆ ನಡೆಯುತ್ತಿದ್ದು ಇಲ್ಲಿಗೆ 150 ಮೀಟರ್ ವ್ಯಾಪ್ತಿಯ ಖಾಸಗಿ ಹಾಲ್ ನಲ್ಲಿ ಕಾಂಗ್ರೆಸ್ ಬೂತ್ ಶಟರ್ ಬಾಗಿಲು ಮುಚ್ಚಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ವಿರುದ್ದ ಕಾಂಗ್ರೆಸ್ ಮುಖಂಡರು ತೀವೃ ಆಕ್ರೋಷ ವ್ಯಕ್ತಪಡಿಸಿದ್ದು ಎರಡು ಗುಂಪಿನ ನಡುವೆ ಹೋಯ್-ಕೈ ನಡೆಯಿತು.ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಬೂತ್ ಒಳಗಡೆ ಉಪಹಾರ ಹಂಚಲಾಗುತ್ತಿದೆಯೆಂಬ ಆರೋಪದಲ್ಲಿ ಬಿಜೆಪಿ ಪಕ್ಷದವರು ಬೂತ್ ಗೆ ಮುತ್ತಿಗೆ ಹಾಕಿದರು. ಈ ವೇಳೆ ಏಕಾಏಕಿ ಬಿಜೆಪಿ ಶಟರ್ ಬಾಗಿಲು ಮುಚ್ಚಿದ್ದಕ್ಕೆ ಕೈ ಮುಖಂಡರು ಕೆಂಡಾಮಂಡಲರಾಗಿದ್ದು ಪ್ರಶ್ನಿಸಿದ ಕೈ ಹಾಗೂ ಕಮಲ ಮುಖಂಡರು, ಕಾರ್ಯರ್ತರ ನಡುವೆ ಸಂಘರ್ಷ ಏರ್ಪಟ್ಟಿದ್ದು ಪೊಲೀಸರ ಮಧ್ಯಪ್ರವೇಶದ ಬಳಿಕ ಪರಿಸ್ಥಿತಿ ತಿಳಿಗೊಂಡಿತು.

(ವರದಿ- ಯೋಗೀಶ್ ಕುಂಭಾಸಿ)

Comments are closed.