ಕರಾವಳಿ

ಸೆ.29ರಿಂದ ಅಕ್ಟೋಬರ್ 9 : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವೈಭವದ ಮಂಗಳೂರು ದಸರಾ ಮಹೋತ್ಸವ

Pinterest LinkedIn Tumblr

ಮಂಗಳೂರು,ಸೆಪ್ಟಂಬರ್.27 : ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವರ್ಷಾಂಪ್ರತಿ ನಡೆಯುವ ವೈಭವದ ಮಂಗಳೂರು ದಸರಾ ಮಹೋತ್ಸವವು ಇದೇ ಸೆ.29ರಿಂದ ಅಕ್ಟೋಬರ್ 9ರ ಬೆಳಗ್ಗಿನವರೆಗೆ ನಡೆಯಲಿದೆ.

ಮಂಗಳೂರು ದಸರಾ ಮಹೋತ್ಸವ ಕಾರ್ಯಕ್ರಮ ಸೆ.29ರಂದು ಆರಂಭಗೊಂಡು ಅ.9ರವರೆಗೆ ನಾನಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಅಭಿವೃದ್ಧಿ ಹಾಗೂ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿ ತಿಳಿಸಿದ್ದಾರೆ.

ಶ್ರೀ ಕ್ಷೇತ್ರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿಯ ದಸರಾ ಮಹೋತ್ಸವದಲ್ಲೂ ೧೦ಲಕ್ಷಕ್ಕೂ ಅಧಿಕ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ದೇವಸ್ಥಾನ ಆಡಳಿತ ಮಂಡಳಿ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ಈ ಬಾರಿ ಹಿಂದಿನ ವರ್ಷಗಳಿಗಿಂತ ಭಿನ್ನವಾಗಿ ಶಾರದೆ ಸೇರಿದಂತೆ ನವದುರ್ಗೆಯರ ಮೆರವಣಿಗೆ ಆರಂಭದಲ್ಲಿದ್ದು, ಇತರ ಟ್ಯಾಬ್ಲೋಗಳು ಅದರ ಹಿಂದೆ ಸಾಗಲಿವೆ ಎಂದು ಹೇಳಿದರು.

ಧಾರ್ಮಿಕ ಕಾರ್ಯಕ್ರಮ:

ಸೆ.29ರಂದು ಬೆಳಗ್ಗೆ 8.30ಕ್ಕೆ ಗುರುಪ್ರಾರ್ಥನೆ, 1.೦೦ಕ್ಕೆ ಕಲಶ ಪ್ರತಿಷ್ಠೆ, 11.20ಕ್ಕೆ ನವದುರ್ಗೆಯರ ಮತ್ತು ಶಾರದಾ ಪ್ರತಿಷ್ಠೆ, 12.30 ಕ್ಕೆ ಪುಷ್ಪಾಲಂಕಾರ ಮಹಾಪೂಜೆ, ಸಂಜೆ 7.೦೦ರಿಂದ ಭಜನಾ ಕಾರ್ಯಕ್ರಮಮ 9.೦೦ರಿಂದ ದೇವಿ ಪುಷ್ಪಾಲಂಕಾರ ಪೂಜೆ ನಡೆಯಲಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್. ಆರ್ (ಎಡ್ವಕೇಟ್) ಮಾಹಿತಿ ನೀಡಿದರು.

ದಸರಾ ಮಹೋತ್ಸವ ಅಂಗವಾಗಿ ನಾನಾ ರೀತಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಸೆ.30ರಂದು ದುರ್ಗಾ ಹೋಮ, ಅ.1ರಂದು ಬೆಳಗ್ಗೆ ಆರ್ಯ ದುರ್ಗಾ ಹೋಮ, ಅ.2ರಂದು ಭಗವತೀ ದುರ್ಗಾ ಹೋಮ, ಅ.3ರಂದು ಕುಮಾರಿ ದುರ್ಗಾ ಹೋಮ, ಅ.4ರಂದು ಅಂಬಿಕಾ ದುರ್ಗಾಹೋಮ, ಅ.5ರಂದು ಮಹಿಷಮರ್ದಿನಿ ದುರ್ಗಾಹೋಮ, ಅ.6ರಂದು ಚಂಡಿಕಾಹೋಮ, ಹಗಲೋತ್ಸವ, ಅ.7ರಂದು ಸರಸ್ವತಿ ದುರ್ಗಾಹೋಮ, ಶತಸೀಯಾಳಾಭಿಷೇಕ, ಅ.8ರಂದು ವಾಗೀಶ್ವರಿ ದುರ್ಗಾಹೋಮ ನಡೆಯಲಿದೆ. ದಸರಾ ಮಹೋತ್ಸವ ಅಂಗವಾಗಿ ರಾಜ್ಯ, ರಾಷ್ಟ್ರಮಟ್ಟದ ನಾನಾ ಕಲಾ ತಂಡಗಳಿಂದ ಕಲಾಪ್ರದರ್ಶನ ನಡೆಯಲಿದೆ ಎಂದವರು ತಿಳಿಸಿದರು.

ಅ. ೮ರಂದು ಶೋಭಾಯಾತ್ರೆ:

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ ಬಿ.ಜನಾರ್ಧನ ಪೂಜಾರಿಯವರ ನೇತ್ರತ್ವದಲ್ಲಿ ಮಂಗಳೂರು ದಸರಾ ಮಹೋತ್ಸವ ಭವ್ಯ ಶೋಭಾಯಾತ್ರೆ ಅ.8ರಂದು ಸಂಜೆ 4.00ರಿಂದ ನಡೆಯಲಿದೆ.

ಶ್ರೀ ಕ್ಷೇತ್ರದಿಂದ ಹೊರಟ ಶೋಭಾಯಾತ್ರೆಯು ಕಂಬ್ಳಾ ರಸ್ತೆ, ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್ ಸರ್ಕಲ್, ಲಾಲ್‌ಭಾಗ್, ಬಲ್ಲಾಳ್‌ ಬಾಗ್, ಪಿವಿ‌ಎಸ್, ನವಭಾರತ್ ಸರ್ಕಲ್, ಕೆ.ಎಸ್. ರಾವ್ ರಸ್ತೆ, ಹಂಪನಕಟ್ಟೆ, ವಿ.ವಿ. ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ, ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಕಾರ್‌ಸ್ಟ್ರೀಟ್, ಚಿತ್ರಾ ಟಾಕೀಸು, ಅಳಕೆಯಾಗಿ ಶ್ರೀ ಕ್ಷೇತ್ರಕ್ಕೆ ಬರಲಿದೆ.

ಅ.9ರಂದು ಬೆಳಗ್ಗೆ 4ಗಂಟೆಗೆ ಪೂಜೆ ಬಲಿ, ಮಂಟಪ ಬಲಿ, ಮಂಟಪ ಪೂಜೆ ನಡೆದು ಶ್ರೀ ಶಾರದ ವಿಸರ್ಜನೆ, ಅವಭೃತ ಸ್ನಾನ ನಡೆಯಲಿದೆ. ಸಂಜೆ 7ರಿಂದ ಭಜನಾ ಕಾರ್ಯಕ್ರಮ, 8.೦೦ಕ್ಕೆ ಗುರುಪೂಜೆ ನಡೆಯಲಿದೆ ಎಂದು ಆರ್.ಪದ್ಮರಾಜ್ ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಕಾರ್ಯದರ್ಶಿ ಬಿ.ಮಾಧವ ಸುವರ್ಣ, ಶ್ರೀಕ್ಷೇತ್ರಾಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಉರ್ಮಿಳಾ ರಮೇಶ್, ರವೀಶಂಕರ್ ಮಿಜಾರ್, ಡಾ.ಬಿ.ಜಿ.ಸುವರ್ಣ, ಕೆ.ಮಹೇಶ್ಚಂದ್ರ, ಬಿ.ಕೆ ತಾರನಾಥ್ ಮತ್ತಿತ್ತರರು ಉಪಸ್ಥಿತರಿದ್ದರು.

Comments are closed.