ಕರಾವಳಿ

ಮಂಗಳೂರು : ಚೈಲ್ಡ್‌ಲೈನ್‍ನಿಂದ ಭಿಕ್ಷಾಟಣೆ ನಿರತ ತಾಯಿ ಮಕ್ಕಳನ್ನು ರಕ್ಷಣೆ

Pinterest LinkedIn Tumblr

ಮಂಗಳೂರು : ನಗರ ಹೊರವಲಯದ ತಲಪಾಡಿ ಟೋಲ್‌ಗೇಟ್ ಬಳಿ ಹೆಣ್ಣು ಮಗುವನ್ನು ಹಿಡಿದುಕೊಂಡು ಭಿಕ್ಷೆ ಬೇಡುತ್ತಿದ್ದ ಸಕಲೇಶಪುರ ಮೂಲದ 35 ವರ್ಷ ಪ್ರಾಯದ ಸಂಗೀತಾ ಎಂಬಾಕೆಯನ್ನು ‘ಚೈಲ್ಡ್‌ಲೈನ್-1098’ ಮತ್ತು ಜಿಲ್ಲಾಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಯು ಬುಧವಾರ ರಕ್ಷಿಸಿದೆ. ಈ ತಾಯಿ-ಮಗುವಿನ ಜೊತೆಗೆ 2 ವರ್ಷ ಪ್ರಾಯದ ಗಂಡು ಮಗುವನ್ನು ಕೂಡ ರಕ್ಷಿಸಲಾಗಿದೆ.

ತಮಿಳುನಾಡು ಮೂಲದ ಮಹಿಳೆಯೊಂದು 3 ತಿಂಗಳ ಹೆಣ್ಣು ಮಗುವನ್ನು ಹಿಡಿದುಕೊಂಡು ತಲಪಾಡಿ ಟೋಲ್‌ಗೇಟ್ ಬಳಿ ಭಿಕ್ಷಾಟಣೆ ನಡೆಸುತ್ತಿದ್ದಾರೆ ಹಾಗೂ ಮಗು ಆಕೆಯದ್ದೇ ಎಂಬುದರ ಬಗ್ಗೆ ಸಂಶಯವಿದೆ ಎಂಬ ಸಾರ್ವಜನಿಕ ಮಾಹಿತಿಯ ಹಿನ್ನಲೆಯಲ್ಲಿ ಚೈಲ್ಡ್‌ಲೈನ್ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಯನ್ನೊಳಗೊಂಡ ತಂಡ ಸ್ಥಳಕ್ಕೆ ತೆರಳಿ ಸಂಗೀತಾ ಮತ್ತು ಇಬ್ಬರು ಮಕ್ಕಳನ್ನು ರಕ್ಷಿಸಿದೆ.

ನಗರದ ಬೋಂದೆಲ್ ಬಳಿ ಈ ಮಹಿಳೆಯು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ಸಂದರ್ಭ ಕಾವೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು. ತಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಿ ಮಹಿಳೆಯ ಜೊತೆಗೆ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿದರು. ಮಹಿಳೆಯ ಬಳಿ ಸೂಕ್ತ ದಾಖಲೆಗಳು ಇಲ್ಲದ ಕಾರಣ ತಾಯಿಯ ಜೊತೆಗೆ ಮಕ್ಕಳಿಗೂ ಸ್ವಾಧಾರ ಕೇಂದ್ರದಲ್ಲಿ ಸಮಿತಿಯ ಆದೇಶದಂತೆ ಪುನರ್ವಸತಿಯನ್ನು ಕಲ್ಪಿಸಲಾಗಿದೆ.

ಮಗುವನ್ನು ರಕ್ಷಿಸುವ ಸಂದರ್ಭದಲ್ಲಿ ಚೈಲ್ಡ್‌ಲೈನ್-೧೦೯೮ ದ.ಕ.ಜಿಲ್ಲಾ ಕೇಂದ್ರ ಸಂಯೋಜಕರಾದ ದೀಕ್ಷಿತ್ ಅಚ್ರಪ್ಪಾಡಿ, ಸದಸ್ಯರಾದ ಅಸುಂತಾ ಮತ್ತು ಆಶಾಲತ ಹಾಗೂ ಜಿಲ್ಲಾಮಕ್ಕಳ ರಕ್ಷಣಾ ಘಟಕದ ಶ್ರೀಮತಿ ಸುರೇಖ, ಶ್ರೀಮತಿ ಸಂಧ್ಯಾ ಹಾಗೂ ಮಿತುನ್‌ರವರು ಪಾಲ್ಗೊಂಡಿದ್ದರು.

Comments are closed.