ಕರಾವಳಿ

ಹಲವರಿಮಠ ಸರಕಾರಿ ಶಾಲೆಯಲ್ಲಿ ಹಲವು ಸಮಸ್ಯೆಗಳು: ಆತಂಕದಲ್ಲಿ ವಿದ್ಯಾರ್ಥಿಗಳು, ಪೋಷಕರು!

Pinterest LinkedIn Tumblr

ಕುಂದಾಪುರ: ಬೈಂದೂರು ವಿಧಾನಸಭಾ ವ್ಯಾಪ್ತಿಯ ಯಡಮೊಗೆ ಗ್ರಾಮದ ಹಲವರಿಮಠ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಮೂರು ದಿನಗಳಿಂದ ಶಿಕ್ಷಕರು ಗೈರಾಗುತ್ತಿದ್ದು ಮಕ್ಕಳು ಆತಂಕದಲ್ಲಿ ಶಾಲೆಗೆ ಬರಬೇಕಾದ ಅನಿವಾರ್ಯತೆಯಿದೆ.

ಒಂದೆಡೆ ಪಶ್ಚಿಮಘಟ್ಟದ ತಪ್ಪಲು, ಸುತ್ತಲೂ ಕಾಡು ಪ್ರದೇಶದ ನಡುವೆಯಿರುವ ಈ ಶಾಲೆಯಲ್ಲಿ ಗೋಳಿಬೇರು, ಹೊಸಬಾಳು, ಉಪ್ಪಿನಮಕ್ಕಿ, ವಡ್ನಾಳಿ, ಕೊಳಾಳಿ ಮೊದಲಾದ ಭಾಗಗಳಿಂದ ವಿದ್ಯಾರ್ಜನೆಗೆ ಬರುವ 44 ವಿದ್ಯಾರ್ಥಿಗಳಿದ್ದು ಒಬ್ಬರು ಮುಖ್ಯಶಿಕ್ಷಕ ಹಾಗೂ ಓರ್ವ ಶಿಕ್ಷಕಿಯಿದ್ದಾರೆ. ಮುಖ್ಯಶಿಕ್ಷಕ ಚಂದ್ರಶೇಖರ್ ಮೈಸೂರಿನಲ್ಲಿ ನಡೆಯುತ್ತಿರುವ ಕೌನ್ಸೆಲಿಂಗ್ ಗೆ ತೆರಳಿದ್ದು ಶಿಕ್ಷಕಿ ಲೀಲಾ ಅವರು ತಾಯಿ ನಿಧನದ ಹಿನ್ನೆಲೆ ರಜೆ ಹಾಕಿದ್ದರು. ಆದ್ದರಿಂದ ಲೆಲವು ದಿನಗಳಿಂದ ಸಮೀಪದ ಶಾಲೆಯ ಶಿಕ್ಷಕರನ್ನು ನಿಯೋಜಿಸುತ್ತಿದ್ದರೂ ಕೂಡ ಬುಧವಾರ ಯಾವುದೇ ಶಿಕ್ಷಕರು ಶಾಲೆಗೆ ಬಂದಿರಲಿಲ್ಲ. ಮಧ್ಯಾಹ್ನದವರೆಗೆ ಅಕ್ಷರದಾಸೋಹ ಸಿಬ್ಬಂದಿಗಳೇ ಮಕ್ಕಳನ್ನು ನೋಡಿಕೊಂಡಿದ್ದರು. ಈ ಬಗ್ಗೆ ಶಾಲಾಭಿವೃದ್ಧಿ ಸಮಿತಿಯವರ ಮೇಲಾಧಿಕಾರಿಗಳ ಗಮನಕ್ಕೆ ತಂದ ಬಳಿಕ ಯಡಮೊಗೆ ಅಜ್ಜಿಕಾನು ಶಾಲೆಯ ಶಿಕ್ಷಕಿ ಪ್ರತಿಮಾರಾಣಿ ಎನ್ನುವರನ್ನು ಈ ಶಾಲೆಗೆ ಕಳಿಸಲಾಗಿತ್ತು.

ಶಿಕ್ಷಣ ಇಲಾಖೆ ನಿರ್ಲಕ್ಷ್ಯದ ಬಗ್ಗೆ ಎಸ್.ಡಿ.ಎಂ.ಸಿ ಹಾಗೂ ಪೋಷಕರು ಮತ್ತು ಹಳೆ ವಿದ್ಯಾರ್ಥಿಗಳು ತೀವೃ ಅಸಮಾಧಾನ ವ್ಯಕ್ತಪಡಿಸಿದರು. ಕಳೆದೊಂದು ವರ್ಷದಿಂದ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರೂ ಕೂಡ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಪೋಷಕರು ದೂರಿದ್ದಾರೆ.

Comments are closed.