ಕರಾವಳಿ

ಸರಿ ದಾರಿಗೆ ಬರುವ ರೌಡಿಶೀಟರ್‌ಗಳಿಗೆ ‘ಆಶಾ ಕಿರಣ’ ಘಟಕ – ಅಪರಾಧ ಪುನಾರವರ್ತನೆಯಾದರೆ ಗೂಂಡಾ ಕಾಯ್ದೆ ; ಪೊಲೀಸ್ ಕಮಿಶನರ್

Pinterest LinkedIn Tumblr

ಮಂಗಳೂರು, ಸೆಪ್ಟಂಬರ್.13: ಮಂಗಳೂರಿನ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ವಿಶೇಷ ಸೇವಾ ಕವಾಯತು ಕಾರ್ಯಕ್ರಮ ನಡೆಯಿತು. ಪೊಲೀಸ್ ಇಲಾಖೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಪೊಲೀಸ್ ಕವಾಯತನ್ನು ಸಾರ್ವಜನಿಕರಿಗೆ ವೀಕ್ಷಿಸಲು ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ನೇರಪ್ರಸಾರ ಮಾಡಲಾಯಿತು.

ಈ ವೇಳೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅವರು, ಪದೆ ಪದೆ ಅಪರಾಧ ಚಟುವಟಿಕೆಗಳು ಮತ್ತು ಕಾನೂನು ಉಲ್ಲಂಘನೆಯಂತಹ ಕೃತ್ಯಗಳನ್ನು ಎಸಗುವ ಅಪರಾಧಿಗಳ ವಿರುದ್ಧ ಗೂಂಡಾ ಕಾಯ್ದೆ ಅಥವಾ ಕೋಕಾ (ಸಂಘಟಿತ ಅಪರಾಧ ನಿಯಂತ್ರಣ) ಕಾಯ್ದೆ ಜಾರಿಯಂತಹ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮನಃ ಪರಿವರ್ತನೆ ಹೊಂದಿ, ಸನ್ನಡತೆಯತ್ತ ಜೀವನ ಸಾಗಿಸಲು ಮುಂದೆ ಬರುವ ರೌಡಿಶೀಟರ್‌ಗಳಿಗೆ ವಿನೂತನ ಅವಕಾಶವೊಂದನ್ನು ಕಲ್ಪಿಸಲಾಗಿದೆ. ರೌಡಿಗಳ ಜತೆ ಸಂವಾದ ನಡೆಸಿ ಅವರನ್ನು ಅವರನ್ನು ಸರಿ ದಾರಿಗೆ ತರಲು ‘ಆಶಾ ಕಿರಣ’ ಎಂಬ ಘಟಕವನ್ನು ಆರಂಭಿಸಲಾಗಿದೆ. ಠಾಣಾವಾರು ಹಲವು ಮಂದಿ ರೌಡಿಗಳು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಅವರನ್ನು ಕೌನ್ಸೆಲಿಂಗ್ ನಡೆಸಲಾಗುವುದು. ಅವರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಈ ತಿಂಗಳ ಅಂತ್ಯಕ್ಕೆ ವೃತ್ತಿ ತರಬೇತಿ ಕಾರ್ಯಕ್ರಮ ನಡೆಸಲಾಗುವುದು ಎಂದು ಆಯುಕ್ತರು ತಿಳಿಸಿದರು.

ಈಗಾಗಲೇ ಹಲವು ರೌಡಿಗಳು ಇದಕ್ಕೆ ಸ್ಪಂದಿಸಿ ಮುಂದೆ ಬರುತ್ತಿದ್ದಾರೆ. ಒಂದೊಮ್ಮೆ ಯಾವುದೇ ರೌಡಿಶೀಟರ್ ಇದನ್ನು ನಿರ್ಲಕ್ಷಿಸಿ ಅಪರಾಧ ಕೃತ್ಯಗಳನ್ನು ಮುಂದುವರಿಸಲು ಇಚ್ಛಿಸಿದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರಗಿಸಲಾಗುವುದು ಎಂದು ಅಯುಕ್ತಕರು ಹೇಳಿದರು.

ಪೊಲೀಸ್ ಇಲಾಖೆಯಿಂದ ಮಾದಕ ದ್ರವ್ಯ ಮೂಲೋತ್ಪಾಟನೆ ಮಾಡಲು ಉದ್ದೇಶಿಸಿದ್ದು, ಈಗಾಗಲೇ ಕೆಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಅಮಾಯಕ ಯುವಕ- ಯುವತಿಯರನ್ನು ಮಾದಕ ವ್ಯಸನದಿಂದ ಮುಕ್ತ ಮಾಡಲು ‘ಕ್ಯಾಂಪಸ್ ಕನೆಕ್ಟ್’ ಯೋಜನೆಯನ್ನು ಆರಂಭಿಸಲಾಗಿದ್ದು, ಶೀಘ್ರ ಅದರ ಉದ್ಘಾಟನೆ ಮಾಡಲಾಗುವುದು ಎಂದು ಡಾ.ಪಿ.ಎಸ್.ಹರ್ಷ ಹೇಳಿದರು.

ಪೊಲೀಸ್ ವ್ಯವಸ್ಥೆಯನ್ನು ಹೆಚ್ಚು ಜನಸ್ನೇಹಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಆರಂಭಿಸಿದ ‘ಮೈ ಬೀಟ್ ಮೈ ಪ್ರೈಡ್’ಗೆ ಒಂದು ತಿಂಗಳಲ್ಲಿ 30,000 ನಾಗರಿಕರು ಸದಸ್ಯರಾಗಿದ್ದಾರೆ. ಒಟ್ಟು 756 ಬೀಟ್ ಗ್ರೂಪ್‌ಗಳಿದ್ದು, ಮುಂದಿನ 2-3 ತಿಂಗಳಲ್ಲಿ ಬೀಟ್ ಸದಸ್ಯರ ಸಂಖ್ಯೆ 2.5 ಲಕ್ಷಕ್ಕೇರಲಿದೆ. ಬೀಟ್ ಪ್ರತಿನಿಧಿಗಳು ವಿವಿಧ ಸಮಸ್ಯೆಗಳನ್ನು ತರುತ್ತಿದ್ದಾರೆ. ಅವರು ನೀಡಿದ ಮಾಹಿತಿಯ ಮೂಲಕ ಈಗಾಗಲೇ ಕೆಲವು ಸಮಸ್ಯೆಗಳು ಬಗೆಹರಿದಿವೆ. ಕೆಲವು ಜನ ಹಳೆ ಆರೋಪಿಗಳ ಪತ್ತೆ ಸಾಧ್ಯವಾಗಿದೆ. ಜನಮುಖಿಯಾಗಿ ಕೆಲಸ ಮುಂದುವರಿಸಿ ಕೊಂಡು ಹೋಗಲು ನಮಗೆ ನಾಗರಿಕರ ಸಹಕಾರ ಬೇಕು ಎಂದು ಆಯುಕ್ತರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಬೀಟ್ ಕಾರ್ಯಕ್ಕೆ ಅತ್ಯುತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿದ ನಾಗರಿಕ ಪ್ರತಿನಿಧಿಗಳಾದ ಫಾರೂಕ್ ರೆಂಜಾಡಿ, ಮುಹಮ್ಮದ್ ಪಂಜಿಮೊಗರು, ಅನಿಲ್ ಅತ್ತಾವರ, ಮಹಾಬಲ ಪೂಜಾರಿ ಸುರತ್ಕಲ್, ಕೇಶವ ನಾಯಕ್ ಪುತ್ತಿಗೆ, ನಿಕಿತ್ ಡಿಸೋಜ, ಪೊಲೀಸ್ ಸಿಬ್ಬಂದಿ ನಾಗಪ್ಪ ತಗಲಿಗಿ (ಪಾಂಡೇಶ್ವರ), ಸುರೇಶ್ (ಉಳ್ಳಾಲ), ಲಿಂಗರಾಜು (ಉಳ್ಳಾಲ), ನೇತ್ರಾವತಿ (ಕಾವೂರು), ಮೆಲ್ವಿನ್ ಪಿಂಟೊ (ಮೂಲ್ಕಿ), ಗಣೇಶ್ ಕಾಮತ್ (ಬಂದರ್), ಎಸ್.ಇ. ರಾಕೇಶ್ (ವೈರ್‌ಲೆಸ್ ವಿಭಾಗ/ ವಾಟ್ಸ್‌ಆಯಪ್ ಗ್ರೂಪ್ ನಿರ್ವಾಹಕ) ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಗರದ ಸಶಸ್ತ್ರ ಮೀಸಲು ಪಡೆಯ ಎಸಿಪಿ ಎಂ.ಎ. ಉಪಾಸೆ ನೇತೃತ್ವದಲ್ಲಿ ಪಥ ಸಂಚಲನ ನಡೆಯಿತು. ಡಿಸಿಪಿಗಳಾದ ಅರುಣಾಂಶುಗಿರಿ ಮತ್ತು ಲಕ್ಷ್ಮೀಗಣೇಶ್ ಸೇರಿದಂತೆ ಮತ್ತಿತ್ತರ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Comments are closed.