ಕುಂದಾಪುರ: ತಾಲೂಕಿನ ಬೀಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡು ಎಂಬಲ್ಲಿ ಸುಮಾರು 70 ವರ್ಷ ಹಳೆಯದಾದ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು ಬುಧವಾರ ಕಟ್ಟಡದ ಒಂದು ಭಾಗದ ಮೇಲ್ಮಾಡು ಕುಸಿದಿದೆ. ಕಟ್ಟಡವನ್ನು ತೆರವು ಮಾಡುವವರೆಗೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ವಿದ್ಯಾರ್ಥಿಗಳ ಪೋಷಕರು ಆಕ್ರೋಷ ವ್ಯಕ್ತಪಡಿಸಿದ ಘಟನೆ ಗುರುವಾರ ಶಾಲೆಯಲ್ಲಿ ನಡೆಯಿತು.
ಗುರುವಾರ ಶಾಲಾ ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿಗಳು ಪೋಷಕರ ಜೊತೆ ಸೇರಿ ಪ್ರತಿಭಟನೆಗಿಳಿದು ತಕ್ಷಣವೇ ಶಿಥೀಲ ಕಟ್ಟಡ ತೆರವು ಮಾಡಿ ಎಂದು ಅಧಿಕಾರಿಗಳಿಗೆ ಆಗ್ರಹಿಸಿದರು.ಬೆಳಿಗ್ಗೆನಿಂದಲೂ ಶಾಲಾ ತರಗತಿಗಳು ಆರಂಭವಾಗದ ಹಿನ್ನೆಲೆ ಸ್ಥಳಿಯಾಡಳಿತ ಪ್ರತಿನಿನಿಧಿಗಳು ಸೇರಿದಂತೆ ಕುಂದಾಪುರ ಉಪವಿಭಾಗಾಧಿಕಾರಿ ಮಧುಕೇಶ್ವರ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ತಹಶಿಲ್ದಾರ್ ತಿಪ್ಪೆಸ್ವಾಮಿ, ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಸ್ಥಳೀಯ ಜನಪ್ರತಿನಿಧಿಗಳು ಒಬ್ಬೊಬ್ಬರಾಗಿ ಭೇಟಿ ನೀಡಿ ಪೋಷಕರ ಅಹವಾಲು ಆಲಿಸಿದರು.
ಶಾಲಾ ಕಟ್ಟಡದ ಜಾಗದ ಪ್ರಕರಣವು ನ್ಯಾಯಾಲಯದಲ್ಲಿದ್ದು ಈ ಬಗ್ಗೆ ಶಿಕ್ಷಣ ಇಲಾಖೆ ಮೂಲಕ ಕಟ್ಟಡ ತೆರವಿನ ಅಗತ್ಯತೆ ಬಗ್ಗೆ ವಕೀಲರ ಮೂಲಕ ನ್ಯಾಯಾಲಯದ ಗಮನಸೆಳೆದು ಕಟ್ಟಡ ತೆರವಿನ ಬಗ್ಗೆ ಕ್ರಮಕೈಗೊಳ್ಳುತ್ತೇವೆ. ವಿದ್ಯಾರ್ಥಿನಿಯರಿಗೆ ಅನಾನುಕೂಲವಾಗದಂತೆ ತಕ್ಷಣದ ವ್ಯವಸ್ಥೆಗೆ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳು ಶಾಲೆಗೆ ಗೈರಾಗದಂತೆ ಕ್ರಮಕೈಗೊಳ್ಳುತ್ತೇವೆ ಎಂದು ಕುಂದಾಪುರ ಎಸಿ ಮಧುಕೇಶ್ವರ್ ತಿಳಿಸಿದ್ದಾರೆ. ತಾತ್ಕಾಲಿಕ ಶೌಚಾಲಯ ಹಾಗೂ ತಿಂಗಳೊಳಗಾಗಿ ಕಟ್ಟಡ ಕೆಡವಿ ಶಾಶ್ವತ ಪರಿಹಾರ ವ್ಯವಸ್ಥೆಗೆ ಕ್ರಮಗೈಗೊಂಡರೆ ಮಕ್ಕಳನ್ನು ಶಾಲೆಗೆ ಕಳಿಸುವುದಾಗಿ ಪೋಷಕರು ತಿಳಿಸಿದ ಹಿನ್ನೆಲೆ ಸಮಸ್ಯೆಗೊಂದು ತಾತ್ಕಾಲಿಕ ಅಂತ್ಯ ದೊರಕಿದಂತಾಗಿದೆ.
ಈ ಸಂದರ್ಭ ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರಕಾಶ್ ಗಾಣಿಗ, ಉಪಾಧ್ಯಕ್ಷ ಶ್ರೀಧರ್ ಆಚಾರ್, ಮಜಿ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಮ ನಾಯಕ್, ಬೀಜಾಡಿ ಗ್ರಾ.ಪಂ ಸದಸ್ಯರಾದ ಗುಲಾಬಿಯಮ್ಮ, ವಾದಿರಾಜ್ ಹೆಬ್ಬಾರ್, ಸ್ಥಳಿಯ ಮುಖಂಡರಾದ ಶೇಷಗಿರಿ ಗೋಟ, ಗಣೇಶ ಪುತ್ರನ್, ಹಳೆ ವಿದ್ಯಾರ್ಥಿ ಸಂಘ ಹಾಗೂ ನಂದಿನಿ ಫ್ರೆಂಡ್ಸ್ ಬೀಜಾಡಿಯ ಪದಾಧಿಕಾರಿಗಳು ಪೋಷಕರುಗಳು ಇದ್ದರು.
ತಪ್ಪಿದ ಅನಾಹುತ…
ಸುಮಾರು ಐವತ್ತಕ್ಕೂ ಅಧಿಕ ವಿದ್ಯಾರ್ಥಿಗಳು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದು ಮೂವತ್ತೈದಕ್ಕೂ ಪುಟಾಣಿಗಳು ಅಂಗನವಾಡಿಗೆ ಬರುತ್ತಾರೆ. ಇಲ್ಲಿನ ಹಳೆ ಶಾಲೆಯ ಕಟ್ಟಡದ ಪಕ್ಕದಲ್ಲಿ ವಿದ್ಯಾರ್ಥಿನಿಯರ ಶೌಚಾಲಯವೇ ಇದ್ದು ಬುಧವಾರ ಶಾಲೆ ರಜೆಯಿದ್ದ ಕಾರಣ ಮೇಲ್ಮಾಡು ಕುಸಿತದಿಂದ ಯಾವುದೇ ಅನಾಹುತವಾಗಿಲ್ಲ. ಹಳೆ ಕಟ್ಟಡ ಮೇಲ್ಮಾಡು ಹೆಂಚುಗಳು ಅಲ್ಲಲ್ಲಿ ಹಾರಿಹೋಗಿದ್ದು ರೀಪ್ ಹಗೂ ಪಕ್ಕಾಸೆಗಳು ಹಾಳಾಗಿದೆ. ಅಷ್ಟೇ ಅಲ್ಲದೇ ಇಡೀ ಕಟ್ಟಡದ ಗೋಡೆ ಶಿಥೀಲಗೊಂಡು ಬಿರುಕು ಬಿಟ್ಟಿದೆ. ಅಲ್ಲಲ್ಲಿ ಇಲಿಗಳು ರಂಧ್ರ ತೋಡಿದ್ದು ಇಡೀ ಕಟ್ಟಡ ಈಗಲೋ ಆಗಲೋ ಅನ್ನುವಂತಿದೆ.
ಬಾಲಕಿಯರ ಶೌಚಾಲಯ ಶಿಥೀಲ ಕಟ್ಟಡದ ಬಳಿಯೇ ಇದ್ದು ನಮ್ಮ ಆಗ್ರಹದ ಹಿನ್ನೆಲೆ ಶಾಲೆಗೆ ಆಗಮಿಸಿದ ಅಧಿಕಾರಿಗಳು ಯಾವುದೇ ಸಮಸ್ಯೆಯಾಗದ ರೀತಿ ಕ್ರಮಕೈಗೊಳ್ಳುವುದಲ್ಲದೆ ನಮ್ಮ ಬೇಡಿಕೆಯಂತೆ ಕಟ್ಟಡ ತೆರವು ಮಾಡಿ ಇಲ್ಲಿನ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಒಂದು ತಿಂಗಳ ಗಡುವು ನೀಡಿದ್ದಾರೆ. ಈ ನಿಟ್ಟಿನಲ್ಲಿ ಮಕ್ಕಳನ್ನು ಕಳಿಸುತ್ತೇವೆ. ಅವರು ಮಾತು ತಪ್ಪಿದರೆ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ. ಮಕ್ಕಳ ಶಿಕ್ಷಣದಿಂದ ವಂಚಿತರಾದರೆ ಅದಕ್ಕೆ ಶಿಕ್ಷಣ ಸಂಧ್ಯಾಇಲಾಖೆಯೇ ಕಾರಣ.
-(ಸಂಧ್ಯಾ- ಪೋಷಕಿ)
ಬೀಜಾಡಿ ಮೂಡು ಶಾಲೆ ಕಟ್ಟಡವು ಶಿಥೀಲಗೊಂಡಿರುವುದು ನಿಜ. ಅಪಾಯಕಾರಿ ಕಟ್ಟಡದ ಬಳಿಯೇ ಶೌಚಾಲಯವಿದ್ದು ವಿದ್ಯಾರ್ಥಿಗಳಿಗೆ ಅನಾನುಕೂಲವಾಗದಂತೆ ಮತ್ತು ಭದ್ರತೆ ದ್ರಷ್ಟಿಯಲ್ಲಿ ತಾತ್ಕಾಲಿಕ ಶೌಚಾಲಯ ನಿರ್ಮಾಣ ಮಾಡಲಾಗುತ್ತದೆ. ಇನ್ನು ವಿದ್ಯಾರ್ಥಿಗಳನ್ನು ಶಾಲೆಗೆ ಕಳಿಸುವುದಿಲ್ಲ ಎನ್ನುವ ಪೋಷಕರ ಮನವೊಲಿಕೆ ಮಾಡಿ ಭದ್ರತೆಯ ಧೈರ್ಯ ಹೇಳಿದ್ದೇವೆ. ನ್ಯಾಯಾಲಯದಲ್ಲಿ ಪ್ರಕರಣವಿದ್ದು ತ್ವರಿತವಾಗಿ ಅದನ್ನು ಇತ್ಯರ್ಥಗೊಳಿಸಲು ಇಲ್ಲಿನ ವಸ್ತುಸ್ಥಿತಿಯ ವರದಿಯನ್ನು ಎಜಿ ಕಚೇರಿಯಿಂದ ಕಳಿಸಿ ಗಮನಸೆಳೆಯುತ್ತೇವೆ,
– ಡಾ.ಎಸ್.ಎಸ್. ಮಧುಕೇಶ್ವರ್- ಉಪವಿಭಾಗಾಧಿಕಾರಿ, ಕುಂದಾಪುರ
ತುರ್ತು ಶೌಚಾಲಯಕ್ಕೆ ವ್ಯವಸ್ಥೆ ಮತ್ತು ಶಾಶ್ವತ ಪರಿಹಾರ ಭರವಸೆ ಹಿನ್ನೆಲೆ ಶುಕ್ರವಾರದಿಂದ ಮಕ್ಕಳನ್ನು ಶಾಲೆಗೆ ಕಳಿಸುವ ತೀರ್ಮಾನ ಮಾಡಿದ್ದು ಇಲ್ಲಿನ ಸಮಸ್ಯೆ ನಿವಾರಣೆಯಾಗದೇ ಇದ್ದಲ್ಲಿ ನಮ್ಮ ಉಘ್ರ ಹೋರಾಟ ನಿಶ್ಚಿತ.
– ಪ್ರಕಾಶ್ ಗಾಣಿಗ, ಎಸ್.ಡಿ.ಎಂ.ಸಿ. ಅಧ್ಯಕ್ಷ
(ವರದಿ- ಯೋಗೀಶ್ ಕುಂಭಾಸಿ)
Comments are closed.