ಕರಾವಳಿ

Breaking News : ಮಂಗಳೂರಿನಲ್ಲಿ ಮತ್ತೆ ಶೂಟೌಟ್ ..

Pinterest LinkedIn Tumblr

ಮಂಗಳೂರು, ಜುಲೈ.09: ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ರೌಡಿ ಶೀಟರ್ ಓರ್ವನ ಬಂಧನಕ್ಕೆ ತೆರಳಿದ ಪೊಲೀಸರ ಮೇಲೆಯೇ ಆತ ದಾಳಿ ನಡೆಸಿದ್ದು, ಈ ಸಂದರ್ಭ ಪೊಲೀಸರು ಸ್ವಯಂ ರಕ್ಷಣೆಗಾಗಿ ಆರೋಪಿ ಮೇಲೆ ಶೂಟೌಟ್ ನಡೆಸಿದ ಘಟನೆ ಮಂಗಳವಾರ ನಗರದ ಹೊರವಲಯದ ಅಡ್ಯಾರ್ ನಲ್ಲಿ ನಡೆದಿದೆ.

ಗುಂಡೇಟಿನಿಂದ ಗಾಯಗೊಂಡ ರೌಡಿ ಶೀಟರ್ ನನ್ನು ಭುವಿತ್ ರಾಜ್ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಕಂಕನಾಡಿ ಪೊಲೀಸ್ ಠಾಣೆಯಲ್ಲಿ 8 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆ, ದರೋಡೆ ಯತ್ನ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಭುವಿತ್ ರಾಜ್ ಇತ್ತೀಚಿಗೆ ಅಕ್ರಮ ಗೋಸಾಗಾಟದ ಸಂಶಯದಲ್ಲಿ ಮಾವಿನ ಹಣ್ಣು ವ್ಯಾಪಾರಿಯ ಮೇಲೆ ತಲವಾರು ದಾಳಿ ನಡೆಸಿದ್ದ. ಮಾವಿನ ಹಣ್ಣು ಸಾಗಾಟದ ಹಲ್ಲೆ ನಡೆಸಿದ ಪ್ರಕರಣದ ತನಿಖೆ ವೇಳೆ ರೌಡಿ ಶೀಟರ್ ಭುವಿತ್ ರಾಜ್ ಕೈವಾಡವಿರುವುದು ತನಿಖೆಯಿಂದ ತಿಳಿದು ಬಂದ ಹಿನ್ನೆಲೆಯಲ್ಲಿ ಆರೋಪಿ ಭವಿತ್ ರಾಜ್ ಅಡ್ಯಾರ್‌ನಲ್ಲಿರುವ ಬಗ್ಗೆ ಸುಳಿವು ಪಡೆದ ಪೊಲೀಸರು ಆತನ ಬಂಧನಕ್ಕೆ ಇಂದು ಬೆಳಗ್ಗೆ ಬಲೆ ಬೀಸಿದ್ದರು.

ಕಂಕನಾಡಿ ಪೊಲೀಸ್ ಇನ್ಸ್​​​ಪೆಕ್ಟರ್ ನೇತ್ರತ್ವದ ಪೊಲೀಸ್ ತಂಡ ಆತನನ್ನು ಬಂಧಿಸಲು ತೆರಳಿದ್ದ ವೇಳೆ ಆರೋಪಿ ಪೊಲೀಸರ ಮೇಲೆಯೇ ದಾಳಿ ನಡೆಸಿದಾನೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಸ್ವಯಂ ರಕ್ಷಣೆಗೆ ಕಂಕನಾಡಿ ಠಾಣಾಧಿಕಾರಿ ಭುವಿತ್ ರಾಜ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಭಾನುವಾರ ಮುಂಜಾನೆ 4 ಗಂಟೆಗೆ 407 ವಾಹನದಲ್ಲಿ ಮಾವಿನ ಹಣ್ಣು ಸಾಗಿಸುತ್ತಿದ್ದು, ಈ ವೇಳೆ ಗುಂಪುಂದು ಟೆಂಪೊದಲ್ಲಿ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದಾರೆಂಬ ಸಂಶಯದ ಮೇರೆಗೆ ನಗರದ ಕುಲಶೇಖರದ ಚೌಕಿ ಸಮೀಪ ವಾಹನವನ್ನು ತಡೆಗಟ್ಟಿತ್ತು.ಈ ಸಂದರ್ಭ ವಾಹನ ಚಾಲಕ ಸೇರಿದಂತೆ ವಾಹನದಲ್ಲಿದ್ದ ಮತ್ತೊಬ್ಬ ಟೆಂಪೋವನ್ನು ಕುಲಶೇಖರ ಚೌಕಿ ಬಳಿ ನಿಲ್ಲಿಸಿ ಓಡಿ ಹೋಗಿದ್ದರು. ಆದರೆ ವಾಹನದಲ್ಲಿದ್ದ ಉಳಾಯಿಬೆಟ್ಟು ನಿವಾಸಿ ಉಮರ್ ಫಾರೂಕ್ (32) ಎಂಬವರ ಮೇಲೆ ತಂಡ ತಲವಾರು ದಾಳಿ ನಡೆಸಿತ್ತು. ಬಳಿಕ ಟೆಂಪೊದಲ್ಲಿ ಮಾವಿನಹಣ್ಣುಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿತ್ತು.

ಘಟನೆ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಮೂರು ಪ್ರತ್ಯೇಕ ತಂಡಗಳ ರಚನೆಯಾಗಿದ್ದು, ಶಂಕಿತ 30 ಹೆಚ್ಚು ಜನರ ವಿಚಾರಣೆ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಲ್ಲಿ ಓರ್ವನಾದ ಭವಿತ್ ರಾಜ್ ನನ್ನು ಬಂಧಿಸಲು ಪೊಲೀಸರು ಮುಂದಾದಾಗ ಈ ಗುಂಡಿನ ದಾಳಿ ಪ್ರಕರಣ ನಡೆದಿದೆ.

ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಸಂದೀಪ್ ಪಾಟೀಲ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments are closed.