ಕರ್ನಾಟಕ

ಸಂಕಷ್ಟದಲ್ಲಿ ದೋಸ್ತಿ ಸರಕಾರ; ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ: ಇಂದು ಏನೆಲ್ಲ ಆಯಿತು..?

Pinterest LinkedIn Tumblr

ಬೆಂಗಳೂರು: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್-ಜೆಡಿಎಸ್‌ನ ಎಲ್ಲ ಸಚಿವರ ರಾಜೀನಾಮೆ ಪಡೆಯುವ ಮೂಲಕ ಸರಕಾರ ಉಳಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದೆ. ರಾಜ್ಯ ರಾಜಕೀಯದ ಬೆಳವಣಿಗೆಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

ರಾಜೀನಾಮೆಯ ಸರಣಿಯ ಏಟಿನಿಂದ ತತ್ತರಿಸಿರುವ ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರಕಾರಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ಪಕ್ಷೇತರ ಶಾಸಕ ಶಂಕರ್ ರಾಜೀನಾಮೆ ನೀಡಿ ಮುಂಬಯಿಗೆ ಪ್ರಯಾಣ ಬೆಳೆಸಿದ್ದಾರೆ.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹಾರಿದ ಪಕ್ಷೇತರ ಶಾಸಕ ಆರ್.ಶಂಕರ್, ರಾಜಭವನಕ್ಕೆ ತೆರಳಿ ಸರಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆಯುವುದಾಗಿ ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪತ್ರ ಸಲ್ಲಿಕೆ. ಇದರೊಂದಿಗೆ ಇಬ್ಬ ರು ಪಕ್ಷೇತರರು ಸರಕಾರದಿಂದ ಹೊರಗೆ ಬಂದಂತೆ ಆಗಿದೆ. ಈ ಬೆಳವಣಿಗೆಯೊಂದಿಗೆ ಕುಮಾರಸ್ವಾಮಿ ಸರಕಾರ ಬಹುಮತ ಕಳೆದುಕೊಂಡಿದೆ. ಪ್ರತಿಪಕ್ಷ ಬಿಜೆಪಿ ಸಂಖ್ಯಾಬಲ ಇಬ್ಬರು ಪಕ್ಷೇತರರು ಸೇರಿ 107ಕ್ಕೆ ಏರಿದ್ದರೆ, ದೋಸ್ತಿ ಸಂಖ್ಯಾಬಲ 119 ರಿಂದ 104ಕ್ಕೆ ಕುಸಿದಿದೆ.

ಈ ನಡುವೆ ಅತೃಪ್ತ ಶಾಸಕರ ಮನವೊಲಿಸುವ ಹೊಣೆ ಹೊತ್ತಿರುವ ಕಾಂಗ್ರೆಸ್‌ನ ಟ್ರಬಲ್‌ ಶೂಟರ್‌ ಡಿಕೆ ಶಿವಕುಮಾರ್‌ ಸೋಮವಾರ ಸಂಜೆ ಮುಂಬಯಿಗೆ ಪ್ರಯಾಣ ಬೆಳೆಸಿದ್ದಾರೆ.

ಅಮೆರಿಕದಿಂದ ಬಂದಾಗಿನಿಂದ ಬೆಂಗಳೂರಿನ ತಾಜ್‌ ವೆಸ್ಟ್‌ ಎಂಡ್‌ನಲ್ಲಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ನಿರಂತರ ಸಭೆ ನಡೆಸುತ್ತಿದ್ದಾರೆ. ಈಗ ಮತ್ತೊಂದು ಸುತ್ತಿನ ಮಾತುಕತೆ ನಡೆಸುತ್ತಿದ್ದು, ಇದಾದ ನಂತರ ಜೆಡಿಎಸ್‌ ಶಾಸಕರನ್ನು ಮಡಿಕೇರಿ ಸಮೀಪದ ರೆಸಾರ್ಟ್‌ಗೆ ಕೊಂಡೊಯ್ಯಲು ತಯಾರಿ ನಡೆಸಲಾಗಿದೆ. ಶಾಸಕರನ್ನು ಕರೆದೊಯ್ಯಲು ಬಸ್‌ವೊಂದು ಸಜ್ಜಾಗಿದೆ.

ಸಭೆಯಲ್ಲಿ ಶಾಸಕರಿಗೆ ಕಿವಿಮಾತು ಹೇಳಿರುವ ಕುಮಾರಸ್ವಾಮಿ, ಯಾವುದೇ ಕಾರಣಕ್ಕೂ ಆಪರೇಷನ್‌ ಕಮಲಕ್ಕ ಒಳಗಾಗದಿರಿ. ಬಿಜೆಪಿಯವರು ಸಂಪರ್ಕಿಸಿದರೆ ಕೂಡಲೇ ಮಾಹಿತಿ ನೀಡಿ ಎಂದು ಸೂಚಿಸಿದ್ದಾರೆ.

ಇದೇ ವೇಳೆ ಅತೃಪ್ತರ ವಿರುದ್ಧ ಅಸ್ತ್ರ ಪ್ರಯೋಗಿಸಲು ಕಾಂಗ್ರೆಸ್‌ ಚಿಂತನೆ ನಡೆಸಿದೆ. ರಾಜೀನಾಮೆ ನೀಡಿದ ಕೆಲವು ಶಾಸಕರ ವಿರುದ್ಧ ಸ್ಪೀಕರ್‌ಗೆ ದೂರು ಸಲ್ಲಿಸಲು ಕಾಂಗ್ರೆಸ್‌ ನಿರ್ಧರಿಸಿದೆ. ಶಾಸಕರ ರಾಜೀನಾಮೆ ನೈಜತೆಯಿಂದ ಕೂಡಿಲ್ಲ. ಯಾವುದೇ ಕಾರಣಕ್ಕೂ ರಾಜೀನಾಮೆ ಅಂಗೀಕಾರ ಮಾಡಬಾರದು ಎಂದು ಕಾಂಗ್ರೆಸ್‌ ಕಾನೂನು ಘಟಕ ದೂರು ಸಲ್ಲಿಸಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಹೊಸದಿಲ್ಲಿಗೆ ತೆರಳಿ ಸೋನಿಯಾ ಗಾಂಧಿ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸುಶ್ಮಿತಾ ದೇವ್‌ ಜತೆಗೂಡಿ ಸೋನಿಯಾ ಮಾಡಿದ್ದಾರೆ ಸೌಮ್ಯ ರೆಡ್ಡಿ. ಯಾವುದೇ ಕಾರಣಕ್ಕೂ ಪಕ್ಷ ಬಿಡದಂತೆ ಸೋನಿಯಾ ಮನವಿ ಮಾಡಿದ್ದಾರೆ. ತಂದೆ ರಾಮಲಿಂಗಾರೆಡ್ಡಿ ಮನವೊಲಿಸುವಂತೆಯೂ ಸೌಮ್ಯ ರೆಡ್ಡಿಗೆ ಸೋನಿಯಾ ಗಾಂಧಿ ಸೂಚಿಸಿದ್ದಾರೆ.

ಶತಾಯಗತಾಯ ಸರಕಾರ ಉಳಿಸಿಕೊಳ್ಳಲು ಕಸರತ್ತು ನಡೆಸಿರುವ ಜೆಡಿಎಸ್‌, ಕಾಂಗ್ರೆಸ್‌ನ ಹೊಸ ತಂತ್ರಗಳನ್ನು ಪ್ರಯೋಗಿಸುತ್ತಿದೆ. ಕಾಂಗ್ರೆಸ್‌ನ ಎಲ್ಲ (22) ಸಚಿವರ ರಾಜೀನಾಮೆಗೆ ನಿರ್ಧರಿಸಲಾಗಿದೆ. ಸಚಿವರ ರಾಜೀನಾಮೆಗೆ ಭಾನುವಾರ ರಾತ್ರಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅಂತೆಯೇ ಜೆಡಿಎಸ್‌ನ ಎಲ್ಲ (9) ಸಚಿವರು ರಾಜೀನಾಮೆ ನೀಡಬೇಕೆಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೂಚಿಸಿದ್ದಾರೆ. ಅದರಂತೆ ಎರಡು ಪಕ್ಷದ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಟ್ವೀಟ್‌ ಮಾಡಿದ್ದು, ಶೀಘ್ರವೇ ಸಂಪುಟ ಪುನಾರಚಿಸಲಾಗುವುದು ಎಂದು ಸಂದೇಶ ನೀಡಿದ್ದಾರೆ.

ಇದೇ ವೇಳೆ ಜೆಡಿಎಸ್‌ನ ಮಹಾಲಕ್ಷ್ಮಿ ಲೇಔಟ್‌ ಶಾಸಕ ಗೋಪಾಲಯ್ಯ ಸೇರ್ಪಡೆಗೆ ಬಿಜೆಪಿಯಲ್ಲಿ ವಿರೋಧ ವ್ಯಕ್ತವಾಗಿದೆ. ಸ್ಥಳೀಯ ಬಿಜೆಪಿ ಘಟಕ ವರಿಷ್ಠ ನಾಯಕರಿಗೆ ಮನವಿ ಸಲ್ಲಿಸಿದೆ. ಗೋಪಾಲಯ್ಯ ವಿರುದ್ಧವೇ ನಾವು ಹೋರಾಟ ಮಾಡಿಕೊಂಡು ಬಂದಿದ್ದೇವೆ. ಈಗ ಅವರನ್ನು ಸೇರ್ಪಡೆ ಮಾಡಿಕೊಂಡರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಇದಲ್ಲದೇ ‘ಎಸ್‌ಬಿಎಂ’ ಶಾಸಕತ್ರಯರಾದ ಸೋಮಶೇಖರ್‌, ಮುನಿರತ್ನ, ಭೈರತಿ ಬಸವರಾಜ್‌ ಸೇರ್ಪಡೆಗೂ ವಿರೋಧ ವ್ಯಕ್ತವಾಗಿದೆ.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಚ್‌. ಮುನಿಯಪ್ಪ, ಮುಳಬಾಗಲು ಶಾಸಕರಿಗೆ ಸಚಿವ ಸ್ಥಾನ ನೀಡಬೇಡಿ ಎಂದಿದ್ದೆ. ಈಗ ನೋಡಿ ಕೈ ಕೊಟ್ಟು ಹೋಗಿದ್ದಾರೆ ಎಂದಿದ್ದಾರೆ.

ಕಂಪ್ಲಿ ಶಾಸಕ ಗಣೇಶ್‌ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಪಕ್ಷ ಬಿಡುವುದಿಲ್ಲ. ಅತೃಪ್ತ ಶಾಸಕರ ಜತೆ ಸಂಪರ್ಕ ಕೂಡ ಹೊಂದಿಲ್ಲ ಎಂದು ತಿಳಿಸಿದ್ದಾರೆ.

ಬಂಡಾಯ ಶಮನಕ್ಕೆ ಮುಲಾಮು ಹಚ್ಚುವ ಕುರಿತು ಚರ್ಚಿಸಲು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನಿವಾಸದಲ್ಲಿ ಉಪಹಾರ ಕೂಡ ಆಯೋಜಿಸಲಾಗಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಕೈ ನಾಯಕರು ಭಾಗಿಯಾಗಿದ್ದರು. ಸಚಿವರಾದ ದೇಶಪಾಂಡೆ, ಎಂಟಿಬಿ ನಾಗರಾಜ್, ತುಕಾರಾಂ ಗೈರು ಹಾಜರಾಗಿದ್ದರು.

ಕಾಂಗ್ರೆಸ್‌ನ 21 ಸಚಿವರ ರಾಜೀನಾಮೆ ಪಡೆಯಲಾಗಿದ್ದು, ಹೊಸದಾಗಿ ಸಂಪುಟ ರಚಿಸಲಾಗುವುದು. ಅತೃಪ್ತ ಶಾಸಕರ ಸಂಪರ್ಕ ಮಾಡಲಾಗುತ್ತಿದೆ. ಬಿಜೆಪಿಯ ಆಪರೇಷನ್ ಕಮಲ 6ನೇ ಬಾರಿಯೂ ವಿಫಲವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸಮ್ಮಿಶ್ರ ಸರಕಾರದ ಹಿತಕ್ಕಾಗಿ ನಾವು ಎಲ್ಲ ತ್ಯಾಗಕ್ಕೂ ಸಿದ್ಧ ಎಂದಿರುವ ಸಚಿವ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಅವರ ಕೈ ಬಲಪಡಿಸುವ ಮೂಲಕ ಕಾಂಗ್ರೆಸ್‌ಗೆ ಬಲ ತುಂಬುತ್ತೇವೆ. ಪಕ್ಷದ ಇತರರಿಗೂ ಅವಕಾಶ ಕಲ್ಪಿಸಿಕೊಡುತ್ತೇವೆ ಎಂದಿದ್ದಾರೆ.

ಈಗಾಗಾಲೇ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಹಲವು ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ನೂತನ ಸರಕಾರ ರಚನೆಗೆ ಅವಕಾಶ ಮಾಡಿಕೊಡಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ದೋಸ್ತಿ ನಾಯಕರ ಮನವೊಲಿಕೆ ಯತ್ನಕ್ಕೆ ಸೊಪ್ಪು ಹಾಕದ ಅತೃಪ್ತರು ಮುಂಬಯಿಯಿಂದ ವಾಪಸ್‌ ಬರುವ ಪ್ರಶ್ನೆಯೇ ಇಲ್ಲವೆಂಬ ಖಡಕ್‌ ಸಂದೇಶ ರವಾನಿಸಿದ್ದಾರೆ. ಇದರೊಂದಿಗೆ ಈಗಾಗಲೇ ಅಪಾಯಕ್ಕೆ ಸಿಲುಕಿರುವ ಮೈತ್ರಿ ಸರಕಾರ ತೀವ್ರ ನಿಗಾ ಘಟಕಕ್ಕೆ ಜಾರಿದಂತಾಗಿದೆ.

ಜತೆಗೆ ಕಾಂಗ್ರೆಸ್‌-ಜೆಡಿಎಸ್‌ನ ಇನ್ನೂ ಅರ್ಧ ಡಜನ್‌ ಶಾಸಕರು ಸೋಮವಾರ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ. ಈ ನಡುವೆಯೂ ಕಾಂಗ್ರೆಸ್‌-ಜೆಡಿಎಸ್‌ನ 17 ಸಚಿವರ ರಾಜೀನಾಮೆ ಪಡೆದು ಸರಕಾರ ಉಳಿಸಿಕೊಳ್ಳುವ ಕಸರತ್ತಿಗೆ ದೋಸ್ತಿ ನಾಯಕರು ಮುಂದಾಗಿದ್ದಾರೆ. ಆದರೆ, ಈ ಪ್ರಯತ್ನ ಫಲ ನೀಡುವ ಲಕ್ಷಣ ಕಾಣಿಸುತ್ತಿಲ್ಲ.

ಸಮ್ಮಿಶ್ರ ಸರಕಾರದ ಶಾಸಕರ ಕುದುರೆ ವ್ಯಾಪಾರಕ್ಕೆ ಖುದ್ದು ರಾಜ್ಯಪಾಲರೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಗಂಭೀರ ಆರೋಪ ಮಾಡಿದ್ದಾರೆ. ರಾಜೀನಾಮೆ ನೀಡಲು ಹೋದ ಶಾಸಕರ ಜತೆ ರಾಜ್ಯಪಾಲರು ಎರಡು ಗಂಟೆಗಳ ಕಾಲ ಚರ್ಚಿಸುವ ಅಗತ್ಯ ಏನಿತ್ತು. ಪೊಲೀಸ್ ಆಯುಕ್ತರು ಜತೆ ಶಾಸಕರನ್ನು ಕೂರಿಸಿ ಮಾತನಾಡಿದ್ದಾರೆ. ಇವೆಲ್ಲ ಗಮನಿಸಿದರೆ ರಾಜ್ಯಪಾಲರೇ ಸರಕಾರ ಅಸ್ಥಿರ ಗೊಳಿಸುವ ಪ್ರಯತ್ನ ನಡೆಸಿದ್ದಾರೆ ಎಂದು ದೂರಿದ್ದಾರೆ.

‘ಮೈತ್ರಿ ಸರ್ಕಾರ, ಮುಖ್ಯಮಂತ್ರಿ ಇಲ್ಲವೇ ದೇವೇಗೌಡರ ವಿರುದ್ಧ ಯಾರೂ ಮಾತನಾಡಬಾರದೆಂದು ನಮ್ಮ‌ಪಕ್ಷದ ನಾಯಕರು ಮತ್ತು ಕಾರ್ಯಕರ್ತರಲ್ಲಿ ಮನವಿ ಮಾಡುತ್ತಿದ್ದೇನೆ. ಮೈತ್ರಿಭಂಗಕ್ಕಾಗಿ ವಿರೋಧಿಗಳು ಹುಟ್ಟುಹಾಕುತ್ತಿರುವ ಜಗಳದ ಗಾಳಿ ಸುದ್ದಿಗಳ ಬಗ್ಗೆ ಎಚ್ಚರಿಕೆಯಿಂದಿರಿ’ ಎಂದು ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

Comments are closed.