ಕರಾವಳಿ

‘ಅಂದರ್-ಬಾಹರ್’: ಬೈಂದೂರಿನಲ್ಲಿ ಇಸ್ಪೀಟ್ ಜುಗಾರಿಯಾಡುತ್ತಿದ್ದ ಗ್ರಾ.ಪಂ ಸದಸ್ಯ ಸಹಿತ 8 ಮಂದಿ ಸೆರೆ

Pinterest LinkedIn Tumblr

ಕುಂದಾಪುರ: ಬೈಂದೂರು ತಾಲೂಕಿನ ಶಿರೂರು ಗ್ರಾಮದ ಕರಾವಳಿ ಸಮುದ್ರ ತೀರದ ಬಳಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಜುಗಾರಿ ಆಟವಾಡುತ್ತಿದ್ದ ಗ್ರಾಮ ಪಂಚಾಯತ್ ಸದಸ್ಯ ಸೇರಿದಂತೆ 8 ಮಂದಿಯನ್ನು ಬೈಂದೂರು ಪೊಲೀಸರು ಬಂಧಿಸಿದಘಟನೆ ಭಾನುವಾರ ನಡೆದಿದೆ.

ಬೈಂದೂರು ದೊಂಬೆ ಶೀರೂರು ನಿವಾಸಿ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಸಂಜೀವ ಮೊಗವೀರ(44), ಸಂದೇಶ ಮೊಗವೀರ (26), ನಾರಾಯಣ ಮೊಗವೀರ (55), ಬಾಬು ಪೂಜಾರಿ (47), ನಾರಾಯಣ (72), ಚಂದ್ರ ಮೊಗವೀರ (42), ಅಣ್ಣಪ್ಪ ಚಿಕ್ಕಯ್ಯ ಮೊಗವೀರ ಮತ್ತು ಬಾಬು ಮೊಗವೀರ (61) ಬಂಧಿತರು.

ಬೈಂದೂರು ಪೊಲೀಸ್ ಠಾಣೆ ಪಿಎಸ್ಐ ತಿಮ್ಮೇಶ ಬಿ.ಎನ್ ಅವರಿಗೆ ಭಾನುವಾರ ಸಂಜೆ ಸುಮಾರಿಗೆ ಶಿರೂರು ಗ್ರಾಮದ ಕರಾವಳಿ ಸಮುದ್ರ ತೀರದ ಬಳಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಜುಗಾರಿ ಆಟವಾಡುತ್ತಿದ್ದಾರೆಂದು ಖಚಿತ ಮಾಹಿತಿ ಬಂದಿದ್ದು ಈ ಹಿನ್ನೆಲೆ ಆ ಸ್ಥಳಕ್ಕೆ ದಾಳಿ ನಡೆಸಲು ನ್ಯಾಯಾಲಯದ ಅನುಮತಿ ಪಡೆದು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಆರೋಪಿತರನ್ನು ಸುತ್ತುವರಿದು ಹಿಡಿದಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ತಾವು ಹಣವನ್ನು ಪಣವಾಗಿಟ್ಟು ಅಂದರ್- ಬಾಹರ್ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ.

ಅಂದರ್ ಬಾಹರ್ ಜುಗಾರಿ ಆಟಕ್ಕೆ ಉಪಯೋಗಿಸಿದ ಸೊತ್ತುಗಳಾದ ಹಳೆಯ ದಿನಪತ್ರಿಕೆ ಡೈಮಾನ್,ಆಟಿನ್. ಇಸ್ಪೀಟ್, ಕಳವಾರ್ ಚಿತ್ರಗಳಿರುವ 52 ಇಸ್ಪೀಟ್ ಎಲೆಗಳು, 18480 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.