ಕರಾವಳಿ

ಐದು ವರ್ಷ ಕೂಡ ಜನರ ಮಾತಿಗೆ ಬೆಲೆ ನೀಡುವ ಪ್ರಜಾಪ್ರಭುತ್ವ ದೇಶದಲ್ಲಿ ಬರಬೇಕು : ನಟ ಉಪೇಂದ್ರ

Pinterest LinkedIn Tumblr

ಮಂಗಳೂರು, ಎಪ್ರಿಲ್.04: ಪ್ರಜಾಕೀಯವು ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಈಗಾಗಲೇ 14 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ಮುಖ್ಯಸ್ಥ, ನಟ ಉಪೇಂದ್ರ ಹೇಳಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡದಲ್ಲಿ ಉತ್ತಮ ಪ್ರಜಾಕೀಯ ಪಕ್ಷದಿಂದ ವಿಜಯ್ ಶ್ರೀನಿವಾಸ್ ಅವರು ಸ್ಪರ್ಧಿಸುತ್ತಿದ್ದಾರೆ. ಪ್ರಚಾರದ ವೇಳೆ ಕರಪತ್ರಗಳನ್ನು ನೀಡಿ ಜನರಿಂದ ಅವರ ಬೇಡಿಕೆಗಳನ್ನು ಸಂಗ್ರಹಿಸಲಾಗುವುದು. ಅದನ್ನು ಮುಂದೆ ಆಡಳಿತ ವರ್ಗದ ಮುಂದಿಟ್ಟು ಚರ್ಚಿಸಿ ಸಿದ್ಧಪಡಿಸಿದ ಯೋಜನೆಗಳನ್ನು ಜನತೆಯ ಮುಂದಿಡುತ್ತೇವೆ ಎಂದು ಹೇಳಿದರು.

ನಮ್ಮದು ರಾಜಕೀಯವಲ್ಲ. ನಮ್ಮದು ಪ್ರಜಾಕೀಯ. ವ್ಯಾಪಾರಿ ರಾಜಕಾರಣದಿಂದ ಪ್ರಜಾಕಾರಣದತ್ತ ಪ್ರಜಾಪ್ರಭುತ್ವಕ್ಕೊಂದು ಹೊಸ ಆಯಾಮ ನೀಡುವ ಉದ್ದೇಶದಿಂದ ಇದು ನಮ್ಮ ಪ್ರಯತ್ನವಾಗಿದೆ. ಬದಲಾವಣೆ ಆಗಬೇಕಾದರೆ ಪ್ರಯತ್ನಗಳು ಅತ್ಯಗತ್ಯ. ಆ ನಿಟ್ಟಿನಲ್ಲಿ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಇದು ನಮ್ಮ ಪ್ರಯತ್ನವಾಗಿದೆ ಎಂದು ಉಪೇಂದ್ರ ಹೇಳಿದರು.

ರಾಜಕೀಯದಲ್ಲಿ ಯುವಕರು ಮುಂದೆ ಬರಬೇಕು. ನಾವು ಯಾರನ್ನು ಕೂಡ ದೂರುವುದಿಲ್ಲ. ಯಾವುದೇ ಪಕ್ಷವನ್ನು ಟೀಕೆ ಮಾಡಲ್ಲ. ನಮ್ಮ ವಿಚಾರಗಳ ಬಗ್ಗೆ ಚರ್ಚೆ ಆಗಬೇಕು. ಆಗಲೇ ದೇಶ ಅಭಿವೃದ್ಧಿ ಸಾಧ್ಯ. ಬದಲಾವಣೆ ಜನ ರಿಂದಲೇ ಆಗಬೇಕೆಂಬುದು ನಮ್ಮ ಪ್ರಯತ್ನವಾಗಿದೆ ಎಂದರು.

ನಮ್ಮ ಪಕ್ಷ ವಿಭಿನ್ನ ಅಲ್ಲ. ಇಂದಿನ ಸುಳ್ಳಿನ ಪ್ರಪಂಚದಲ್ಲಿ ನಮಗೆ ಸತ್ಯವೇ ವಿಭಿನ್ನವಾಗಿ ಕಾಣುತ್ತಿದೆ. ನಾವು ಸಂವಿಧಾನದಲ್ಲಿರುವುದನ್ನೇ ಮಾತನಾಡುತ್ತಿದ್ದೇವೆ. ಮತದಾನದ ಒಂದು ದಿನ ಮಟ್ಟಿಗೆ ಮಾತ್ರ ಪ್ರಜೆಗಳು ರಾಜರಾಗ ಬಾರದು. ಐದು ವರ್ಷ ಕೂಡ ಅವರ ಮಾತಿಗೆ ಬೆಲೆ ನೀಡುವ ನಿಜವಾದ ಪ್ರಜಾಪ್ರಭುತ್ವ ಈ ದೇಶದಲ್ಲಿ ಬರಬೇಕು ಎಂದರು.

ಪ್ರಜಾಕೀಯದ ಆದರ್ಶಗಳನ್ನು ಈಡೇರಿಸಲು ಮಹಾಘಟ್‌ಬಂಧನ್‌ನಂತಹ ಪ್ರಕ್ರಿಯೆಗೆ ಮುಂದಾಗುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ, ನಮ್ಮ ಮಹಾಘಟ್‌ಬಂಧನ್ ಜನರ ಜತೆ. ಅದು ಆದಾಗ ಪ್ರಜೆಗಳಿಗೆ ಹಕ್ಕು ಸಿಗಲಿದೆ. ಪ್ರಜೆಳಿಗೆ ಅಧಿಕಾರ ದೊರೆಯಲಿದೆ. ನಾವು ಮತ್ತೊಂದು ರಾಜಕೀಯ ಪಕ್ಷವಾಗಿ ಬಂದಿಲ್ಲ. ನಮ್ಮಲ್ಲಿ ಹೈಕಮಾಂಡ್ ಇಲ್ಲ. ಪ್ರಸ್ತುತ ರಾಜರ ಕೈಯಲ್ಲಿರುವ ಅಧಿಕಾರವನ್ನು ಪ್ರಜೆಗಳಿಗೆ ನೀಡುವ ಪ್ರಯತ್ನ ನಮ್ಮದು. ಕರ್ನಾಟಕ ರಾಜ್ಯಕ್ಕೆ ಪ್ರಬಲವಾದ ಒಂದು ಪ್ರಾದೇಶಿಕ ಪಕ್ಷದ ಅಗತ್ಯ ಇದೆ. ಮುಂದೆ ಆ ನಿರ್ಧಾರವನ್ನು ಕೂಡ ಜನರ ತೆಗೆದುಕೊಳ್ಳುತ್ತಾರೆ. ಯಾವ ಪಕ್ಷ ಬೇಕು, ಕೇಂದ್ರದಲ್ಲಿ ಯಾವ ಸರಕಾರ ಬರಬೇಕು ಎಂಬುದನ್ನು ಜನರೇ ನಿರ್ಧಾರ ಮಾಡುತ್ತಾರೆ ಎಂದು ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಅಭ್ಯರ್ಥಿ ವಿಜಯ್ ಶ್ರೀನಿವಾಸ್ ಉಪಸ್ಥಿತರಿದ್ದರು.

Comments are closed.