ಕರಾವಳಿ

ಉಡುಪಿ ಎಸ್‌ಪಿ ಲಕ್ಷ್ಮಣ ನಿಂಬರಗಿ ವರ್ಗಾವಣೆ: ನೂತನ ಎಸ್‌ಪಿ ನಿಶಾ ಜೇಮ್ಸ್

Pinterest LinkedIn Tumblr

ಉಡುಪಿ: ಜಿಲ್ಲಾ ಪೊಲೀಸ್ ವರಿಷ್ಠಾಧಕಾರಿ ಲಕ್ಷ್ಮಣ ಬಿ. ನಿಂಬರಗಿ ಅವರನ್ನು ಬೆಂಗಳೂರು ನಿಸ್ತಂತು ವಿಭಾಗದ (ವೈರ್‌ಲೆಸ್) ಎಸ್ಪಿ ಹುದ್ದೆಗೆ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಉಡುಪಿ ಜಿಲ್ಲೆಯ ನೂತನ ಎಸ್ಪಿ ಆಗಿ ಬೆಂಗಳೂರಿನ ಕೆಎಸ್ಆರ್ ಪಿ (ರಾಜ್ಯ ಸಶಸ್ತ್ರ ಮೀಸಲು ಪಡೆ) 4ನೇ ಬೆಟಾಲಿಯನ್ ಕಮಾಂಡೆಂಟ್ ಆಗಿರುವ ನಿಶಾ ಜೇಮ್ಸ್ ನೇಮಕಗೊಂಡಿದ್ದಾರೆ.

(ನೂತನ ಎಸ್ಪಿ ನಿಶಾ ಜೇಮ್ಸ್)

ಸೂಪರ್ ಕಾಪ್ ಎಸ್ಪಿ….
ಎಸ್​ಪಿ ಲಕ್ಷ್ಮಣ ನಿಂಬರ್ಗಿ ಜಿಲ್ಲೆಯ ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ ಹೆಚ್ಚಿಸಿದ್ದಲ್ಲದೇ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಹೆಚ್ಚು ಒತ್ತು ನೀಡಿದ್ದರು. ಪೊಲೀಸ್ ಫೋನ್ ಇನ್ ಕಾರ್ಯಕ್ರಮದ ಮೂಲಕ ಜನತೆಯ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಸೂಕ್ತ ಪರಿಹಾರ ದೊರಕಿಸಿಕೊಡುವಲ್ಲಿ ಕ್ರಮಕೈಗೊಂಡಿದ್ದರು. ಹಲವು ವರ್ಷಗಳಿಂದ ಬಗೆಹರಿಯದ ಹತ್ತಾರು ಪ್ರಕರಣಗಳು ಫೋನ್ ಇನ್ ಕಾರ್ಯಕ್ರಮದ ಮೂಲಕ ಬಗೆಹರಿದ ಉದಾಹರಣೆಗಳಿತ್ತು. ಜಿಲ್ಲೆಯಲ್ಲಿ ನಡೆದ ಗಂಭೀರ ಅಪರಾಧ ಪ್ರಕರಣಗಳನ್ನು ನಾಜೂಕಾಗಿ ಬೇಧಿಸಿ ಇಲಾಖೆಯ ಕೀರ್ತಿ ಹೆಚ್ಚಿಸಿದ್ದರು.

ಕೋಟ ಪ್ರಕರಣಕ್ಕೆ ಜನರಿಂದ ಭೇಷ್…
ಕೋಟ ಅವಳಿ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಎಸ್ಪಿ ಲಕ್ಷ್ಮಣ ನಿಂಬರಗಿಯವರ ಪಾತ್ರ ಮಹತ್ವವಾದದ್ದು. ಯಾವುದೇ ಒತ್ತಡಕ್ಕೂ ಮಣಿಯದೇ ನಿಸ್ಪಕ್ಷಪಾತ ತನೀಕೆ ನಡೆಸಿ ಜಿಲ್ಲಾಪಂಚಾಯತ್ ಸದಸ್ಯ ಸೇರಿದಂತೆ ಈವರೆಗೂ ಹದಿನೇಳು ಮಂದಿ ಆರೋಪಿಗಳನ್ನು ಬಂಧಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ಇಬ್ಬರು ಸಿಬ್ಬಂದಿಗಳು ಶಾಮೀಲಾಗಿದ್ದು ತನಿಖೆ ವೇಳೆ ತಿಳಿದಾಗ ಇಬ್ಬರನ್ನು ಬಂಧಿಸಿದ್ದರು.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸ್ವತಃ ಅಖಾಡಕ್ಕೆ ಇಳಿಯುತ್ತಿದ್ದ ಎಸ್ಪಿ ಗಲಾಟೆ, ಗಲಭೆ ಮಾಡುವರ ವಿರುದ್ಧ ಖಡಕ್ ಕ್ರಮಕೈಗೊಂಡಿದ್ದರು. ಇಸ್ಪಿಟ್ ಕ್ಲಬ್, ಹುಕ್ಕಾ ಬಾರ್, ಪಬ್, ವೇಶ್ಯಾವಾಟಿಕೆ ಮೊದಲಾದ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದಲ್ಲದೇ ಮಟ್ಕಾ ದಂಧೆ ನಿಲ್ಲಿಸಲು ಶಿಸ್ತು ಕ್ರಮಕೈಗೊಂಡು ಮಟ್ಕಾ ದಂಧೆ ಮಾಡುವರ ಪರೇಡ್ ನಡೆಸಿ ಎಚ್ಚರಿಕೆ ನೀಡಿದ್ದರು.

ಗಾಂಜಾ ಮೊದಲಾದ ಮಾಧಕ ವ್ಯವಸಗಳು ಜಿಲ್ಲೆಯಲ್ಲಿ ನಡೆಯುತ್ತಿದ್ದ ಬಗ್ಗೆ ಗಂಭೀರವಾಗಿ ಚಿಂತಿಸಿದ ಎಸ್ಪಿಯವರು ಜಿಲ್ಲಾ ಪತ್ರಕರ್ತರು ಮತ್ತು ಸಮಾನ ಮನಸ್ಕ ಸಂಘಟನೆಗಳ ಒಗ್ಗೂಡುವಿಕೆಯಲ್ಲಿ ಮಾಧಕ ವ್ಯಸನ ವಿರೋಧಿ ಮಾಸಾಚರಣೆ ಮೂಲಕ ಜಿಲ್ಲಾದ್ಯಂತ ಸೈಕ್ಲಥಾನ್, ಮ್ಯಾರಥಾನ್, ವಾಕಥಾನ್ ಮೊದಲಾದ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡು ಯುವಜನತೆಯಲ್ಲಿ ಎಚ್ಚರಿಕೆಯನ್ನು ಮೂಡಿಸುವ ಪ್ರಯತ್ನ ಮಾಡಿದ್ದರು. ಅಷ್ಟೇ ಅಲ್ಲದೇ ಗಾಂಜಾ ಪಿಡುಗಿನ ಹಿನ್ನೆಲೆ ಮಣಿಪಾಲ ಭಾಗದಲ್ಲಿ ಸಾಕಷ್ಟು ದಾಳಿಗಳು ನಡೆದು ಹಲವಾರು ಪ್ರಕರಣಗಳೇ ದಾಖಲಾಗಿದ್ದವು.

(ವರದಿ- ಯೋಗೀಶ್ ಕುಂಭಾಸಿ)

Comments are closed.