ಕರಾವಳಿ

ದ.ಕ. ಜಿಲ್ಲೆಯಲ್ಲಿ ಮಂಗನಕಾಯಿಲೆ ಪತ್ತೆಯಾಗಿಲ್ಲ : ಜಿಲ್ಲಾ ವೈದ್ಯಾಧಿಕಾರಿ ಡಾ.ರಾಮಕೃಷ್ಣ ರಾವ್

Pinterest LinkedIn Tumblr

ಮಂಗಳೂರು, ಫೆಬ್ರವರಿ.07: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗನಕಾಯಿಲೆಗೆ ಸಂಬಂಧಿಸಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಜಿಲ್ಲೆಯಲ್ಲಿ ಮಂಗನ ಕಾಯಿಲೆಯ ಹಿನ್ನೆಲೆಯಲ್ಲಿ 11 ಮಂದಿ ಶಂಕಿತ ರೋಗಿಗಳ ರಕ್ತ ಮಾದರಿಯನ್ನು ಕೂಡಾ ತಪಾಸಣೆಗೆ ಕಳುಹಿಸಲಾಗಿದ್ದು, ರೋಗ ಇಲ್ಲದಿರುವುದು ದೃಢಪಟ್ಟಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಹೇಳಿದ್ದಾರೆ.

ಈ ಬಗ್ಗೆ ಸುದ್ಧಿಗಾರರ ಜೊತೆ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯಲ್ಲಿ ಪತ್ತೆಯಾದ ಸತ್ತ ಮಂಗಗಳಲ್ಲಿಯೂ ಕಾಯಿಲೆ ಇಲ್ಲದಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು 22 ಸತ್ತ ಮಂಗಗಳು ಪತ್ತೆಯಾಗಿದ್ದು, ಐದು ಮಂಗಗಳ ಮೃತದೇಹದ ಮಾದರಿಯನ್ನು (ಸ್ಯಾಂಪಲ್) ಕಾಯಿಲೆ ಇರುವ ಬಗ್ಗೆ ತಪಾಸಣೆಗಾಗಿ ಪುಣೆಗೆ ಕಳುಹಿಸಲಾಗಿತ್ತು. ಅದರಲ್ಲಿ ನಾಲ್ಕು ಮಾದರಿಗಳ ವರದಿಗಳು ಬಂದಿದ್ದು, ಕಾಯಿಲೆ ಇಲ್ಲದಿರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

ಕೊಯಿಲದಲ್ಲಿ ಪತ್ತೆಯಾದ ಸತ್ತ ಮಂಗನ ಮಾದರಿಯನ್ನು ಜನವರಿ 17ರಂದು, ಕಾಣಿಯೂರಿನಲ್ಲಿ ಪತ್ತೆಯಾದ ಸತ್ತ ಮಂಗನ ಮಾದರಿಯನ್ನು ಜ. 21ರಂದು ಚಾರ್ಮಾಡಿ ಕಲ್ಲಕಾರುರಿನಲ್ಲಿ ಪತ್ತೆಯಾದ ಮಾದರಿ ಜ.30, ಶಿರಾಡಿ ಅಡ್ಡಹೊಳೆಯಲ್ಲಿ ಪತ್ತೆಯಾದ ಮಾದರಿಯನ್ನು ಜ. 25ರಂದು ಹಾಗೂ ನಾರಾವಿಯಲ್ಲಿ ಪತ್ತೆಯಾದ ಮಾದರಿಯನ್ನು ಫೆ. 1ರಂದು ತಪಾಸಣೆಗೆ ಕಳುಹಿಸಲಾಗಿತ್ತು. ನಾರಾವಿಯ ಮಾದರಿ ವರದಿ ಹೊರತುಪಡಿಸಿ ಉಳಿದ ನಾಲ್ಕು ಕಡೆಗಳ ಮಾದರಿ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಆಗಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Comments are closed.