ಕರಾವಳಿ

ಯುವತಿಯರ ಸರಣಿ ಹಂತಕ ಸಯನೈಡ್ ಮೋಹನ್‍ಗೆ ಜೀವನಪರ್ಯಂತ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

Pinterest LinkedIn Tumblr

ಮಂಗಳೂರು, ಜನವರಿ.31: ಯುವತಿಯರ ಸರಣಿ ಹಂತಕ, ಅತ್ಯಾಚಾರ ಆರೋಪಿ ಸಯನೈಡ್ ಮೋಹನ್ ಕುಮಾರ್‌ಗೆ ಜೀವನಪರ್ಯಂತ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಹೆಚ್ಚುವರಿ ನ್ಯಾಯಾಲಯ ತೀರ್ಪು ನೀಡಿದೆ.

ಮಿತ್ತೂರಿನ ಯುವತಿಯೊಬ್ಬಳ ಅತ್ಯಾಚಾರ ಹಾಗೂ ಹತ್ಯೆಯ ಆರನೇ ಪ್ರಕರಣದಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯ ಈ ತೀರ್ಪು ನೀಡಿದೆ.

ಪ್ರಕರಣ ವಿವರ: ಪುತ್ತೂರಿನ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ನರ್ಸ್ ಆಗಿದ್ದ ಮಿತ್ತೂರಿನ 31 ವಯಸ್ಸಿನ ಯುವತಿಯನ್ನು ಸುಧಾಕರ ಗೌಡ ಎಂಬ ಹೆಸರಿನಲ್ಲಿ ಮೋಹನ್‌ ಕುಮಾರ್ ಪರಿಚಯ ಬೆಳೆಸಿಕೊಂಡಿದ್ದ. ಆಕೆಯ ಫೋನ್ ನಂಬರ್ ತೆಗೆದುಕೊಂಡು 2009 ಎ.22ರಂದು ಪುತ್ತೂರು ಬಸ್ ನಿಲ್ದಾಣಕ್ಕೆ ಆಹ್ವಾನಿಸಿದ್ದ. ಅಲ್ಲಿನ ಬ್ಯಾಂಕಿನಿಂದ ಯುವತಿಯ ಖಾತೆಯಿಂದ ಎರಡು ಸಾವಿರ ರೂ. ನಗದು ಪಡೆದುಕೊಂಡು ಅವರಿಬ್ಬರೂ ಮೈಸೂರಿಗೆ ತೆರಳಿದ್ದರು.

(ಕಡತ ಚಿತ್ರಗಳು)

 

ಮೈಸೂರಿನ ವಸತಿಗೃಹದಲ್ಲಿ ಅಂದೇ ರಾತ್ರಿ ವಿವಾಹವಾಗುವುದಾಗಿ ನಂಬಿಸಿ, ಯುವತಿ ಮೇಲೆ ಅತ್ಯಾಚಾರ ನಡೆಸಿದ್ದನು. ತನಗೆ ಕೆಲಸವೊಂದರ ಸಂದರ್ಶನಕ್ಕಾಗಿ ಮರುದಿನ ಆಕೆಯ ಚಿನ್ನಾಭರಣವನ್ನು ತೆಗೆದಿರಿಸಿದ್ದನು. ಬಳಿಕ ಆಕೆಯನ್ನು ಬಸ್ ನಿಲ್ದಾಣಕ್ಕೆ ಕಳುಹಿಸಿ ಅಲ್ಲಿ ಗರ್ಭಿಣಿಯಾಗದಂತೆ ತಡೆಯಲು ಮಾತ್ರೆಯನ್ನು ಸೇವಿಸುವಂತೆ ಹೇಳಿದ್ದನು. ಸಯನೈಡ್ ಸೇವಿಸಿದ ಆಕೆ ಶೌಚಗೃಹದಲ್ಲಿ ಮೃತಪಟ್ಟಿದ್ದಳು ಎನ್ನಲಾಗಿದ್ದು, ಬಳಿಕ ಪೊಲೀಸರು ಶವದ ಮರಣೋತ್ತರ ಪರೀಕ್ಷೆ ನಡೆಸಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿದ್ದರು.

ಈ ಮಧ್ಯೆ ಮೈಸೂರಿನಿಂದ ಪುತ್ತೂರಿಗೆ ಆಗಮಿಸಿದ ಮೋಹನ್‌ ಕುಮಾರ್, ‘ನಾನು ಆಕೆಯನ್ನು ವಿವಾಹವಾಗಿದ್ದು, ನಮ್ಮನ್ನು ಹುಡುಕುವ ಪ್ರಯತ್ನ ಮಾಡಬೇಡಿ’ ಎಂದು ದೂರವಾಣಿ ಕರೆ ಮಾಡಿ ತಿಳಿಸಿದ್ದನು. ಇದರಿಂದಾಗಿ ಆಕೆ ನಾಪತ್ತೆಯಾದರೂ ಮನೆ ಮಂದಿ ದೂರು ನೀಡಿರಲಿಲ್ಲ. ಸಯನೈಡ್ ಮೋಹನ್‌ ಕುಮಾರ್ ನಡೆಸಿದ ಯುವತಿಯರ ಸರಣಿ ಅತ್ಯಾಚಾರ, ಹತ್ಯೆ ಪ್ರಕರಣ ಬೆಳಕಿಗೆ ಬಂದ ಬಳಿಕ ಆತನೇ ಈ ಯುವತಿಯನ್ನು ಹತ್ಯೆ ನಡೆಸಿದ ಸಂಗತಿಯನ್ನು ಬಾಯಿಬಿಟ್ಟಿದ್ದ.

2009 ಡಿ.23ರಂದು ಬಂಟ್ವಾಳ ಇನ್‌ಸ್ಪೆಕ್ಟರ್ ನಂಜುಂಡೇಗೌಡ ಬಾಡಿ ವಾರಂಟ್ ಪಡೆದು ಮೋಹನ್‌ ಕುಮಾರ್‌ನನ್ನು ವಿಚಾರಣೆ ನಡೆಸಿದ್ದರು. ಅಲ್ಲದೆ, ಆತನನ್ನು ಮೈಸೂರಿಗೆ ಕರೆದುಕೊಂಡು ಹೋಗಿ ಅಲ್ಲಿ ಆತ ಉಳಿದುಕೊಂಡಿದ ವಸತಿಗೃಹ, ಅಲ್ಲಿ ಸುಧಾಕರ ಗೌಡ ಎಂಬ ಹೆಸರಿನಲ್ಲಿ ಕೊಠಡಿ ಪಡೆದುಕೊಂಡಿರುವುದು ದೃಢಪಟ್ಟಿತ್ತು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಜುಡಿತ್ ಎಂ.ಕ್ರಾಸ್ತಾ ವಾದಿಸಿದ್ದರು.

ವೀಡಿಯೊ ಕಾನ್ಫರೆನ್ಸ್‌ನಲ್ಲಿ ವಿಚಾರಣೆ: ಆರೋಪಿ ಮೋಹನ್ ಕುಮಾರ್‌ಗೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸಾಯುವ ತನಕ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಆರೋಪಿ ಮೋಹನ್ ಕುಮಾರ್‌ನ ವಿಚಾರಣೆಯನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆಸಲಾಗಿತ್ತು. ಪ್ರಕರಣದಲ್ಲಿ 38 ಸಾಕ್ಷ್ಯ, 72 ದಾಖಲೆಗಳು ಹಾಗೂ 35 ಸಾಮಗ್ರಿಗಳನ್ನು ವಿಚಾರಣೆಗೆ ಪರಿಗಣಿಸಲಾಗಿತ್ತು.

ಇದು ಆರನೇ ಪ್ರಕರಣವಾಗಿದ್ದು, ಒಂದು ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯ ನೀಡಿದ ಮರಣದಂಡನೆ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಇದು ಸೇರಿದಂತೆ ಒಟ್ಟು ಮೂರು ಪ್ರಕರಣಗಳಲ್ಲಿ ಮೋಹನ್ ಕುಮಾರ್‌ಗೆ ಜೀವನಪರ್ಯಂತ ಜೀವಾವಧಿ ಶಿಕ್ಷೆ ವಿಧಿಸಿದಂತಾಗಿದೆ.

ಶಿಕ್ಷೆಯ ವಿವರ: ಐಪಿಸಿ ಸೆಕ್ಷನ್ 366 (ಅಪಹರಣ)ರಡಿ 6 ವರ್ಷ ಕಠಿಣ ಸಜೆ, 3 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1 ತಿಂಗಳ ಸಜೆ. ಸೆಕ್ಷನ್ 376 (ಅತ್ಯಾಚಾರ)ರಡಿ 7 ವರ್ಷ ಕಠಿಣ ಸಜೆ, 3 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1 ತಿಂಗಳು ಸಜೆ. ಸೆಕ್ಷನ್ 417 (ವಂಚನೆ)ರಡಿ 6 ತಿಂಗಳ ಕಠಿಣ ಸಜೆ, ಸೆಕ್ಷನ್ 328 (ವಿಷ ಉಣಿಸಿದ್ದು)ರಡಿ 7 ವರ್ಷ ಸಜೆ 3 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1 ತಿಂಗಳ ಸಜೆ. ಸೆಕ್ಷನ್ 302 (ಕೊಲೆ)ರಡಿ ಮರಣತನಕ ಜೀವಾವಧಿ ಶಿಕ್ಷೆ, ಸೆಕ್ಷನ್ 201 (ಸಾಕ್ಷಿನಾಶ) 5 ವರ್ಷಗಳ ಕಠಿಣ ಸಜೆ. 3 ಸಾವಿರ ರೂ. ದಂಡ, ಸೆಕ್ಷನ್ 392 (ಚಿನ್ನಾಭರಣ ಸುಲಿಗೆ) 5 ವರ್ಷಗಳ ಕಾಲ ಕಠಿಣ ಸಜೆ, 3 ಸಾವಿರ ರೂ. ದಂಡ, ದಂಡತೆರಲು ತಪ್ಪಿದಲ್ಲಿ 1 ತಿಂಗಳ ಸಜೆ ವಿಧಿಸಿ ತೀರ್ಪು ನೀಡಲಾಗಿದೆ. ಕೊಲೆಯಾದ ಯುವತಿಯ ಕುಟುಂಬ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಪಡೆದುಕೊಳ್ಳಲು ಅರ್ಹರೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ವರದಿ ಕೃಪೆ : ವಾಭಾ

Comments are closed.