ಕರಾವಳಿ

ಕನ್ನಡ ಶಾಲೆಗಳನ್ನು ಬೆಳೆಸಿದರೆ ಕನ್ನಡ ಭಾಷೆ ಸೋಲುವುದಿಲ್ಲ ; 23ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ.ಬಿ.ಎಂ.ಹೆಗ್ಡೆ

Pinterest LinkedIn Tumblr

ಮಂಗಳೂರು : ದ.ಕ. ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಶ್ರೀಗಳ ಉಪಸ್ಥಿತಿಯಲ್ಲಿ ಮಂಗಳವಾರ ಚಾಲನೆ ನೀಡಲಾಗಿದ್ದು, ‘ವ್ಯಸನ ಮುಕ್ತ ಬದುಕು-ಸ್ವಸ್ಥ ಸಮಾಜ’ಎಂಬ ಆಶಯದೊಂದಿಗೆ ಜ 31ರವರೆಗೆ ಮಂಗಳೂರು ಪುರಭವನದಲ್ಲಿ ಸಮ್ಮೇಳನ ನಡೆಯಲಿದೆ.

ಮಂಗಳೂರು ಪುರಭವನದ ಕುದ್ಮುಲ್ ರಂಗರಾವ್ ಸಭಾಂಗಣ, ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಾಂಗಣ, ಬಿ.ಎಂ. ಇದಿನಬ್ಬ ವೇದಿಕೆಯಲ್ಲಿ ಆಯೋಜಿಸಲಾದ ಸಮ್ಮೇಳನವನ್ನು ಸಾಹಿತಿ ಡಾ.ನಾ.ಡಿಸೋಜ ಉದ್ಘಾಟಿಸಿದರು. ಕಾಲೇಜುಗಳ ಉಪನ್ಯಸಕರೇ ಲೇಖಕರಾಗಬೇಕು ಅಂತೇನಿಲ್ಲ, ವೈದ್ಯರೂ ಲೇಖಕರಾಗಿ ಸಾಹಿತ್ಯ ಕೃಷಿಯಲತೊಡಗಿಸಿಕೊಳ್ಳಬಹುದಾಗಿದೆ. ಸಾಹಿತ್ಯ ಕ್ಷೇತ್ರಕ್ಕೆ ಡಾ.ಬಿ.ಎಂ.ಹೆಗ್ಡೆ ನೀಡಿದ ಸೇವೆ ಅನುಕರಣೀಯ ಎಂದು ಸಾಹಿತಿ ಡಾ.ನಾ.ಡಿಸೋಜ ಈ ವೇಳೆ ಅಭಿಪ್ರಾಯಪಟ್ಟರು.

3ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಡಾ.ಬಿ.ಎಂ. ಹೆಗ್ಡೆ ವಹಿಸಿದ್ದರು. ಸಿಬಿಎಸ್ಸಿ, ಐಸಿಎಸ್ಸಿ ಆಂಗ್ಲ ಮಾಧ್ಯಮದ ಮಾದರಿಯಲ್ಲೇ ಖಾಸಗಿಯವರು ಕನ್ನಡ ಶಾಲೆಗಳನ್ನು ಬೆಳೆಸಿದರೆ ಖಂಡಿತ ಕನ್ನಡ ಭಾಷೆ ಸೋಲುವುದಿಲ್ಲ. ಇದಕ್ಕೆ ಮೂಡುಬಿದಿರೆಯ ಡಾ.ಮೋಹನ ಆಳ್ವರ ಕನ್ನಡ ಮಾಧ್ಯಮ ಶಾಲೆಯನ್ನು ನಾವು ಮಾದರಿಯಾಗಿ ಸ್ವೀಕರಿಸಬೇಕು ಎಂದು ಡಾ.ಬಿ.ಎಂ. ಹೆಗ್ಡೆ ಹೇಳಿದರು.

ಚೀನಾ, ರಷ್ಯಾ, ಜರ್ಮನ್, ಜಪಾನ್ ರಾಷ್ಟ್ರಗಳು ಇದೇ ರೀತಿಯಲ್ಲಿ ಪ್ರಾದೇಶಿಕ ಭಾಷೆಯ ಉತ್ಕ್ರಷ್ಟ ಗುಣಮಟ್ಟದ ಶಾಲೆಗಳನ್ನು ನಡೆಸುತ್ತಿವೆ. ಇಂತಹ ಸಂಸ್ಥೆಗಳನ್ನು ಮಾದರಿಯಾಗಿ ಇರಿಸಿಕೊಂಡು ಇಲ್ಲಿನ ಖಾಸಗಿ ಮತ್ತು ಸರಕಾರಿ ಸಂಸ್ಥೆಗಳು, ಕನ್ನಡ ಶಾಲೆಗಳನ್ನು ಕಟ್ಟಿದರೆ, ಖಂಡಿತವಾಗಿಯೂ ಅದು ಕನ್ನಡದ ಬೆಳವಣಿಗೆಗೆ ಪೂರಕ ವಾತಾವರಣವನ್ನು ಸೃಷ್ಟಿಸಬಲ್ಲುದು ಎಂದು ಹೇಳಿದರು.

ಪ್ರಾಥಮಿಕ ಶಾಲಾ ಹಂತದಲ್ಲಿ ಕನ್ನಡ ಕಡ್ಡಾಯ: ಭಾಷೆ ಮನುಷ್ಯನ ಅತೀ ಅಮೂಲ್ಯವಾದ ಸಂಶೋಧನೆಯ ಫಲವಾಗಿದೆ. ತಮ್ಮ ಭಾವನೆ, ಆಲೋಚನೆ, ವಿಚಾರಗಳನ್ನು ಅಭಿವ್ಯಕ್ತಿಸುವುದಕ್ಕೆ ಇರುವ ಪ್ರಮುಖ ಮಾಧ್ಯಮವೇ ಭಾಷೆಯಾಗಿದೆ. ಪ್ರಾಥಮಿಕ ಶಾಲಾ ಹಂತದಲ್ಲಿ ರಾಜ್ಯದ ಭಾಷೆಯಾದ ಕನ್ನಡ ದಲ್ಲಿಯೇ ಶಿಕ್ಷಣ ಮಾಧ್ಯಮ ಇರಬೇಕು. ‘ಸರಳವಾದ ಇವನು ಬಸವ, ಅವಳು ಕಮಲ’ ಎಂಬ ಆರಂಭಿಕ ಪಾಠಗಳಿಗೆ ವ್ಯತಿರಿಕ್ತವಾಗಿ ನಾಲಗೆ ಹೊಸೆಯುವ ‘ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್’ ಪ್ರವೇಶಿಸಿರುವುದು ವಿಪರ್ಯಾಸ ಎಂದರು.

ವೈದ್ಯಕೀಯ ಕನ್ನಡ ಶಬ್ದಕೋಶ ಪ್ರಕಟಿಸಲಿ: ಕನ್ನಡದಲ್ಲಿ ಇನ್ನಷ್ಟು ವೈದ್ಯಕೀಯ ಸಾಹಿತ್ಯ ಸೃಷ್ಟಿಯಾಗಬೇಕು. ಅದಕ್ಕಾಗಿ ವೈದ್ಯಕೀಯ ಪಾರಿಭಾಷಿಕ ಶಬ್ದಗಳ ಶಬ್ದಕೋಶದ ಅವಶ್ಯಕತೆ ಇದೆ. ಇಂಗ್ಲೀಷ್‌ನ ನೂರಾರು ವೈದ್ಯಕೀಯ ಶಬ್ದಗಳಿಗೆ ಸಮಾನವಾದ ಕನ್ನಡದ ಶಬ್ದಗಳ ಶಬ್ದಕೋಶವೊಂದನ್ನು ನಮ್ಮ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಸಾಹಿತ್ಯ ಪರಿಷತ್ ಪ್ರಕಟಿಸಲು ಸಮ್ಮೇಳನಾಧ್ಯಕ್ಷರು ಆಗ್ರಹಿಸಿದರು.

ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಆಶಯ ಭಾಷಣ ಮಾಡಿದರು. ಪೊಳಲಿ ನಿತ್ಯಾನಂದ ಕಾರಂತ ಅಭಿನಂದನ ಭಾಷಣ ಮಾಡಿದರು. ಬೆಳಗ್ಗೆ ಸಚಿವ ಯು.ಟಿ.ಖಾದರ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಮಧ್ಯಾಹ್ನ ನಗರದಲ್ಲಿ ಕನ್ನಡ ಭುವನೇಶ್ವರಿಯ ದಿಬ್ಬಣ ನಡೆಯಿತು.

ಸಾಧಕರಿಗೆ ವಿದ್ವತ್ ಸಮ್ಮಾನ :

ಪಿ.ಗಣಪತಿ ಆಚಾರ್ಯ(ವೇದ ವಿದ್ವಾಂಸರು), ವಂ.ಡಾ.ಲಿಯೋ ಡಿಸೋಜ ಎಸ್.ಜೆ.(ವಿಜ್ಞಾನ), ಪ್ರೊ.ಸುರೇಂದ್ರ ರಾವ್ ಬಿ.(ಸಂಶೋಧನೆ), ಪ್ರೊ.ಬಿ.ಎಂ. ಇಚ್ಲಂಗೋಡು (ಭಾಷೆ, ಸಾಹಿತ್ಯ), ಡಾ. ಕೆ.ವಿ.ರಾವ್ (ವಿಜ್ಞಾನ ಪ್ರಸರಣ), ವಿದ್ವಾನ್ ಡಿ.ಶಂಕರ ಭಟ್ ಪೂತ್ತೂರು (ಸಾಹಿತ್ಯ), ನಾಗೇಶ್ ಎ. ಬಪ್ಪನಾಡು ಮೂಲ್ಕಿ (ವಾದ್ಯಸಂಗೀತ), ವೇದಮೂರ್ತಿ ಮೊಗರ್ನಾಡು ಜನಾರ್ದನ ಭಟ್ ನರಿಕೊಂಬು (ಧಾರ್ಮಿಕ, ಶಿಕ್ಷಣ), ವಾಮಯ್ಯ ಉದ್ಯಾವರ ಮಾಡ (ಜನಪದ), ವಿದ್ವಾನ್ ಎಂ.ನಾರಾಯಣ ಸುರತ್ಕಲ್ (ಶಾಸ್ತ್ರೀಯ ಸಂಗೀತ ), ಭವಾನಿ ಪೆರ್ಗಡೆ (ಜನಪದ) ಅವರಿಗೆ ವಿದ್ವತ್ ಸಮ್ಮಾನ ನೀಡಿ ಗೌರವಿಸಲಾಯಿತು.

ಕನ್ನಡ ಸಿರಿ ಪ್ರದಾನ:

ಅರುವ ಕೊರಗಪ್ಪ ಶೆಟ್ಟಿ ಬೆಳ್ತಂಗಡಿ (ಯಕ್ಷಗಾನ), ಧನಕೀರ್ತಿ ಬಲಿಪ ಮೂಡಬಿದ್ರಿ (ಕೃಷಿ), ಪಟ್ಲ ಸತೀಶ್ ಶೆಟ್ಟಿ, (ಯಕ್ಷಗಾನ), ಮನೋಹರ ಪ್ರಸಾದ್ (ಪತ್ರಿಕಾ ಮಾಧ್ಯಮ), ಚಂದ್ರಶೇಖರ್ ಎಂ. ಮೂಡುಬಿದಿರೆ (ಸಹಕಾರಿ), ಸಿರಿಬಾಗಿಲು ಪ್ರತಿಷ್ಠಾನದ ರಾಮಕೃಷ್ಣ ಮಯ್ಯ ಅವರಿಗೆ ಕನ್ನಡ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಥೆ, ಕವನ ಸಂಕಲನಗಳ ಬಿಡುಗಡೆ :

ಸಮ್ಮೇಳನದ ಸಭಾ ಕಾರ್ಯಕ್ರಮದಲ್ಲಿ ಕಥೆ, ಕವನ ಸಂಕಲನ, ಅನುವಾದ ಸಂಕಲನಗಳನ್ನು ಬಿಡುಗಡೆಗೊಳಿಸಲಾಯಿತು. ಲೀಲಾ ದಾಮೋದರ್ ರಚಿಸಿದ ‘ಗೆಲುವಾಗೆಲೆ ಮನ’ ಪುಸ್ತಕವನ್ನು ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಲೋಕಾರ್ಪಣೆ ಗೊಳಿಸಿದರು. ಪ್ರಜ್ಞಾ ಕುಲಾಲ್ ರಚಿಸಿದ ‘ಭಾವತಂತಿ’ ಪುಸ್ತಕವನ್ನು ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಎ.ಪಿ. ಮಾಲತಿ ಬಿಡುಗಡೆಗೊಳಿಸಿದರೆ, ಅಭಿಜ್ಞಾ ಕೆ.ಸಿ. ಪುತ್ತೂರು ರಚಿಸಿದ ‘ಹೊಂದಳಿರು’ ಕೃತಿಯನ್ನು ಪ್ರೊ.ಎಂ.ಬಿ.ಪುರಾಣಿಕ್, ನಾ.ಕಾರಂತ ಪೆರಾಜೆ ಅವರ ‘ಮಾಸದ ಮೆಲುಕು’ ಪುಸ್ತಕವನ್ನು ನಿತ್ಯಾನಂದ ಎಂ. ಲೋಕಾರ್ಪಣೆಗೊಳಿಸಿದರು.

ಬಿ.ಸತ್ಯವತಿ ಭಟ್ ರಚಿಸಿದ ‘ಕಾಮನಬಿಲ್ಲು’ ಕೃತಿಯನ್ನು ಎ.ಜೆ. ಸಮೂಹ ಸಂಸ್ಥೆಗಳು ಅಧ್ಯಕ್ಷ ಎ.ಜೆ. ಶೆಟ್ಟಿ, ಉದಯಕುಮಾರ ಹಬ್ಬು ಅವರ ‘ಸೂಫಿ ಕವಿ ರೂಮಿ ಕವಿತೆಗಳ ಅನುವಾದ’ ಸಂಕಲನವನ್ನು ಕೊಂಕಣಿ ಭಾಷಾ ಸಂಸ್ಕೃತಿ ಪ್ರತಿಷ್ಠಾನ ಅಧ್ಯಕ್ಷ ಬಸ್ತಿ ವಾಮನ ಶೆಣೈ ಬಿಡುಗಡೆಗೊಳಿಸಿದರು. ದಯಾನಂದ ಕಟೀಲು ಅವರ ‘ಕಾವ್ಯ ಮೃಷ್ಠಾನ್ನ’ ಪುಸ್ತಕವನ್ನು ಸಮ್ಮೇಳನಾಧ್ಯಕ್ಷ ಡಾ.ಬಿ.ಎಂ.ಹೆಗ್ಡೆ ಲೋಕಾರ್ಪಣೆಗೊಳಿಸಿದರು.

ವೇದಿಕೆಯಲ್ಲಿ ಎ.ಜೆ. ಸಮೂಹ ಸಂಸ್ಥೆಗಳು ಅಧ್ಯಕ್ಷ ಎ.ಜೆ. ಶೆಟ್ಟಿ, ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಕೊಂಕಣಿ ಭಾಷಾ ಸಂಸ್ಕೃತಿ ಪ್ರತಿಷ್ಠಾನ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಹರಿಕೃಷ್ಣ ಪುನರೂರು, ವೇದಮೂರ್ತಿ ಪಿ.ಗಣಪತಿ ಆಚಾರ್ಯ, ಕದ್ರಿ, ವಂ.ಡಾ.ಲಿಯೋ ಡಿಸೋಜ ಎಸ್.ಜೆ., ಪ್ರೊ. ಸುರೇಂದ್ರ ರಾವ್ ಬಿ. ಪ್ರೊ. ಬಿ.ಎಂ. ಇಚ್ಲಂಗೋಡು, ಡಾ. ಕೆ.ವಿ. ರಾವ್, ವಿದ್ವಾನ್ ಡಿ. ಶಂಕರ ಭಟ್ ಪೂತ್ತೂರು, ನಾಗೇಶ್ ಎ. ಬಪ್ಪನಾಡು, ಪಟ್ಲ ಸತೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Comments are closed.