ಕರಾವಳಿ

ಎಸ್‌ಡಿ‌ಸಿಸಿ ಅಧ್ಯಕ್ಷ ಡಾ. ಎಂ.ಎನ್‌.ಆರ್ ರಜತ ಸಂಭ್ರಮ : ಕಾರ್ಯಕ್ರಮಕ್ಕೆ ಮೆರುಗು ನೀಡಿದ ಬೃಹತ್ ಸಾಂಸ್ಕೃತಿಕ ಮೆರವಣಿಗೆ

Pinterest LinkedIn Tumblr

ಮಂಗಳೂರು, ಜನವರಿ.19: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ 25 ವರ್ಷಗಳ ಸಾರ್ಥಕ ಅಧ್ಯಕ್ಷತೆ ವಹಿಸಿರುವ ಡಾ. ಎಂ.ಎನ್‌. ರಾಜೇಂದ್ರ ಕುಮಾರ್‌ ಅವರ ರಜತ ಸಂಭ್ರಮ ಮತ್ತು ನವೋದಯ ಸ್ವಸಹಾಯ ಸಂಘಗಳ ವಿಂಶತಿ ಸಮಾವೇಶವನ್ನು ಇಂದು ನಗರದಲ್ಲಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಪೂರ್ವಭಾವಿಯಾಗಿ ಬೃಹತ್ ಮೆರವಣಿಗೆಯು ನಗರದ ಕೊಡಿಯಾಲ್ ಬೈಲ್ ನ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಕೇಂದ್ರ ಕಚೇರಿ ಅವರಣದಿಂದ ಕೇಂದ್ರ ಮೈದಾನದವರೆಗೆ ನಡೆಯಿತು.

ಈ ಬೃಹತ್ ಸಾಂಸ್ಕೃತಿಕ ಮೆರವಣಿಗೆಗೆ ಕೇಂದ್ರ ಸಚಿವ ಸದಾನಂದ ಗೌಡ ಅವರು ಚಾಲನೆ ನೀಡಿದರು. ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ಅಭಿನಂದನ ಸಮಿತಿ ಅಧ್ಯಕ್ಷ ಐಕಳಬಾವ ಡಾ. ದೇವಿಪ್ರಸಾದ್‌, ಸಮಿತಿಯ ಪ್ರಮುಖರಾದ ರಾಜು ಪೂಜಾರಿ, ಶಶಿಕಿರಣ್‌, ಸದಾಶಿವ ಉಳ್ಳಾಲ್‌, ಮೋನಪ್ಪ ಶೆಟ್ಟಿ ಎಕ್ಕಾರು, ಸುನಿಲ್‌ ಕುಮಾರ್‌ ಬಜಗೋಳಿ, ದೇವರಾಜ್‌ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.

ಬ್ಯಾಂಕ್‌ ಆವರಣದಿಂದ ಹೊರಟ ಮೆರವಣಿಗೆಯು ರಮಣ ಪೈ ಹಾಲ್‌ನಿಂದ ರಸ್ತೆಯ ಬಲಬದಿಯಿಂದ ಹಂಪನ್‌ಕಟ್ಟೆ- ಕ್ಲಾಕ್‌ ಟವರ್‌- ಎ.ಬಿ. ಶೆಟ್ಟಿ ಸರ್ಕಲ್‌ ಮೂಲಕ ಮೈದಾನದೊಳಗೆ ಸಾಗಿತು. ಮೆರವಣಿಗೆಯಲ್ಲಿ ಸುಮಾರು 25,000ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

ಮೆರವಣಿಗೆಯಲ್ಲಿ 61ಕ್ಕೂ ಹೆಚ್ಚು ಕಲಾ ತಂಡಗಳು ಪಾಲ್ಗೊಂಡಿದ್ದು, 100 ಚೆಂಡೆಗಳ ತಂಡ ವಿಶೇಷ ಆಕರ್ಷಣೆಯಾಗಿತ್ತು. ಜೊತೆಗೆ ಗೊಂಬೆಗಳ ಆಟ, ಪಾಂಚ್ ಪಂಕರ್ಸ್, ಬಾಡಿಗಾರ್ಡ್ ವೇಷ, ಆಳ್ವಾಸ್ ನ ಗೊರಿಲ್ಲಾ, ಉಡುಪಿಯ ಬೃಹತ್ ಕೋಣ ಮತ್ತು ಕಟ್ಟಪ್ಪ, ಮಂಡ್ಯದ ನಂದಿ ಕಂಬ ಮೆರವಣಿಗೆಗೆ ಮುಂತಾದವುಗಳು ಜನಾಕರ್ಷಣೆ ಪಡೆದವು.

ನಗರದ ಇತಿಹಾಸದಲ್ಲಿಯೇ ಪ್ರಥಮ: ನಗರದ ಇತಿಹಾಸದಲ್ಲಿಯೇ ಪ್ರಥಮ ಎಂಬಂತೆ ನೆಹರೂ ಮೈದಾನದಲ್ಲಿ 3.53 ಲಕ್ಷ ಚ. ಅಡಿಯ ವಿಶಾಲ ಸಭಾಂಗಣ ನಿರ್ಮಿಸಲಾಗಿತ್ತು. ಸಭಾಂಗಣಕ್ಕೆ ಸಹಕಾರಿ ತಣ್ತೀದ ಬೀಜ ಬಿತ್ತಿದ ಮೊಳಹಳ್ಳಿ ಶಿವರಾಯರ ಹೆಸರಿಡಲಾಗಿತ್ತು. ಫ‌ುಟ್ಬಾಲ್‌ ಅಂಗಣ ದಲ್ಲಿ 74×30 ಅಡಿ ವಿಸ್ತಾರದ ವೇದಿಕೆ ನಿರ್ಮಿಸಲಾಗಿದ್ದು, ಇದರಲ್ಲಿ 3 ವೇದಿಕೆ ಸಿದ್ಧಪಡಿಸಲಾಗಿತ್ತು. 210 ಗಣ್ಯರು ಆಸೀನರಾಗಬಹುದಾದ ವಿಶಾಲ “ರಜತ ವೇದಿಕೆ’, ಎಡ  - ಬಲಗಳಲ್ಲಿ ತಲಾ 150 ಮಂದಿ ಆಸೀನರಾಗಲು “ಸಹಕಾರಿ’ ಹಾಗೂ “ನವೋದಯ’ ವೇದಿಕೆ ರಚಿಸಲಾಗಿತ್ತು.

ಫುಟ್ಬಾಲ್‌ ಹಾಗೂ ಕ್ರಿಕೆಟ್‌ ಮೈದಾನ ಸೇರಿ ಒಟ್ಟು 1.60 ಲಕ್ಷ ಆಸನಗಳನ್ನು ಜೋಡಿಸಿಡಲಾಗಿತ್ತು. ಕಾರ್ಯಕ್ರಮವನ್ನು ಸುರಕ್ಷಿತ ಹಾಗೂ ಶಿಸ್ತುಬದ್ಧವಾಗಿ ನಿರ್ವಹಿಸಲು ಪೂರಕವಾಗಿ 100 ಸಿಸಿಟಿವಿಗಳನ್ನು ಅಳವಡಿಸಲಾಗಿತ್ತು. ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ ಸಭಾಂಗಣದ ಎಲ್ಲೆಡೆ ವೀಕ್ಷಿಸಲು ಸಾಧ್ಯವಾಗುವಂತೆ 25 ಎಲ್‌ಇಡಿ ಟಿವಿ ಪರದೆಗಳ ವ್ಯವಸ್ಥೆ ಮಾಡಲಾಗಿತ್ತು.

ಮೈದಾನದ ಅಕ್ಕಪಕ್ಕದಲ್ಲಿಯೂ ಜನರು ನಿಂತು ಕಾರ್ಯಕ್ರಮವನ್ನು ನೋಡುವ ವಾತಾವರಣ ಕಲ್ಪಿಸಲಾಗಿತ್ತು. ಜೊತೆಗೆ ಪ್ರೇಕ್ಷಕರು ಕುಳಿತಲ್ಲಿಗೇ ಸ್ವಯಂಸೇವಕರು ಊಟದ ಪ್ಯಾಕೆಟ್‌ ವಿತರಿಸುವ ಮೂಲಕ ಯಾವೂದೇ ರೀತಿಯ ಗೊಂದಲ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದರು. ಸ್ವತ್ಛತೆಗೆ ಪ್ರಮುಖ ಆದ್ಯತೆ ನೀಡುವ ಉದ್ದೇಶದಿಂದ 1000 ಸ್ವಯಂಸೇವಕರನ್ನು ನೇಮಿಸಲಾಗಿತ್ತು.

Comments are closed.