ಕರಾವಳಿ

ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಎಂಟು ವಿದ್ಯಾರ್ಥಿಗಳ ಬಂಧನ – ಗಾಂಜಾ ಸಹಿತಾ 1 ಲಕ್ಷ 69 ಸಾವಿರ ಮೌಲ್ಯದ ಸೊತ್ತು ವಶ

Pinterest LinkedIn Tumblr

ಮಂಗಳೂರು, ಜನವರಿ.14: ನಗರದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾವನ್ನು ಸರಬರಾಜು ಮಾಡುತ್ತಿದ್ದ ಕೇರಳ ಮೂಲದ ಎಂಟು ಮಂದಿ ವಿದ್ಯಾರ್ಥಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಎಕನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಂ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಗಾಂಜಾ ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೇರಳದ ಕೊಲ್ಲಂ ಜಿಲ್ಲೆಯ ಕರಿಪ್ರ ಗ್ರಾಮ ಹಾಗೂ ಪ್ರಸ್ತುತ ನಗರದ ಕದ್ರಿ ನಿವಾಸಿ ಅಕ್ಷಯ್ ಕೆ. ಪ್ರಸಾದ್ (22), ಕೇರಳದ ಕಣ್ಣೂರು ಮೂಲದ ನಿವಾಸಿ ಗಳಾದ ನಿಮಿಲ್ (21), ಅಮಿತ್ ಶ್ರೀವತ್ಸನ್ (21), ಅಶ್ವಿನ್ (21), ಆಕಾಶ್ ಎಸ್. ನಾಯರ್ (23), ಅಕ್ಷಯ್ (22), ಮುಹಮ್ಮದ್ ಅಮೀರ್ (22) ಹಾಗೂ ಮಂಗಳೂರು ನಗರದ ಹೊರವಲಯ ಕಣ್ಣೂರು ಬೋರುಗುಡ್ಡೆ ನಿವಾಸಿ ಜಾಫರ್ (22) ಬಂಧಿತ ಆರೋಪಿಗಳು.

ಪ್ರಕರಣದ ವಿವರ: ನಗರದ ಮೋರ್ಗನ್ ಗೇಟ್ ಬಳಿಯ ಮೈದಾನದಲ್ಲಿ ಗಾಂಜಾವನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿ ರುವ ಹಾಗೂ ಸೇವನೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಎಕನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದರು.

ಬಂಧಿತ ಆರೋಪಿಗಳಿಂದ 12 ಸಾವಿರ ರೂ. ಮೌಲ್ಯದ 500 ಗ್ರಾಂ ಗಾಂಜಾ, 8 ಮೊಬೈಲ್ ಫೋನ್‌ಗಳು, 4,050 ರೂ. ನಗದು ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 1,69,050 ರೂ. ಎಂದು ಅಂದಾಜಿಸಲಾಗಿದೆ.

ಸಿಸಿಬಿ ಘಟಕದ ಇನ್‌ಸ್ಪೆಕ್ಟರ್ ಶಾಂತಾರಾಮ, ಎಕನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಂ ಠಾಣೆಯ ಇನ್‌ಸ್ಪೆಕ್ಟರ್ ರಾಮಕೃಷ್ಣ ಮತ್ತು ಸಿಸಿಬಿ ಪಿಎಸ್ಸೈ ಕಬ್ಬಾಳ್‌ರಾಜ್ ಎಚ್.ಡಿ. ಹಾಗೂ ಸಿಬ್ಬಂದಿ ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.

ಇಂಜಿನಿಯರಿಂಗ್, ಫಿಸಿಯೋಥೆರಪಿ ವಿದ್ಯಾರ್ಥಿಗಳು :

ಕೇರಳ ಮೂಲದ ಈ ವಿದ್ಯಾರ್ಥಿಗಳು ಕೇರಳದಿಂದ ಗಾಂಜಾವನ್ನು ಖರೀದಿ ಮಾಡಿ ಮಂಗಳೂರು ನಗರದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಆರೋಪಿಗಳ ಪೈಕಿ 7 ಮಂದಿ ಮಂಗಳೂರಿನ ಎರಡು ಇಂಜಿನಿಯರಿಂಗ್ ಕಾಲೇಜಿನ ಹಾಗೂ ಓರ್ವ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ ಎಂಬ ಮಾಹಿತಿ ತನಿಖೆ ವೇಳೆ ಬೆಳಕಿಗೆ ಬಂದಿದೆ.

Comments are closed.