ಕರಾವಳಿ

ಮಂಗಳೂರಿನಲ್ಲಿ ಕ್ರಿಸ್‌ಮಸ್ ಸಂಭ್ರಮ : ಕರಾವಳಿಯಾದ್ಯಂತ ಚರ್ಚ್‌ಗಳಲ್ಲಿ ಪ್ರಾರ್ಥನೆ ಹಾಗೂ ವಿಶೇಷ ಪೂಜೆ

Pinterest LinkedIn Tumblr

ಮಂಗಳೂರು, ಡಿಸೆಂಬರ್.25 : ಕರಾವಳಿಯಾದ್ಯಂತ ವಿವಿಧ ಚರ್ಚ್‌ಗಳಲ್ಲಿ ಕ್ರೈಸ್ತ ಭಾಂದವರ ಪವಿತ್ರ ಹಬ್ಬ ಕ್ರಿಸ್‌ಮಸ್ ಆಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಮನುಕುಲಕ್ಕೆ ಪ್ರೀತಿ, ದಯೆಯನ್ನೇ ಧಾರೆಯೆರೆದ ಯೇಸುಕ್ರಿಸ್ತನ ಜನ್ಮದಿನದ ಆಚರಣೆಯನ್ನು ಕ್ರೈಸ್ತ ಭಾಂಧವರು ನಿನ್ನೆ ರಾತ್ರಿಯಿಂದಲೇ ವಿವಿಧ ಚರ್ಚ್ ಗಳಿಗೆ ತೆರಳಿ ಪ್ರಾರ್ಥನೆ ಹಾಗೂ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಚರಿಸಿದರು.

ಕರಾವಳಿಯ ಎಲ್ಲಾ ಚರ್ಚ್‌ಗಳಲ್ಲಿ ಕ್ಯಾರಲ್ಸ್‌‌ಗಳು ಮೊಳಗುತ್ತಿದ್ದು, ಕ್ರೈಸ್ತರು ತಮ್ಮ ಮನೆಗಳಲ್ಲಿ ಕ್ರಿಬ್, ಕ್ರಿಸ್‌ಮಸ್ ಟ್ರೀಯನ್ನಿಟ್ಟು ಯೇಸು ಮತ್ತೊಮ್ಮೆ ಹುಟ್ಟಿಬರಲೆಂದು ಆಶಿಸಿದರು. ದೇವಮಾನವ ಯೇಸು ಕ್ರಿಸ್ತನ ಹುಟ್ಟುಹಬ್ಬದ ಸಂತಸವನ್ನು ಎಲ್ಲರೊಂದಿಗೂ ಆಚರಿಸುವ ಕ್ರಿಸ್‌ಮಸ್ ಸಂದರ್ಭ ಕೇಕ್‌ ಜೊತೆಗೆ ಕುಕೀಸ್, ಅಕ್ಕಿ ರವೆಯ ಲಡ್ಡು, ವಿವಿಧ ರೀತಿಯ ಚಕ್ಕುಲಿಗಳು, ಅಕ್ಕಿ ಹಿಟ್ಟಿನಿಂದ ತಯಾರಿಸಿದ ಸಣ್ಣ ಸಣ್ಣ ಗೋಲಿಯಾಕಾರದ ತಿನಿಸುಗಳ ಕಾಂಬಿನೇಶನ್ನೊಂದಿಗೆ ಅತಿಥಿಗಳಿಗೆ, ನೆರೆಹೊರೆಯವರಿಗೆ ಕುಸ್ವಾರ್ ಹಂಚುವುದು ಮಂಗಳೂರು ಕ್ರೈಸ್ತರ ಸಂಪ್ರದಾಯ. ಹಿಂದೆಲ್ಲಾ ಇಂತಹ ತಿಂಡಿಗಳು ಮನೆಯಲ್ಲೇ ತಯಾರಾಗುತ್ತಿತ್ತೇನೊ. ಆದರೆ, ಈಗೆಲ್ಲಾ ರೆಡಿಮೇಡ್ ತಿಂಡಿಗಳಿಗೇ ಹೆಚ್ಚು ಡಿಮಾಂಡ್.

ಕ್ರಿಸ್‌ಮಸ್ ಸಂದರ್ಭದಲ್ಲಿ ಅಲಂಕಾರವಾಗಿಡುವ ಗೋದಲಿ ಹಾಗೂ ಕ್ರಿಸ್‌ಮಸ್ ಟ್ರೀ ಮಂಗಳೂರಿನಲ್ಲೂ ಫೇಮಸ್. ಮರಿಯಾ ಮೇರಿ ಗೋದಲಿಯಲ್ಲಿ ಯೇಸುವಿಗೆ ಜನ್ಮ ನೀಡಿದ ಕಾರಣಕ್ಕಾಗಿ ಸಾಂಕೇತಿಕವಾಗಿ ಕ್ರಿಸ್‌ಮಸ್ ಸಂದರ್ಭದಲ್ಲಿ ಗೋದಲಿಯಿಟ್ಟು ಅಲಂಕಾರ ಮಾಡಲಾಗುತ್ತಿದೆ. ಯೇಸು ಮತ್ತೆ ಮತ್ತೆ ಹುಟ್ಟಿಬರಲೆಂಬ ಆಶಯ ಇದರಲ್ಲಿದೆ.

ಕ್ರಿಸ್‌ಮಸ್ ಸಂದರ್ಭ ಯುವಜನರನ್ನು ಆಕರ್ಷಿಸುವುದೆಂದರೆ ಕ್ಯಾರಲ್ಸ್. ಹಬ್ಬಗಳ ವೈವಿಧ್ಯತೆಯನ್ನು ಸಾರುವ ಹಾಡುಗಳನ್ನು ಬೀದಿಗಳಲ್ಲಿ, ಮನೆಗಳಲ್ಲಿ ತಂಡವೊಂದು ಬಂದು ಹಾಡುವ ಸಂಪ್ರದಾಯ ಇಂದಿಗೂ ಇದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಜೊತೆಗೆ ತಳುಕುಹಾಕಿಕೊಂಡಿರುವ ಕ್ಯಾರಲ್ಸ್ ಕರಾವಳಿ ಭಾಗದಲ್ಲಿ ಗೋವಾ ಹಾಗೂ ಕೊಂಕಣ ಶೈಲಿಯ ಹಾಡುಗಳೊಂದಿಗೆ ಸಮ್ಮಿಳಿತವಾಗಿದೆ.

ಹಿಂದಿನಿಂದಲೂ ಕ್ಯಾರಲ್ಸ್‌ಗಳನ್ನು ಹಾಡಲಾಗುತ್ತಿತ್ತು. ಕ್ರಿಸ್‌ಮಸ್ ಹಬ್ಬದ ಬಲಿಪೂಜೆ ಯಾವಾಗಲೂ ನಡುರಾತ್ರಿಯಲ್ಲಿ ಇರುತ್ತಿದ್ದ ಕಾರಣ ದೂರದಲ್ಲಿರುವ ಚರ್ಚ್‌ಗಳಿಗೆ ಹೋಗುವ ಸಮಯದಲ್ಲಿ ಕ್ರೈಸ್ತರು ಕ್ರಿಸ್‌ಮಸ್ ಹಾಡುಗಳನ್ನು ಹಾಡುತ್ತಾ ತಲುಪುತ್ತಿದ್ದರು. ಇದುವೇ ಮುಂದೆ ಕ್ಯಾರಲ್ಸ್‌ನ ಭಾಗವಾಗಿ ಬದಲಾಯಿತು ಎನ್ನುತ್ತದೆ ಕರಾವಳಿ ಕ್ರೈಸ್ತ ಸಮುದಾಯದ ಇತಿಹಾಸ.

ಕ್ಯಾರಲ್ಸ್ ತಂಡದಲ್ಲಿ ಸಾಂತಕ್ಲಾಸ್ ಹೆಚ್ಚು ಆಕರ್ಷಣೀಯ. ಕಿಂದರಿ ಜೋಗಿಯನ್ನು ನೆನಪಿಸುವ ಶೈಲಿಯಲ್ಲಿ ಜೋಳಿಗೆಯಲ್ಲಿ ಸಿಹಿ ತಿಂಡಿ ಅಥವಾ ಚಾಕಲೋಟ್‌ಗಳನ್ನಿಟ್ಟುಕೊಂಡು ಅಲ್ಲಲ್ಲಿ ಮಕ್ಕಳನ್ನು ಕಂಡಾಗ ತಿಂಡಿಗಳನ್ನು ಎಸೆಯುವ ಸಾಂತಕ್ಲಾಸ್ ಮಕ್ಕಳ ಅಚ್ಚುಮೆಚ್ಚು. ಕ್ರಿಸ್‌ಮಸ್ ಹಾಡುಗಳ ಜೊತೆಯಲ್ಲಿ ಬೈಬಲ್‌ನಲ್ಲಿರುವ ಕೆಲವು ಸಾರಗಳನ್ನು ವೇಷಧಾರಿಗಳು ಕೊಂಕಣಿ, ಕನ್ನಡ ಅಥವಾ ಇಂಗ್ಲಿಷ್ ಭಾಷೆಯ ಮೂಲಕ ನಟಿಸಿ ರಂಜಿಸುತ್ತಾರೆ.

ವಿದ್ಯುದ್ದೀಪಗಳಿಂದ ಕಂಗೋಳಿಸುತ್ತಿರುವ ಚರ್ಚ್‌ಗಳು ;

ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಮಂಗಳೂರಿನ ಚರ್ಚ್‌ಗಳನ್ನು ವಿಶೇಷ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ಜೊತೆಗೆ ನಗರದ ಕೆಲವೊಂದು ಮಳಿಗೆಗಳು ವಿದ್ಯುದ್ದೀಪಗಳಿಂದ ಕಂಗೋಳಿಸುತ್ತಿದೆ.

ಇದೇ ಸಂದರ್ಭದಲ್ಲಿ ಏಸು ಕ್ರಿಸ್ತನ ಜನನದ ಸಂಭ್ರಮವನ್ನು ಸೂಚಿಸುವ ಗೋದಲಿಗಳನ್ನು ವಿವಿಧ ಇಗರ್ಜಿಗಳಲ್ಲಿ ಹಾಗೂ ಕ್ರೈಸ್ತ ಭಾಂಧವರ ಮನೆಯಲ್ಲಿ ನಿರ್ಮಿಸಿ ಪೂಜಿಸಲಾಯಿತು.

Comments are closed.