ಕರಾವಳಿ

ಕಾಂಗ್ರೆಸ್‌ನ ಹಿರಿಯ ನಾಯಕ ಪ್ರತಾಪ್‌ಚಂದ್ರ ಶೆಟ್ಟಿ ಮೇಲ್ಮನೆ ಸಭಾಪತಿಯಾಗಿ ಆಯ್ಕೆ

Pinterest LinkedIn Tumblr

ಬೆಳಗಾವಿ/ಉಡುಪಿ: ಕಾಂಗ್ರೆಸ್ ಹಿರಿಯ ಮುಖಂಡ, ನಾಲ್ಕು ಬಾರಿ ವಿಧಾನಸಭಾ ಸದಸ್ಯ ಹಾಗೂ ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದ ಪ್ರತಾಪ್‌ಚಂದ್ರ ಶೆಟ್ಟಿ ವಿಧಾ ಪರಿಷತ್ ಸಭಾಪತಿಯಾಗಿ ಸ್ಥಾನಕ್ಕೇರಿದ್ದಾರೆ. ಕೊನೆ ಕ್ಷಣದವರೆಗೂ ಯಾರೂ ನಾಮಪತ್ರ ಸಲ್ಲಿಸದೆ ಇದ್ದು ಆಯ್ಕೆಯಾದ ಇವರ ಅಧಿಕಾರಾವಧಿ 2022ರವರೆಗೆ ಮುಂದುವರೆಯಲಿದೆ.

ಕಾಂಗ್ರೆಸ್-ಜೆಡಿ‌ಎಸ್ ಮೈತ್ರಿ ಅಭ್ಯರ್ಥಿ ಬಸವರಾಜ ಹೊರಟ್ಟಿ, ಕಾಂಗ್ರೆಸ್‌ನ ಹಿರಿಯ ಸದಸ್ಯ ಎಸ್.ಆರ್.ಪಾಟೀಲ್ ಅವರ ಹೆಸರುಗಳು ಸಭಾಪತಿ ಸಭಾಪತಿ ಸ್ಥಾನಕ್ಕೆ ಕೇಳಿ ಬಂದಿತ್ತು. ಆದರೆ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಪ್ರತಾಪ್‌ಚಂದ್ರಶೆಟ್ಟಿ ಅವರನ್ನು ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಂತೆ ಹೈಕಮಾಂಡ್ ಮುಖಂಡರು ಸೂಚಿಸಿದ ಹಿನ್ನೆಲೆಯಲ್ಲಿ ಇಂದು ಪ್ರತಾಪ್‌ಚಂದ್ರ ಶೆಟ್ಟಿ ಅವರು ನಾಮಪತ್ರ ಸಲ್ಲಿಸಿದ್ದು ಮೇಲ್ಮನೆ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಂಗಳವಾರ ಮಧ್ಯಾಹ್ನ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್, ಸಚಿವ ಜಮೀರ್ ಅಹಮ್ಮದ್ ಖಾನ್, ಮೇಲ್ಮನೆ ಸದಸ್ಯರಾದ ರವಿ, ಐವಾನ್ ಡಿಸೋಜಾ ಇನ್ನಿತರರೊಡನೆ ಆಗಮಿಸಿದ ಪ್ರತಾಪ್‌ಚಂದ್ರ ಶೆಟ್ಟಿ ಪರಿಷತ್ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಹೊಂದಿದ್ದು ಒಂದೊಮ್ಮೆ ಚುನಾವಣೆ ನಡೆದಿದ್ದರೆ ಸಭಾಪತಿ, ಉಪಸಭಾಪತಿ, ಸಚೇತಕ ಸೇರಿ ಎಲ್ಲಾ ಸ್ಥಾನಗಳಲ್ಲಿ ಕಾಂಗ್ರೆಸ್ ಜಯ ಸಾಧಿಸುತ್ತಿತ್ತು. ಇದೀಗ ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುವ ಕಾರಣ ಸಭಾಪತಿ ಸ್ಥಾನ ಮಾತ್ರ ತಮ್ಮಲ್ಲಿ ಉಳಿಸಿಕೊಂಡು ಉಳಿದ ಸ್ಥಾನಗಳನ್ನು ಜೆಡಿ‌ಎಸ್ ನೊಡನೆ ಹಂಚಿಕೊಳ್ಳಲು ಕೈ ಪಾಳಯ ನಿರ್ಧರಿಸಿತ್ತೆನ್ನಲಾಗಿದೆ.

ಉಡುಪಿ ಜಿಲ್ಲೆ ಕುಂದಾಪುರದ ಹೈಕಾಡಿ ನಿವಾಸಿಯಾಗಿರುವ ಪ್ರತಾಪ್‌ಚಂದ್ರ ಶೆಟ್ಟಿ ಬಿ.ಎ. ಪದವಿದರರಾಗಿದ್ದು ರಾಜಕೀಯಕ್ಕೂ ಮೊದಲು ಬ್ಯಾಂಕ್ ಉದ್ಯೋಗದಲ್ಲಿದ್ದರು. ಬಳಿಕ ಉದ್ಯೋಗ ತ್ಯಜಿಸಿ ಕ್ರಷಿಯತ್ತ ಮುಖ ಮಾಡಿದ ಅವರು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟು ಕುಂದಾಪುರ ಕಾಂಗ್ರೆಸ್ ಅಧ್ಯಕ್ಷರಾಗಿದ್ದು ಮಾತ್ರವಲ್ಲದೇ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಯಾಗಿ ಕೆಪಿಸಿಸಿ ಉಪಾಧ್ಯಕ್ಷ, ಎ‌ಐಸಿಸಿ ಸದಸ್ಯರಾಗಿದ್ದರು. ಉಡುಪಿ ಜಿಲ್ಲಾ ರೈತ ಸಂಘದ ಸ್ಥಾಪಕಧ್ಯಕ್ಷರಾದ ಇವರು ವಾರಾಹಿ ನೀರಾವರಿ ಯೋಜನೆ ಬಗ್ಗೆ ಹೋರಾಟ ಮಾಡಿ ರೈತರಿಗೆ ನೀರು ಕೊಡಿಸುವಲ್ಲಿ ತಮ್ಮದೇ ಸರಕಾರವನ್ನು ಎದುರು ಹಾಕಿಕೊಂಡಿದ್ದರು.

Comments are closed.