ಕರಾವಳಿ

ಕ್ರೀಡಾ ಅಂಕಣಕಾರ ಎಸ್.ಜಗದೀಶ್ಚಂದ್ರ ಅಂಚನ್ ಗೆ ‘ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’

Pinterest LinkedIn Tumblr

ಮಂಗಳೂರು, ಡಿಸೆಂಬರ್.08: ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಕೇರಳ ಗಡಿನಾಡ ಘಟಕ ಹಾಗೂ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಜಂಟಿ ಆಶ್ರಯದಲ್ಲಿ ನಡೆದ ‘ ಕನ್ನಡ ರಾಜ್ಯೋತ್ಸವ ‘ ಸಮಾರಂಭದಲ್ಲಿ ಕ್ರೀಡಾ ಅಂಕಣಕಾರ ಎಸ್.ಜಗದೀಶ್ಚಂದ್ರ ಅಂಚನ್ ಸೂಟರ್ ಪೇಟೆ ಅವರಿಗೆ ‘ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಯನ್ನು ಪ್ರದಾನ ಮಾಡಲಾಯಿತು.

ಶನಿವಾರ ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಶ್ರಮದ ಗಾಯತ್ರಿ ಮಂಟಪದಲ್ಲಿ ನಡೆದ ‘ಕನ್ನಡ ರಾಜ್ಯೋತ್ಸವ ‘ ಸಮಾರಂಭದಲ್ಲಿ ಎಸ್.ಜಗದೀಶ್ಚಂದ್ರ ಅಂಚನ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹನ್ನೊಂದು ಮಂದಿ ಸಾಧಕರಿಗೆ ‘ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಯನ್ನು ಭಾರತ ಸರಕಾರದ ಭಾರತ ಸ್ಕೌಟ್ ಅಂಡ್ ಗೈಡ್ಸ್ ಆಯುಕ್ತರಾದ ಶ್ರೀ ವಿನೋದ್ ಕುಮಾರ್ ಬಿಧುರಿ ಅವರು ನೀಡಿ ಗೌರವಿಸಿದರು.

ಎಸ್.ಜಗದೀಶ್ಚಂದ್ರ ಅಂಚನ್

ಕಳೆದ 26ವರ್ಷಗಳಿಂದ ಕ್ರೀಡಾ ಪತ್ರಿಕೋದ್ಯಮದಲ್ಲಿ ಗುರುತಿಸಿಕೊಂಡಿರುವ ಜಗದೀಶ್ಚಂದ್ರ ಅಂಚನ್ ಬರೆದ ಸುಮಾರು 3000ಕ್ಕೂ ಹೆಚ್ಚು ಕ್ರೀಡಾ ಲೇಖನಗಳು ವಿವಿಧ ದಿನ ಪತ್ರಿಕೆಗಳಲ್ಲಿ ಹಾಗೂ ವಾರಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರಿಗೆ 2013ರಲ್ಲಿ ನಡೆದ ಸೌಹಾರ್ದ ಸಂಗಮದಲ್ಲಿ’ ಮೀಡಿಯಾ ಅವಾರ್ಡ್’ , 2014 ರಲ್ಲಿ ಕ್ರೀಡಾ ವರದಿಗಾರಿಕೆಗಾಗಿ ಅಖಿಲ ಭಾರತ ವಚನ ಸಾಹಿತ್ಯ ಸಮ್ಮೇಳನದಲ್ಲಿ ‘ಸಮಾಜ ರತ್ನ ‘ ರಾಜ್ಯ ಪ್ರಶಸ್ತಿ , 2016ರಲ್ಲಿ ದಕ್ಷಿಣ ಕನ್ನಡ ‘ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ‘ ಹಾಗೂ 2017ರಲ್ಲಿ ಕರ್ನಾಟಕ ಜಾನಪದ ಪರಿಷತ್ ಪ್ರಶಸ್ತಿಗೂ ಇವರು ಭಾಜನರಾಗಿರುವರು.

ಸಮಾರಂಭದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಶ್ರೀ ಅನಂತಪದ್ಮನಾಭ ಅಸ್ರಣ್ಣ , ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕದ ಅಧ್ಯಕ್ಷರಾದ ಶ್ರೀ ಎ.ಆರ್.ಸುಬ್ಬಯ್ಯಕಟ್ಟೆ, ಉದ್ಯಮಿ ಶ್ರೀ ಉದಯ ಕುಮಾರ್ ಶೆಟ್ಟಿ , ಸ್ಕೌಟ್ಸ್ ಅಂಡ್ ಗೈಡ್ಸ್ ಅಧ್ಯಕ್ಷರಾದ ಅಜೀಜ್ ಅಬ್ದುಲ್, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷರಾದ ಶ್ರೀ ಪ್ರಭಾಕರ್ ಕಲ್ಲೂರಾಯ ಬನದಗದ್ದೆ , ಪ್ರಧಾನ ಕಾರ್ಯದರ್ಶಿ ಅಖೀಲೇಶ್ ನಗುಮುಗಂ , ಶ್ರೀ ರವಿ ನಾಯ್ಯಾಪು ಮೊದಲಾದ ಗಣ್ಯರು ಭಾಗವಹಿಸಿದ್ದರು.

Comments are closed.