ಕರಾವಳಿ

ಮಹೇಂದ್ರ ಕುಮಾರ್ ಸಂಘ ಪರಿವಾರದಿಂದ ದೂರವಾದದ್ದು ಯಾಕೆ.? ಇಲ್ಲಿದೆ ಉತ್ತರ

Pinterest LinkedIn Tumblr

ಮಂಗಳೂರು: ಆರ್.ಎಸ್.ಎಸ್, ವಿ.ಎಚ್.ಪಿ, ಭಜರಂಗದಳ ಹಿಂದೂ ಸಮಾಜದ ಸಂಘಟನೆಗಳೇ ಹೊರತು ಅವು ಹಿಂದೂ ಸಮಾಜವಲ್ಲ ಎಂದು ಭಜರಂಗದಳ ಮಾಜಿ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಹೇಳಿದ್ದು, ಈ ಸಂಘಟನೆಗಳ ಹುನ್ನಾರಗಳು ಅರ್ಥವಾದಾಗ ಯಾರೂ ಸಂಘಪರಿವಾರವನ್ನು ಪ್ರೀತಿಸಲು ಸಾಧ್ಯವಿಲ್ಲ ಎಂದರು.

ಅವರು ನಂತೂರಿನ ಶಾಂತಿಕಿರಣದಲ್ಲಿ ನಡೆಯುತ್ತಿರುವ 5ನೇ ವರ್ಷದ ಜನನುಡಿ ಕಾರ್ಯಕ್ರಮದ ‘ಹೊರಳು ನೋಟ’ ಸಂವಾದಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಸಂಘ ಪರಿವಾರದಿಂದ ದೂರವಾದ ಬಗ್ಗೆ ಹಲವು ಘಟನೆಗಳನ್ನು ಪ್ರಸ್ತಾಪಿಸಿದ ಅವರು, ಸಂಘಪರಿವಾರದಲ್ಲಿರುವ ಜಾತಿ ಅಸ್ಪೃಶ್ಯತೆ ನಾನು ಸಂಘ ಸಿದ್ದಾಂತದಿಂದ ವಿಮುಖನಾಗಲೊಂದು ಕಾರಣ ಎಂದರು.”

ನಾನು ಭಜರಂಗದಳ ಸಂಘಟನೆ ಬಿಟ್ಟು ಹೊರಗೆ ಬರಲು 2008ರಲ್ಲಿ ನಡೆದ (ಚರ್ಚ್ ದಾಳಿ)ಘಟನೆಯಿಂದ ನಾನು ಜೈಲಿಗೆ ಹೋಗಿದ್ದೇ ಕಾರಣ ಎಂದು ಜನ ತಿಳಿದುಕೊಂಡಿದ್ದಾರೆ. ಆದರೆ ನಾನು ಅದಕ್ಕಿಂತ ಮೊದಲೇ ಸಂಘಟನೆಯಿಂದ ಹೊರಗೆ ಬರುವ ಮನಸ್ಸು ಮಾಡಿದ್ದೆ. ಯಾಕೆಂದರೆ ಅದು ರಾಜಕೀಯದ ದಾಳವಾಗಿ ಬಳಸಲ್ಪಡುತ್ತಿದೆ ಎಂದು ಅರ್ಥಮಾಡಿಕೊಂಡಿದ್ದೆ. ಅದರ ವಿರುದ್ಧ ದನಿಯೆತ್ತಿದ್ದೆ. ಅದೇ ಹೊರಗೆ ಬರಲು ಪ್ರಮುಖ ಕಾರಣವಾಗಿತ್ತು” ಎಂದು ಮಹೇಂದ್ರ ಕುಮಾರ್ ಹೇಳಿದರು.

ದಲಿತರು ಕೇವಲ ದಾಳಗಳಾಗಿ ಸಂಘ ಪರಿವಾರಕ್ಕೆ ಬೇಕು. ಗಲಾಟೆ ಮಾಡಲು, ಜೈಲಿಗೆ ಹೋಗಲು ಹಿಂದುಳಿದವರು ಬೇಕು. ಜನರನ್ನು ಉದ್ರೇಕಿಸಿ ತೆರಳುವ ಮುಖಂಡರು ಗಲಾಟೆ ನಡೆಸುವ ಸಂದರ್ಭದಲ್ಲಿ ಅಲ್ಲಿರುವುದೇ ಇಲ್ಲ. ಜೈಲಿಗೆ ಹೋಗುವವರು ಇದೇ ಹಿಂದುಳಿದ, ದಲಿತ ಹುಡುಗರೇ ಆಗಿರುತ್ತಾರೆ ಎಂದರು.

ಬಿಜೆಪಿಯು ರಾಜಕೀಯವಾಗಿ ಮೇಲೆ ಬರಲು ಏನೆಲ್ಲಾ ಕಸರತ್ತು ಮಾಡುತ್ತದೆ. ಬಿಜೆಪಿ ಬತ್ತಳಿಕೆಯಲ್ಲಿ ಎಲ್ಲವೂ ಖಾಲಿಯಾದಾಗ ಅಯೋಧ್ಯೆ ವಿಚಾರ ಮುನ್ನೆಲೆಗೆ ಬರುತ್ತದೆ. ಕೊನೆಗೆ ಇದೇ ಗತಿ ಎಂದರು.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ನಮಗೆಲ್ಲರಿಗೂ ಪಾಠವಾಗಬೇಕು. ಸತ್ತ ನಂತರವೂ ಗೌರಿ ಲಂಕೇಶ್ ಬದುಕಿದ್ದಾರೆ. ಅವರ ಸಾವಿನಲ್ಲಿ ಸಾರ್ಥಕತೆ ಇದೆ ಎಂದರು.

ನಾನು ಚಿಕ್ಕವನಾಗಿದ್ದಲೇ ಅನ್ಯಾಯವನ್ನು ಪ್ರತಿಭಟಿಸುವ ಪ್ರವೃತ್ತಿ ಇತ್ತು. ಏನಾದರೂ ಮಾಡಬೇಕು ಎಂದು ಯೋಚಿಸುವ ವೇಳೆ ಸಣ್ಣ ಪ್ರವೇಶ ಸಂಘ ಪರಿವಾರದಲ್ಲಾಯಿತು. ನನ್ನ ಬದುಕಿನ ನಡುವೆ ಇದೊಂದು ಪಯಣವಷ್ಟೇ ಎಂದು ವಿಶ್ಲೇಷಿಸಿದ ಅವರು, ಬಿಜೆಪಿಗೆ ಒಂದು ಜನ ಸೇರದ ಸಂದರ್ಭದಲ್ಲೊ ನಾನು 150 ಜನ ಸೇರಿಸಿದ್ದೆ. ನನಗೇನೂ ಬಿಜೆಪಿ ಇಷ್ಟ ಇರಲಿಲ್ಲ. ಆಗ ನನಗೆ ಶಿಕ್ಷಕರೊಬ್ಬರು ಸಂಘದ ಪ್ರಾಥಮಿಕ ಶಾಖೆಗೆ ಹೋಗಿ ತರಬೇತಿ ಪಡೆಯಲು ಕಳುಹಿಸಿದರು. ಈ ಮೂಲಕ ಸಂಘ ಪರಿವಾರ ಪ್ರವೇಶಿಸಿದೆ ಎಂದರು.

ಭಜರಂಗದಳ ಸಂಘಟನೆ ಮಾಡುವ ಕೆಲಸವನ್ನು ನನಗೆ ಕೊಡಲಾಯಿತು. ಅದೇನೂ ಸುಲಭವಲ್ಲ, 150 ಜನರನ್ನು ಮಾತನಾಡಿ 10 ಜನ ಸೇರುತ್ತಿದ್ದೆವು. ಅನಂತರ 100 ಜನರನ್ನು ಸೇರಿಸಿ ಘಟಕವೊಂದನ್ನು ಆರಂಭಿಸಿದೆವು. ನಂತರದ ಮೂರು ವರ್ಷಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಮನೆ ಮನೆಯಲ್ಲಿ ಭಜರಂಗದಳ ಮಾಡಿದ್ದೆ ಎಂದು ನೆನಪಿಸಿಕೊಂಡರು.

ಸಂಘ ಪರಿವಾರ ಯಾವತ್ತೂ ಹಿಂದೂ ಪರ ಅಲ್ಲ ಎನ್ನುವ ಸತ್ಯ ನನಗೆ ಅದಾಗಲೇ ಅರ್ಥವಾಗಿತ್ತು. ಯಾಕೆಂದರೆ ದಲಿತನ ನೋವಿಗೆ ಧ್ವನಿಯಾಗುವವರನ್ನು  ಸಂಘ ವಿರೋಧ ಮಾಡುತ್ತದೆ. ನಿಜವಾದ ಹಿಂದೂ ಸಮಾಜದ ವಿರೋಧಿ ಇದ್ದರೆ ಅದು ಸಂಘ.!  ಸಂಘ ತನ್ನ ಸದಸ್ಯರಿಗೆ ಮದ್ಯವನ್ನು ಕೊಡುತ್ತದೆ. ಅದು ತಕ್ಷಣಕ್ಕೆ ಮಾತ್ರ ಖುಷಿ ಕೊಡುತ್ತದೆ. ಆದರೆ ಇದನ್ನು ಅರ್ಥಮಾಡಿಕೊಳ್ಳದೆ ಎಲ್ಲರೂ ಮದ್ಯದ
ದಾಸರಾಗಿ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

‘ಜನನುಡಿ’ಯ ಪ್ರಗತಿಪರರು ವಿರೋಧಿಸುವಂಥ  ಪಂಗಡದ ಮುಖ್ಯ ಸ್ಥಾನದಲ್ಲಿದ್ದವನು ನಾನು. ಆದರೆ ಸಣ್ಣ ವಯಸ್ಸಿನಲ್ಲೇ ಸಂಘ ಪರಿವಾರಕ್ಕೆ ಬಂದವನೇನಲ್ಲ. ದೇಶದ ಬಗ್ಗೆ ನನಗೆ ಕನಸುಗಳಿತ್ತು ಎಂದು ಹೇಳುತ್ತಾ ಮಹೇಂದ್ರ ಕುಮಾರ್ ತಮ್ಮ ಬದುಕು ಬದಲಿಸಿದಂಥ ಅನುಭವದ ಘಟನೆಗಳನ್ನು ಒಂದೊಂದಾಗಿ ವಿವರಿಸುತ್ತಾ ಹೋದರು.

Comments are closed.