ಕರಾವಳಿ

ಆಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣಕ್ಕಾಗಿ ಅಗತ್ಯ ಬಿದ್ದರೆ ಸಂಸತ್ ಸದಸ್ಯರು ರಾಜೀನಾಮೆ ನೀಡಲೂ ಸಿದ್ಧರಾಗಬೇಕು :ಪೇಜಾವರ ಶ್ರೀ

Pinterest LinkedIn Tumblr

ಮಂಗಳೂರು, ನವೆಂಬರ್.25: ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಪ್ರಧಾನಿ ದೃಢ ನಿರ್ಧಾರ ಮಾಡಬೇಕು. ರಾಮಮಂದಿರ ನಿರ್ಮಾಣಕ್ಕಾಗಿ ಅಗತ್ಯ ಬಿದ್ದರೆ ಸಂಸತ್ ಸದಸ್ಯರು ರಾಜೀನಾಮೆ ನೀಡಲೂ ಸಿದ್ಧರಾಗಬೇಕು ಎಂದು ಉಡುಪಿ ಮಠದ ಪೇಜಾವರ ಶ್ರೀ ಹೇಳಿದರು.

ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಸೇರಿದಂತೆ ಸಂಘಪರಿವಾರದ ಆಶ್ರಯದಲ್ಲಿ ಬಾನುವಾರ ಸಂಜೆ ನಗರದ ಕೇಂದ್ರ ಮೈದಾನದಲ್ಲಿ ಹಮ್ಮಿಕೊಳ್ಳಲಾದ ಜನಾಗ್ರಹ ಸಮಾವೇಶದ ಸಭೆಯನ್ನುದ್ದೇಶಿ ಮಾತನಾಡುತ್ತಿದ್ದರು.

 ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಪ್ರಧಾನಿ ದೃಢ ನಿರ್ಧಾರ ಮಾಡಬೇಕು. ಅದಕ್ಕಾಗಿ ಸಂಸತ್ ಜಂಟಿ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಬೇಕು. ಸುಗ್ರಿವಾಜ್ಞೆಯ ಮೂಲಕ ಈ ವರ್ಷವೇ ಮಾಡಬೇಕಾಗಿದೆ. ರಾಮಮಂದಿರ ನಿರ್ಮಾಣವಾಗುವುದಾದರೆ ನ್ಯಾಯಾಲಯದ ಹೊರಗೆ ಸಂಧಾನಕ್ಕೂ ಸಿದ್ಧರಾಗಿದ್ದೇವೆ. ಕಳೆದ ನಾಲ್ಕೂವರೆ ವರ್ಷದಲ್ಲಿ ಮಂದಿರ ನಿರ್ಮಾಣ ಮಾಡದೆ ಇರುವ ಕಾರಣ ಈ ಹೋರಾಟ ಅನಿವಾರ್ಯವಾಗಿದೆ ಎಂದು ಪೇಜಾವರ ಶ್ರೀ ತಿಳಿಸಿದ್ದಾರೆ.

ಪ್ರಮುಖ ಸಂತರು ಒಂದು ಸಮಿತಿ ರಚಿಸಿ, ಪ್ರಧಾನಮಂತ್ರಿಗಳನ್ನು‌ ನೇರವಾಗಿ ಭೇಟಿಯಾಗಿ ಯಾಕೆ ರಾಮ ಮಂದಿರ ನಿರ್ಮಾಣವಾಗುವುದಿಲ್ಲ ಎಂದು ಪ್ರಶ್ನಿಸಬೇಕು. ನನಗೆ ಖಂಡಿತಾ ಧೈರ್ಯ ಇದೆ. ನಾವೆಲ್ಲ ಹೇಳಿದರೆ ನರೇಂದ್ರ ಮೋದಿಯವರು ಖಂಡಿತಾ ಇದನ್ನು ಸ್ವೀಕರಿಸುತ್ತಾರೆ ಎಂಬುದಾಗಿ ದೃಢ ವಿಶ್ವಾಸವಿದೆ‌.

ಬೆಂಗಳೂರಿನಲ್ಲಿ ಡಿಸೆಂಬರ್ 2ರಂದು ಸಮಾವೇಶ ನಡೆಯಲಿದೆ. ಆ ಸಮಾವೇಶದಲ್ಲೂ ನಾನು ಭಾಗವಹಿಸುತ್ತಿದ್ದು, ಆ ಸಂದರ್ಭದಲ್ಲಿ ಎಲ್ಲಾ ಸಂತರು ಸೇರಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ. ಅಲ್ಲದೆ ಫೆಬ್ರವರಿಯಲ್ಲಿ ನಡೆಯುವ ಕುಂಭ ಮೇಳದಲ್ಲಿ ಎಲ್ಲಾ ಸಂತರು ಧರ್ಮ ಸಂಸದ್​ನಲ್ಲಿ ಸೇರಿ ಯಾವ ಕ್ರಮ ಕೈಗೊಳ್ಳಬೇಕೆಂದು ನಿರ್ಧರಿಸಲಿದ್ದೇವೆ. ಅದರೊಳಗೆ ಮೋದಿಯವರು ರಾಮ ಮಂದಿರದ ಬಗ್ಗೆ ಒಳ್ಳೆಯ ತೀರ್ಮಾನ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.

 ವೇದಿಕೆಯಲ್ಲಿ ಒಡಿಯೂರು ಶ್ರೀ ಗುರು ದೇವಾನಂದ, ವಜ್ರದೇಹಿ ರಾಜಶೇಖರಾನಂದಶ್ರೀ, ಕಣಿಯೂರು ಮಾಹಬಲ ಶ್ರೀ, ಕರಿಂಜೆ ಕ್ಷೆತ್ರದ ಮುಕ್ತಾನಂದ ವಿದ್ಯಾನಂದಶ್ರೀ, ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ವಿಭಾಗದ ಅಧ್ಯಕ್ಷ ಪೊ. ಎಂ.ಬಿ.ಪುರಾಣಿಕ್, ವಿಭಾಗ ಮುಖ್ಯಸ್ಥ ನಾ. ಸೀತಾರಾಮ, ಸಹಕಾರ್ಯದರ್ಶಿ ಕೃಷ್ಣ ಮೂರ್ತಿ, ಬಜರಂಗದಳದ ಪ್ರಾಂತ ಸಹ ಸಂಯೋಜಕ ಮುರಳೀ ಕೃಷ್ಣ ಹಂಸತಡ್ಕ, ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಮಂಗಳೂರು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಜಗದೀಶ್ ಶೇಣವ, ಕಾರ್ಯಾಧ್ಯಕ್ಷ ಗೋಪಾಲ್ ಕುತ್ತಾರ್, ಕೃಷ್ಣ ಪ್ರಸನ್ನ ಪುತ್ತೂರು, ದುರ್ಗಾವಾಹಿನಿ ಸಂಯೋಜಕಿ ವಿದ್ಯಾ ಮಲ್ಯ ಮೊದಲಾದವರು ಉಪಸ್ಥಿತರಿದ್ದರು.

ನಗರದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ :  

ನಗರದ ಕೇಂದ್ರ ಮೈದಾನದಲ್ಲಿ ಬೃಹತ್ ಜನಾಗ್ರಹ ಸಭೆ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಈ ವೇಳೆ ಯಾವೂದೇ ಅಹಿತಕರ ಘಟನೆಗಳು ಸಂಭವಿಸದಂತೆ ಜಿಲ್ಲಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಸಮಾವೇಶ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಕಷ್ಟು ಪೊಲೀಸರನ್ನು ನಿಯೋಜಿಸಲಾಗಿದೆ. ಇಬ್ಬರು ಡಿಸಿಪಿ ಮತ್ತು ಹತ್ತು ಮಂದಿ ಎಸಿಪಿ ದರ್ಜೆಯ ಅಧಿಕಾರಿಗಳು, ನಲ್ವತ್ತು ಮಂದಿ ಪೊಲೀಸ್ ಇನ್‌ಸ್ಪೆಕ್ಟರ್, ಎಪ್ಪತ್ತು ಮಂದಿ ಪಿಎಸ್ಐ, ೧೪೦೦ ಸಿಬ್ಬಂದಿಗಳು, ಹತ್ತು ಕೆ‌ಎಸ್‌ಆರ್‌ಪಿ ಫ್ಲಟೂನ್, ೧೪ ಡಿಎಆರ್ / ಸಿ ಎ ಆರ್ ಫ್ಲಟೂನ್ ಹಾಗೂ ಹೊರ ಜಿಲ್ಲೆಗಳಿಂದ ಮುನ್ನೂರು ಮಂದಿ ಪೊಲೀಸರನ್ನು ನಿಯೋಜನ ಮಾಡಲಾಗಿತ್ತು.

ಜಿಲ್ಲಾದ್ಯಂತ ಮದ್ಯದಂಗಡಿ ಬಂದ್ :

ವಿಶ್ವ ಹಿಂದೂ ಪರಿಷತ್ತು, ಭಜರಂಗದಳ ಮತ್ತಿತರ ಸಂಘಟನೆಗಳ ವತಿಯಿಂದ ಅಯೋಧ್ಯೆಯ ಶ್ರೀರಾಮ ಜನ್ಮ ಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣದ ಕುರಿತು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಇಂದು ಸಂಜೆ ಬೃಹತ್ ಜನಾಗ್ರಹ ಸಭೆ ಹಮ್ಮಿಕೊಂಡಿರುವ ಸಭೆಗೆ ವಿಶ್ವ ಹಿಂದೂ ಪರಿಷತ್ತು, ಭಜರಂಗದಳ ಮತ್ತಿತರ ಸಂಘಟನೆಗಳ ಸುಮಾರು 50 ಸಾವಿರ ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆ ಇರುವುದರಿಂದ ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಹಾಗೂ ಸುರಕ್ಷತೆಯನ್ನು ಕಾಪಾಡುವ ಉದ್ದೇಶದಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಕರ್ನಾಟಕ ಅಬಕಾರಿ ಕಾಯಿದೆ 1965 ಸೆಕ್ಷನ್ 21(1) ರ ಅಡಿಯಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಅವರು ನವೆಂಬರ್ 25 ರಂದು ಪೂರ್ವಾಹ್ನ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಎಲ್ಲಾ ಬಾರ್ ಮತ್ತು ರೆಸ್ಟೋರೆಂಟ್‍ಗಳನ್ನು ಹಾಗೂ ಯಾವುದೇ ವಿಧದ ಅಮಲು ಪದಾರ್ಥ ಮಾರಾಟ ಮಾಡದಂತೆ ಆದೇಶಿಸಿ ಅಧಿಸೂಚನೆ ಹೊರಡಿಸಿದ್ದರು.

Comments are closed.