ಕರಾವಳಿ

ರಾಮಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಇಂದು ಮಂಗಳೂರಿನಲ್ಲಿ ಬೃಹತ್ ಜನಾಗ್ರಹ ಸಭೆ : ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್

Pinterest LinkedIn Tumblr

(ಕಡತ ಚಿತ್ರ)

ಮಂಗಳೂರು, ನವೆಂಬರ್. 25: ರಾಮಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಇಂದು ಸಂಜೆ ನಗರದ ಕೇಂದ್ರ ಮೈದಾನದಲ್ಲಿ ಬೃಹತ್ ಜನಾಗ್ರಹ ಸಭೆ ನಡೆಯಲಿದ್ದು, ಈ ವೇಳೆ ಯಾವೂದೇ ಅಹಿತಕರ ಘಟನೆಗಳು ಸಂಭವಿಸದಂತೆ ಜಿಲ್ಲಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಇಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಹಮ್ಮಿಕೊಂಡ ಜನಾಗ್ರಹ ಸಭೆಯಲ್ಲಿ 50,000 ಅಧಿಕ ಮಂದಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಜರಂಗದಳದ ಸಂಯೋಜಕ ಸೋಹನ್ ಸಿಂಗ್ ಸೋಲಂಕಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಜಿಲ್ಲೆಯ ಎಲ್ಲಾ ಸಾಧುಸಂತರು ಈ ಜನಾಗ್ರಹ ಸಭೆಯಲ್ಲಿ ಭಾಗವಹಿಸಲಿದ್ದಾರೆ. ವಿವಿಧ ಹಿಂದೂ ಸಂಘಟನೆಗಳು ಈ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರು ಜನಪ್ರತಿನಿಧಿಗಳು, ರಾಮಭಕ್ತರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.

ಸುಪ್ರೀಂ ಕೋರ್ಟ್​ನ ನ್ಯಾಯಮೂರ್ತಿಗಳು ಅಯೋಧ್ಯಾ ರಾಮ ಮಂದಿರದ ವಿಚಾರಣೆಯನ್ನು ಜನವರಿಯಲ್ಲಿ ನಡೆಸಬೇಕೆಂದು ನಿರ್ದೇಶನ ಕೊಟ್ಟಿದ್ದಾರೆ. ಇಡೀ ದೇಶದ ಸಾಧು ಸಂತರು ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೋಸ್ಕರ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ‌. ಆದರೆ ಸುಪ್ರೀಂಕೋರ್ಟ್ ಈ ಬಗ್ಗೆ ತೀರ್ಪು ಕೊಡುವ ಪರಿಸ್ಥಿತಿಯಲ್ಲಿಲ್ಲ. ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಈ ಜನಾಗ್ರಹ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಮಧ್ಯಾಹ್ನ ಶೋಭಾ ಯಾತ್ರೆ :

ಮಧ್ಯಾಹ್ನ 2.30ಕ್ಕೆ ಜ್ಯೋತಿ ಸರ್ಕಲ್‌ನಿಂದ ಬೃಹತ್ ಶೋಭಾ ಯಾತ್ರೆ ಹೊರಡಲಿದೆ. ನಾಲ್ಕು ಗಂಟೆಗೆ ಕೇಂದ್ರ ಮೈದಾನದಲ್ಲಿ ಜನಾಗ್ರಹ ಸಭೆ ಜರಗಲಿರುವುದು. ಇದೇ ವೇಳೆ ದೇಶದ ನಾಗ್ಪುರ, ಅಯೋಧ್ಯಾ, ಮಂಗಳೂರು ಮತ್ತು ಹುಬ್ಬಳ್ಳಿ ಸೇರಿ ನಾಲ್ಕು ಕಡೆ ದೊಡ್ಡ ಮಟ್ಟದಲ್ಲಿ ಸಭೆ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಎಂ.ಬಿ.ಪುರಾಣಿಕ್ ತಿಳಿಸಿದ್ದಾರೆ.

ಬಿಗಿ ಪೊಲೀಸ್ ಬಂದೋ ಬಸ್ತ್ :

ಇಂದು ನಡೆಯಲಿರುವ ಸಮಾವೇಶ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಕಷ್ಟು ಪೊಲೀಸರನ್ನು ನಿಯೋಜಿಸಲಾಗಿದೆ. ಇಬ್ಬರು ಡಿಸಿಪಿ ಮತ್ತು ಹತ್ತು ಮಂದಿ ಎಸಿಪಿ ದರ್ಜೆಯ ಅಧಿಕಾರಿಗಳು, ನಲ್ವತ್ತು ಮಂದಿ ಪೊಲೀಸ್ ಇನ್‌ಸ್ಪೆಕ್ಟರ್, ಎಪ್ಪತ್ತು ಮಂದಿ ಪಿಎಸ್ಐ, 1400 ಸಿಬ್ಬಂದಿಗಳು, ಹತ್ತು ಕೆ‌ಎಸ್‌ಆರ್‌ಪಿ ಫ್ಲಟೂನ್, 14 ಡಿಎಆರ್ / ಸಿ ಎ ಆರ್ ಫ್ಲಟೂನ್ ಹಾಗೂ ಹೊರ ಜಿಲ್ಲೆಗಳಿಂದ ಮುನ್ನೂರು ಮಂದಿ ಪೊಲೀಸರನ್ನು ನಿಯೋಜನ ಮಾಡಲಾಗಿದೆ ಎಂದು ಪೊಲೀಸ್ ಅಯುಕ್ತ ಟಿ.ಆರ್ ಸುರೇಶ್ ಮಾಹಿತಿ ನೀಡಿದ್ದಾರೆ.

Comments are closed.