ಕರಾವಳಿ

ನಾಳೆ ಮಂಗಳೂರಿನಲ್ಲಿ ಬೃಹತ್ ಜನಾಗ್ರಹ ಸಭೆ : 50ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ

Pinterest LinkedIn Tumblr

ಮಂಗಳೂರು, ನವೆಂಬರ್. 24: ವಿಶ್ವ ಹಿಂದೂ ಪರಿಷತ್ ವತಿಯಿಂದ ರಾಮಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ನಾಳೆ ನಗರದ ಕೇಂದ್ರ ಮೈದಾನದಲ್ಲಿ ಹಮ್ಮಿಕೊಂಡ ಜನಾಗ್ರಹ ಸಭೆಯಲ್ಲಿ ಸುಮಾರು 50ಸಾವಿರ ಮಂದಿ ರಾಮಭಕ್ತರು ಭಾಗವಹಿಸಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಎಂ.ಬಿ. ಪುರಾಣಿಕ್ ತಿಳಿಸಿದರು.

ಶುಕ್ರವಾರ ನಗರದಲ್ಲಿ ವಿಶ್ವ ಹಿಂದೂ ಪರಿಷತ್ತಿನಿಂದ ಪ್ರಕಟಿತವಾದ ಶ್ರೀ ರಾಮ ಜನ್ಮಭೂಮಿ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಸುಪ್ರೀಂ ಕೋರ್ಟ್​ನ ನ್ಯಾಯಮೂರ್ತಿಗಳು ಅಯೋಧ್ಯಾ ರಾಮ ಮಂದಿರದ ವಿಚಾರಣೆಯನ್ನು ಜನವರಿಯಲ್ಲಿ ನಡೆಸಬೇಕೆಂದು ನಿರ್ದೇಶನ ಕೊಟ್ಟಿದ್ದಾರೆ.

ಇಡೀ ದೇಶದ ಸಾಧು ಸಂತರು ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೋಸ್ಕರ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ‌. ಆದರೆ ಸುಪ್ರೀಂಕೋರ್ಟ್ ಈ ಬಗ್ಗೆ ತೀರ್ಪು ಕೊಡುವ ಪರಿಸ್ಥಿತಿಯಲ್ಲಿಲ್ಲ. ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ನ. 25ರಂದು ನಗರದ ಕೇಂದ್ರ ಮೈದಾನದಲ್ಲಿ ಜನಾಗ್ರಹ ಸಭೆಯ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಬಜರಂಗದಳದ ಮುಖಂಡ ಶರಣ್​ ಪಂಪವೆಲ್ ಮಾತನಾಡಿ, ಮುಂದಿನ ಚಳಿಗಾಲದ ಅಧಿವೇಶನದಲ್ಲಿ ರಾಮಜನ್ಮಭೂಮಿ ನಿರ್ಮಾಣ ಮಾಡಲು ಏನೆಲ್ಲಾ ಅಡೆತಡೆಗಳಿವೆಯೋ ಅದನ್ನು ನಿವಾರಿಸಲು ಒಂದು ಮಸೂದೆಯನ್ನು ತಯಾರಿಸಬೇಕೆಂದು ನಿರ್ಣಯಿಸಲಾಗಿದ್ದು, ಆ ನಿರ್ಣಯದ ಪ್ರಕಾರ ಇಡೀ ದೇಶದ 525 ಲೋಕಸಭಾ ಕ್ಷೇತ್ರಗಳಲ್ಲಿ ರಾಮ ಜನ್ಮಭೂಮಿಗೋಸ್ಕರ ಬೃಹತ್ ಮಟ್ಟದ ಜನಾಗ್ರಹ ಸಭೆಯನ್ನು ನಡೆಸಲು ವಿಶ್ವ ಹಿಂದು ಪರಿಷತ್​ ನಿರ್ಣಯಿಸಿದೆ. ಆ ಹಿನ್ನೆಲೆಯಲ್ಲಿ ನವೆಂಬರ್‌ 25ರಂದು ದೇಶದ ನಾಗ್ಪುರ, ಅಯೋಧ್ಯಾ, ಮಂಗಳೂರು ಮತ್ತು ಹುಬ್ಬಳ್ಳಿ ಸೇರಿ ನಾಲ್ಕು ಕಡೆ ದೊಡ್ಡ ಮಟ್ಟದಲ್ಲಿ ಸಭೆ ನಡೆಯಲಿದೆ ಎಂದು ಹೇಳಿದರು.

ವಿಎಚ್ ಪಿ ನಗರಾಧ್ಯಕ್ಷ ಜಗದೀಶ್ ಶೇಣವ ಮಾತನಾಡಿ, ನವೆಂಬರ್ 25 ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಹಮ್ಮಿಕೊಂಡ ಜನಾಗ್ರಹ ಸಭೆಯಲ್ಲಿ 50,000 ಅಧಿಕ ಮಂದಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಜರಂಗದಳದ ಸಂಯೋಜಕ ಸೋಹನ್ ಸಿಂಗ್ ಸೋಲಂಕಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಜಿಲ್ಲೆಯ ಎಲ್ಲಾ ಸಾಧುಸಂತರು ಈ ಜನಾಗ್ರಹ ಸಭೆಯಲ್ಲಿ ಭಾಗವಹಿಸಲಿದ್ದಾರೆ. ವಿವಿಧ ಹಿಂದೂ ಸಂಘಟನೆಗಳು ಈ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರು ಜನಪ್ರತಿನಿಧಿಗಳು, ರಾಮಭಕ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ವಿಶ್ವ ಹಿಂದೂ ಪರಿಷತ್ತಿನಿಂದ ಪ್ರಕಟಿತವಾದ ಶ್ರೀ ರಾಮ ಜನ್ಮಭೂಮಿ ಪುಸ್ತಕದ ಲೇಖಕ ಡಾ.ಪಿ. ಅನಂತ ಕೃಷ್ಣ ಭಡ್ ಮಾತನಾಡುತ್ತಾ, ರಾಮಮಂದಿರ ನಿರ್ಮಾಣದ ಬಗ್ಗೆ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ತ್ವರಿತವಾಗಿ ಮಾಡುವ ಬದಲು 2019ಕ್ಕೆ ಮುಂದೂಡಿರುವುದರಿಂದ ಮಂದಿರ ನಿರ್ಮಾಣಕ್ಕೆ ಹೋರಾಟ ಅನಿವಾರ್ಯವಾಗಿದೆ ಎಂದರು.

Comments are closed.