ಕರಾವಳಿ

ಪೈಪ್ ಗ್ಯಾಸ್ ಅತ್ಯಂತ ಪರಿಸರ ಸ್ನೇಹಿ ಗ್ಯಾಸ್ -ಮಾಲಿನ್ಯ ಕಡಿಮೆ : ಸಿಟಿಗ್ಯಾಸ್ ಯೋಜನೆಗೆ ಚಾಲನೆ ನೀಡಿ ಸಚಿವ ಡಿವಿಎಸ್

Pinterest LinkedIn Tumblr

ಮಂಗಳೂರು: ದೇಶಾದ್ಯಂತ ವಿವಿಧ ರಾಜ್ಯಗಳ 129 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಗುರುವಾರ ಸಂಜೆ 4 ಗಂಟೆಗೆ ಸಿಟಿಗ್ಯಾಸ್ ಯೋಜನೆಗೆ ಚಾಲನೆ ದೊರೆತಿದೆ. ದಕ್ಷಿಣ ಕನ್ನಡ ಜಿಲ್ಲೆಯನ್ನೊಳಗೊಂಡು ರಾಜ್ಯದ ಏಳು ಪ್ರದೇಶಗಳು ಸೇರಿದಂತೆ ದೇಶದ ಒಟ್ಟು 63 ಕಡೆಗಳಲ್ಲಿ ಮನೆ ಮನೆಗಳಿಗೆ ಪೈಪ್‌ಲೈನ್ ಮೂಲಕ ನೈಸರ್ಗಿಕ ಸಂಪರ್ಕ ಕಲ್ಪಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶಂಕುಸ್ಥಾಪನೆ ನೆರವೇರಿಸಿದ್ದು, ನಗರದ ಪುರಭವನದಲ್ಲಿ ನಡೆದ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಕೇಂದ್ರದ ಅಂಕಿ ಅಂಶಗಳು, ಕಾರ್ಯಕ್ರಮ ಜಾರಿ ಮತ್ತು ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿ ಡಿ.ವಿ.ಸದಾನಂದ ಗೌಡ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಪ್ರಧಾನಿ ಮೋದಿಯವರು ಅತ್ಯಂತ ಯಶಸ್ವಿ ಮತ್ತು ಮಹತ್ವಪೂರ್ಣ ಹತ್ತು ಹಲವು ಯೋಜನೆಗಳನ್ನು‌ ಈ ದೇಶಕ್ಕೆ ಕೊಟ್ಟಿದ್ದಾರೆ. ಅಂತಹ ಯೋಜನೆಗಳಲ್ಲಿ ಸಿಟಿ ಗ್ಯಾಸ್ ಯೋಜನೆಯೂ ಒಂದು. ಈಗಾಗಲೇ ಸಿಲಿಂಡರ್ ಮೂಲಕ ಗ್ಯಾಸ್ ನಮಗೆ ಲಭ್ಯವಾಗುತ್ತದೆ. ಆದರೆ ಪೈಪ್ ಗ್ಯಾಸ್ ಅತ್ಯಂತ ಪರಿಸರ ಸ್ನೇಹಿ ಗ್ಯಾಸ್. ಸಿಟಿ ಗ್ಯಾಸ್ ಯೋಜನೆಯಿಂದ ಪರಿಸರ ಮಾಲಿನ್ಯವೂ ಕಡಿಮೆ ಆಗುತ್ತದೆ.ಮಾಲಿನ್ಯ ನಿಯಂತ್ರಣದಲ್ಲಿ ನೈಸರ್ಗಿಕ ಇಂಧನದ ಕೊಡುಗೆ ಮಹತ್ತರವಾಗಿದ್ದು, ಪೈಪ್‌ಲೈನ್ ಮೂಲಕ ನೈಸರ್ಗಿಕ ಅನಿಲವನ್ನು ಪೂರೈಸುವ ಯೋಜನೆಯಿಂದ ಶೇ. 18ರಷ್ಟು ಮಾಲಿನ್ಯ ಕಡಿಮೆ ಆಗಲಿದೆ ಎಂದು ಹೇಳಿದರು.

ಸಂಸದ ನಳಿನ್ ಕುಮಾರ್ ಮಾತನಾಡಿ, ದಕ್ಷಿಣ ಕನ್ನಡದಲ್ಲಿ ಒಟ್ಟು 3.50 ಲಕ್ಷ ಮನೆಗಳಿಗೆ ಗ್ಯಾಸ್ ಸಂಪರ್ಕ, 100 ಸಿಎನ್‌ಜಿ (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್) ಕೇಂದ್ರಗಳನ್ನು ಸ್ಥಾಪಿಸಲು ಮುಂದಿನ 8 ವರ್ಷಗಳ ಗುರಿ ನಿಗದಿಗೊಳಿಸಲಾಗಿದೆ. ಈ ಮೂಲಕ ದ.ಕ. ಜಿಲ್ಲೆ ಹೊಗೆಮುಕ್ತ ಜಿಲ್ಲೆಯಾಗಿ ಪರಿವರ್ತನೆಗೊಳ್ಳಲಿದೆ ಎಂದರು.

ಶಾಸಕರಾದ ವೇದವ್ಯಾಸ ಕಾಮತ್, ಮೇಯರ್ ಭಾಸ್ಕರ ಮೊಯ್ಲಿ, ಅಪರ ಜಿಲ್ಲಾಧಿಕಾರಿ ಕುಮಾರ್, ಗೇಲ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಮುರುಗೇಶನ್, ಉಪಸ್ಥಿತರಿದ್ದರು. ಗೇಲ್ ಕಂಪನಿಯ ಮುಖ್ಯ ಮಹಾಪ್ರಬಂಧಕ ವಿವೇಕ್ ವಾತೋಡ್ಕರ್ ಸ್ವಾಗತಿಸಿದರು.

ಬಳಿಕ ನಡೆದ ವಿಡಿಯೊ ಕಾನ್ಫರೆನ್ಸ್​ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಿಟಿ ಗ್ಯಾಸ್ ಯೋಜನೆಯ ಬಗ್ಗೆ ಮಾತನಾಡಿದರು. ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆದ ಶಂಕುಸ್ಥಾಪನಾ ಕಾರ್ಯಕ್ರಮದ ನೇರ ಪ್ರಸಾರಕ್ಕೆ ಕಾರ್ಯಕ್ರಮದಲ್ಲಿ ಬೃಹತ್ ಪರದೆಯ ಮೂಲಕ ವ್ಯವಸ್ಥೆ ಮಾಡಲಾಯಿತು. ರಾಷ್ಟ್ರ ಮಟ್ಟದಲ್ಲಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಆರ್ಥಿಕತೆಯು ಬೆಳೆಯುತ್ತಿರುವಂತೆಯೇ ಇಂಧನ ಬೇಡಿಕೆಯೂ ಹೆಚ್ಚಾಗಿದೆ. ಇದನ್ನು ನೀಗಿಸಲು ಪರಿಸರಕ್ಕೆ ಹೆಚ್ಚಿನ ಹಾನಿಯಾಗದಂತೆ ನೈಸರ್ಗಿಕ ಇಂಧನದ ಬಳಕೆ ಹೆಚ್ಚಿಸಬೇಕಾಗಿದೆ. ನೈಸರ್ಗಿಕ ಅನಿಲ ಆಧಾರಿತ ಆರ್ಥಿಕತೆಗೆ ಕೇಂದ್ರ ಸರಕಾರ ಒತ್ತು ನೀಡುತ್ತಿದೆ ಎಂದು ಹೇಳಿದರು.

Comments are closed.