ಕರಾವಳಿ

ಶ್ರೀ ಕ್ಷೇತ್ರದ ಪುಷ್ಕರಣಿಯಲ್ಲಿ ಶ್ರೀ ಶಾರದ ಮಾತೆ ಹಾಗೂ ನವದುರ್ಗೆಯರ ವಿಸರ್ಜನೆ : ವೈಭವದ ಮಂಗಳೂರು ದಸರಾ ಸಂಪನ್ನ

Pinterest LinkedIn Tumblr

ಮಂಗಳೂರು,ಆಕ್ಟೋಬರ್.20: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಹಮ್ಮಿಕೊಂಡಿದ್ದ ವೈಭವದ ಮಂಗಳೂರು ದಸರಾ ಮಹೋತ್ಸವ ವರ್ಣರಂಜಿತ ಮೆರವಣಿ ಶುಕ್ರವಾರ ಸಂಜೆ ಆರಂಭಗೊಂಡು ಶನಿವಾರ ಮುಂಜಾನೆ ಕುದ್ರೋಳಿ ಶ್ರೀ ಕ್ಷೇತ್ರದ ಪುಷ್ಕರಣಿಯಲ್ಲಿ ಶ್ರೀ ಶಾರದ ಮಾತೆ ಹಾಗೂ ನವದುರ್ಗೆಯರ ವಿಸರ್ಜನೆಯೊಂದಿಗೆ ಮಂಗಳೂರು ದಸರಾ ಸಂಪನ್ನಗೊಂಡಿತ್ತು.

ಅಕ್ಟೋಬರ್ 10ರಿಂದ 19ವರೆಗೆ ಪೂಜಿಸಲ್ಪಟ್ಟ ಶ್ರೀ ಗಣಪತಿ, ಶ್ರೀ ಶಾರದೆ ಮಾತೆ ಸಹಿತ ನವದುರ್ಗೆಯರ ವಿಗ್ರಹಗಳ ಭವ್ಯ ಶೋಭಾಯಾತ್ರೆಯು ಭಾರೀ ಸಂಖ್ಯೆಯ ಭಕ್ತಾಭಿಮಾನಿಗಳ ಸಮ್ಮುಖದಲ್ಲಿ ಶುಕ್ರವಾರ ಸಂಜೆ ಶ್ರೀ ಕ್ಷೇತ್ರದ ನವೀಕರಣ ಮತ್ತು ಮಂಗಳೂರು ದಸರಾ ರೂವಾರಿ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಬಹಳ ವೈಭವದಿಂದ ಸಂಭ್ರಮ ಸಡಗರದೊಂದಿಗೆ ಜರಗಿತು.

ಶುಕ್ರವಾರ ಸಂಜೆ ಸಾಲು ಸಾಲು ಬಣ್ಣದ ಕೊಡೆಗಳು, ಕಿವಿಗಡಚಿಕ್ಕುವ ಚೆಂಡೆ ವಾದನ, ನಾಸಿಕ್ ಬ್ಯಾಂಡ್ ಅಬ್ಬರ, ಭಜನಾ ತಂಡಗಳ ಶಿಸ್ತುಬದ್ಧ ಕುಣಿತ, ಕೋಲಾಟ, ವೀರಗಾಸೆ, ಕಂಸಾಳೆ , ಡೋಲು, ಜಾಗಟೆ, ಕೊಂಬು, ಕಹಳೆಯ ನಿನಾದ, ಮುಗಿಲು ಮುಟ್ಟಿದ ಭಕ್ತರ ಜಯಘೋಷ, ವೈವಿಧ್ಯಮಯ ನೃತ್ಯ, ಅಲ್ಲಲ್ಲಿ ಸಂಗೀತದ ರಸದೌತಣದ ಮೂಲಕ ಕುದ್ರೋಳಿ ದೇವಸ್ಥಾನದ ದರ್ಬಾರ್ ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ಮಹಾಗಣಪತಿ, ಆದಿಶಕ್ತಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸ್ಕಂದ ಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿದಾತ್ರಿ, ಶಾರದ ಮಾತೆಯ ಶೋಭಾಯಾತ್ರೆಯು ಕುದ್ರೋಳಿ ಶ್ರೀ ಗೋಕರ್ಣಣಾಥೇಶ್ವರ ದೇವಳದಿಂದ ಹೊರಟು ಮಣ್ಣಗುಡ್ಡೆ, ಲೇಡಿಹಿಲ್, ಲಾಲ್‌ಬಾಗ್, ಬಲ್ಲಾಳ್‌ಬಾಗ್, ಪಿವಿಎಸ್, ನವಭಾರತ್ ವೃತ್ತ, ಎಂಜಿ ರಸ್ತೆ, ಕೆ‌.ಎಸ್‌.ರಾವ್ ರಸ್ತೆ, ಹಂಪನಕಟ್ಟೆ, ವಿ.ವಿ.ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ, ಗಣಪತಿ ಹೈಸ್ಕೂಲ್ ಮಾರ್ಗವಾಗಿ ಮೋಹಿನಿ ವಿಲಾಸ, ಓಂಮಹಲ್ ಜಂಕ್ಷನ್, ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಲೋವರ್ ಕಾರ್‌ಸ್ಟ್ರೀಟ್, ನ್ಯೂಚಿತ್ರಾ ಟಾಕೀಸ್, ಅಳಕೆ ಮೂಲಕ ಸಾಗಿ ಬಾನುವಾರ (ಇಂದು) ಮುಂಜಾನೆ ಶ್ರೀ ಕ್ಷೇತ್ರದ ಪುಷ್ಕರಣಿಯಲ್ಲಿ ವಿಸರ್ಜನೆಗೊಂಡಿತ್ತು.

ಕರಾವಳಿಯ ವಿವಿಧ ಪುಣ್ಯಕ್ಷೇತ್ರಗಳಿಂದ ಪ್ರವರ್ತಿತ ಧಾರ್ಮಿಕ- ಸಾಂಸ್ಕೃತಿಕ ಸ್ತಬ್ಧಚಿತ್ರ, ಹುಲಿವೇಷ, ನೃತ್ಯರೂಪಕಗಳು, ದೇಶದ ಪರಂಪರೆಯ ಟ್ಯಾಬ್ಲೋಗಳು, ತ್ರಿಶೂರಿನ ಬಣ್ಣದ ಕೊಡೆ, ಕೇರಳದ ಚೆಂಡೆವಾದ್ಯ, ಕಲ್ಲಡ್ಕ ಶಿಲ್ಪಾಗೊಂಬೆಗಳು, ಬೆಂಗಳೂರಿನ ವಾದ್ಯತಂಡ, ಮಹಾರಾಷ್ಟ್ರದ ಡೋಲುನೃತ್ಯ, ಕರ್ನಾಟಕದ ಜಾನಪದ ವೈವಿಧ್ಯ… ಹೀಗೆ ಶೋಭಾಯಾತ್ರೆಗೆ ಮತ್ತಷ್ಟು ಮೆರುಗು ತುಂಬಿತು.

ವೈಭವದ ಮಂಗಳೂರು ದಸರಾ ಮಹೋತ್ಸವಕ್ಕೆ ತೆರೆ : ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ವರ್ಣರಂಜಿತ ಬೃಹತ್‌ ಶೋಭಾಯಾತ್ರೆ ಆರಂಭ

Comments are closed.