ಕರಾವಳಿ

ಕರಾವಳಿಯಾದ್ಯಂತ ಅಯುಧ ಪೂಜಾ ಸಂಭ್ರಮ : ದೇವಸ್ಥಾನಗಳಲ್ಲಿ ವಾಹನಗಳ ಸರತಿ ಸಾಲು

Pinterest LinkedIn Tumblr

ಮಂಗಳೂರು, ಅಕ್ಟೋಬರ್.18 : ಕರಾವಳಿಯಾದ್ಯಂತ ಇಂದು ಅಯುಧ ಪೂಜಾ ಸಂಭ್ರಮ. ನವರಾತ್ರಿ ಸಂದರ್ಭ ವಿಜಯದಶಮಿಗೂ ಮೊದಲು ಬರುವ ಆಯುಧ ಪೂಜೆಯನ್ನು ಕರಾವಳಿಯಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಆಯುಧ ಪೂಜೆಯ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಇಂದು ಸಂಭ್ರಮ ಮನೆ ಮಾಡಿದೆ. ಸರಕಾರಿ, ಖಾಸಗಿ ಸಂಸ್ಥೆಗಳಲ್ಲದೆ ಬಹುತೇಕ ಎಲ್ಲ ಕಡೆಯೂ ಭಕ್ತರು ಆಯುಧ ಪೂಜೆಯಲ್ಲಿ ಪಾಲ್ಗೊಂಡರು.

ಆಯುಧ ಪೂಜೆಯ ಪ್ರಯುಕ್ತ ಗುರುವಾರ ಜಿಲ್ಲಾದ್ಯಂತ ಪ್ಯಾಕ್ಟರಿಗಳು, ಗ್ಯಾರೇಜುಗಳು,ಯಂತ್ರೋಪಕರಣಗಳ ಮಳಿಗೆಗಳು, ವರ್ಕ್ ಶಾಪ್ ಗಳಲ್ಲಿ ಆಯುಧ ಪೂಜೆ-ಪುನಸ್ಕಾರ ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ಇಂದು ಮುಂಜಾನೆಯಿಂದಲೇ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರಗಳ ವಾಹನ ಮಾಲಕರು ತಮ್ಮ ಇಷ್ಟದ ದೇವಸ್ಥಾನಗಳಲ್ಲಿ ಸರತಿ ಸಾಲಲ್ಲಿ ನಿಂತು ತಮ್ಮ ವಾಹನಗಳಿಗೆ ವಿಶೇಷ ಪೂಜೆ ನೆರವೇರಿಸಿದರು.

ನಗರದ ಶರವು ದೇವಸ್ಥಾನ, ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಹಾಗೂ ಉರ್ವಾಸ್ಟೋರ್ ಸಮೀಪದ ಕೊಟ್ಟಾರದ ಶ್ರೀ ಗಣಪತಿ ದೇವಸ್ಥಾದಲ್ಲಿ ಇಂದು ಬೆಳಗ್ಗೆಯಿಂದ ನೂರಾರು ಸಂಖ್ಯೆಯಲ್ಲಿ ವಾಹನ ಮಾಲಕರು ತಮ್ಮ ವಾಹನಗಳಿಗೆ ಪೂಜೆ ನೆರವೇರಿಸಿದರು.

ಶರವು ದೇವಸ್ಥಾನದ ಆವರಣದೊಳಗೆ ನೂರಾರು ಸಂಖ್ಯೆಯಲ್ಲಿ ವಾಹನಗಳು ಸರದಿ ಸಾಲಲ್ಲಿ ನಿಂತಿದ್ದವು. ವಾಹನಗಳ ಪೈಕಿ ಕಾರುಗಳು, ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳು ದೇವಸ್ಥಾನದ ಆವರಣದಲ್ಲಿ ಕಂಡು ಬಂದವು. ನಗರ ಹಾಗೂ ಜಿಲ್ಲಾದ್ಯಂತ ಸಂಚರಿಸುವ ಕೆಲವು ಬಸ್ಸುಗಳು ಹಾಗೂ ಇತರ ಖಾಸಗಿ ವಾಹನಗಳು ಇಂದು ಮುಂಜಾನೆ ತಮ್ಮ ವಾಹನಗಳ ಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭ ಸಲ್ಲಿಸುವ ಪೂಜೆಯಿಂದ ತಮ್ಮಲ್ಲಿ ಸಂತೋಷ, ಐಶ್ವರ್ಯ, ಯಶಸ್ಸು ಇಮ್ಮಡಿಗೊಳ್ಳುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಈ ನಿಟ್ಟಿನಲ್ಲಿ ಬೆಳಗಿನಿಂದಲೇ ವಾಹನಗಳು ಸರತಿಯಲ್ಲಿದ್ದವು. ಇದರಿಂದ ನಗರದಾದ್ಯಂತ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

ಆಯುಧ ಪೂಜೆಗಾಗಿ ಬೂದುಗುಂಬಳಕಾಯಿ, ಹೂವು, ಹಣ್ಣು, ತರಕಾರಿ, ಬಟ್ಟೆ ವ್ಯಾಪಾರ ಕೂಡಾ ಭರಾಟೆಯಿಂದ ನಡೆದಿದೆ. ಹೂವಿನ ಬೆಲೆ ಗಗನಕೇರಿದ್ದರೂ ಗ್ರಾಹಕರು ಈ ಬಗ್ಗೆ ತಲೆಕೆಡಿಸಿಕೊಳ್ಳದೇ ಸಡಗರ ಸಂಭ್ರಮದಿಂದ ಹಬ್ಬವನ್ನು ಆಚರಿಸು ಮೂಲಕ ಖುಷಿಪಟ್ಟರು.

ವಾಹನಗಳಿಗೆ ಹೂವು ಮುಡಿದು ಸಿಹಿ ತಿಂಡಿ ಹಂಚಿ ಸಂಭ್ರಮಿಸಿದರು. ವಿಜಯ-ದಶಮಿ ಆಯುಧ ಪೂಜೆಯ ನಿಮಿತ್ತ ತರಕಾರಿ ಬೆಳೆಗಳ ಬೆಲೆ ಗಗನಕ್ಕೆ ಏರಿತ್ತು. ಅದರಲ್ಲೂ ಬಾಳೆಹಣ್ಣು, ನಿಂಬೆ, ಸೇಬು, ತೆಂಗಿನಕಾಯಿಯ ಬೆಲೆ ಹೆಚ್ಚಿತ್ತು. ಅದಲ್ಲದೆ ನಗರದ ಪ್ರಮುಖ ರಸ್ತೆಗಳಲ್ಲಿ ಉತ್ತರ ಕರ್ನಾಟಕ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗದಿಂದ ಆಗಮಿಸಿದ ವ್ಯಾಪಾರಿಗಳಿಂದ ಹೂವುಗಳನ್ನು ಖರೀದಿಸಲು ಗ್ರಾಹಕರು ಮುಗಿ ಬಿದ್ದರು. ಸೇವಂತಿಗೆ, ಮಲ್ಲಿಗೆ, ಗುಲಾಬಿ ಹೂವುಗಳಿಗೆ ಬೇಡಿಕೆ ಹೆಚ್ಚಿತ್ತು. ಕೆಲವರು ಚೌಕಾಸಿ ಮಾಡಿದರೆ ಇನ್ನು ಕೆಲವರು ವ್ಯಾಪಾರಿಗಳು ಹೇಳಿದ ಬೆಲೆ ಕೊಟ್ಟು ಹೂವು ಖರೀದಿಸುತ್ತಿದ್ದುದು ಕಂಡು ಬಂತು.

ಮಂಗಳೂರು ದಸರಾಕ್ಕೆ ಅಲ್ಲಲ್ಲಿ ಕಾಣಿಸುವ ದೀಪಾಲಂಕಾರ ವಿಶೇಷ ಮೆರಗು ನೀಡುತ್ತಿದ್ದರೆ ಹುಲಿಗಳ ಅಬ್ಬರ ಕೂಡ ಹೊಸ ಸಂಭ್ರಮವನ್ನೇ ಸೃಷ್ಟಿಸುತ್ತಿದೆ. ಪೌರಾಣಿಕ ವೇಷಗಳ ಜೊತೆಗೆ ನಾನಾ ಮಾದರಿಯ ಹುಲಿ ವೇಷಗಳು, ಬ್ಯಾಂಡ್, ವಾದ್ಯಗಳು ದಸರಾದ ವೈಭವ ಹೆಚ್ಚಿಸಿವೆ. ನಗರದ ಪ್ರಮುಖ ರಸ್ತೆಗಳಲ್ಲದೆ ಮನೆ ಮನೆಗಳ ಮುಂದೆ ಹುಲಿವೇಷದ ಕುಣಿತ ತಡರಾತ್ರಿಯವರೆಗೂ ನಡೆಯುತ್ತಿವೆ. ಜೊತೆಗೆ ಅಲ್ಲಲ್ಲಿ ಹುಲಿ ನಲಿಕೆ ಸ್ಪರ್ಧೆ ಏರ್ಪಡಿಸಲಾಗುತ್ತಿದೆ.

__Sathish Kapikad ( Mob: 9035089084)

Comments are closed.