ಕರಾವಳಿ

ಸಾಮಾಜಿಕ ಚಿಂತಕ, ಪರೋಪಕಾರಿ,ಅಪದ್ಬಾಂಧವ,ವಿವಿಧ ಸಂಘಟನೆಗಳ ಮುಖಂಡ, ಮತ್ಸ್ಯ ವ್ಯಾಪಾರಿ ಹಮೀದ್ ಕುದ್ರೋಳಿ ವಿಧಿವಶ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್. 19: ಮಂಗಳೂರಿನ ಪ್ರಸಿದ್ಧ ಸಮಾಜ ಸೇವಕ ಹಲವಾರು ಸಂಘ ಸಂಸ್ಥೆಗಳ ಮುಖಂಡ,ವಿವಿಧ ಸಾಮಾಜಿಕ ಸಂಘಟನೆಗಳ ಸಕ್ರೀಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ನಗರದ ದಕ್ಕೆಯ ಮತ್ಸ್ಯ ವ್ಯಾಪಾರಿ ಹಮೀದ್ ಕುದ್ರೋಳಿ (58) ಅವರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ಅಸೌಖ್ಯ ಕಾರಣ ಬುಧವಾರ ಬೆಳಗ್ಗೆ ನಿಧನರಾದರು.

ನಗರದ ಬೋಳಾರ ಮುಳಿಹಿತ್ತ್ಲು, ಅರಿಕೆರೆ ಚೆಲ್ಲರಿ ರಸ್ತೆಯ ನಿವಾಸಿಯಾಗಿದ್ದ (ಹಮೀದ್ ಕುದ್ರೋಳಿ ಅವರು) ಮೃತರು ಪತ್ನಿ, ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಮೃತದೇಹವನ್ನು ಕುದ್ರೋಳಿಯ ಅವರ ಸಹೋದರನ ಮನೆಯಲ್ಲಿ ಇರಿಸಲಾಗಿದ್ದು, ಬಳಿಕ ಸಂಜೆ ನಗರದ ನಡುಪಳ್ಳಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಅವರ ನಿಧನಕ್ಕೆ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್, ಸೇರಿದಂತೆ ರಾಜಕೀಯ ಪ್ರತಿನಿಧಿಗಳು,ರಾಜಕೀಯ ಮುಖಂಡರು, ಉದ್ಯಮಿಗಳು ಸಂತಾಪ ಸೂಚಿಸಿದ್ದಾರೆ.

ಎಎಫ್ ಫಿಶರೀಸ್ ಪಾಲುದಾರಾಗಿದ್ದ ಹಮೀದ್ ಕುದ್ರೋಳಿ ಅವರು,ಅಖಿಲ ಭಾರತ ಬ್ಯಾರಿ ಪರಿಷತ್ (ರಿ) ದ.ಕ ಜಿಲ್ಲೆ ಇದರ ಉಪಾಧ್ಯಕ್ಷರಾಗಿ,ಮಂಗಳೂರು ಮೀನು ಮಾರಾಟ ಮತ್ತು ಕಮಿಷನ್ ಏಜೆಂಟರ ಸಂಘ ಉಪಾಧ್ಯಕ್ಷರಾಗಿ, ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ ಮತ್ತು ಸೆಂಟ್ರಲ್ ಕಮಿಟಿ ಇದರ ಸಕ್ರಿಯ ಸದಸ್ಯರಾಗಿ, ದ.ಕ ಜಿಲ್ಲಾ ಬ್ಲಡ್ ಬ್ಯಾಂಕ್ ಬಯೂಮ್ (ರಕ್ತ ನಿಧಿ)ಯ ಸದಸ್ಯರಾಗಿ ಹಾಗೂ ಇನ್ನಿತರ ಸಾಮಾಜಿಕ ಸಂಘಟನೆಗಳ ಸಕ್ರೀಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಹಮೀದ್ ಕುದ್ರೋಳಿ ಮಂಗಳೂರು ಬಂದರ್ ಧಕ್ಕೆಯಲ್ಲಿ ಹಸಿಮೀನು ವ್ಯಾಪಾರಿ. ಕಳೆದ ಹತ್ತು ವರ್ಷಗಳಿಂದ ನನ್ನ ಅಪ್ತಮಿತ್ರರೂ ಆಗಿದ್ದ ಅವರು, ಕಳೆದ ಮೂರು ವರ್ಷದಿಂದ ಪ್ರತೀ ಶುಕ್ರವಾರ ಜುಮಾ ನಮಾಝಿನ ನಂತರ ಐದು ಮಂದಿ ಮಾನಸಿಕ ಅಸ್ವಸ್ಥರನ್ನು ಹುಡುಕಿ ಅವರಿಗೆ ಅನ್ನದಾನ ಮಾಡುತ್ತಿದ್ದರು.. ಹಿಂದೆ ಹತ್ತು ಮಂದಿಗೆ ಕೊಡುತ್ತಿದ್ದರು.

ಆದರೆ ಈಗ ಅಂತಹವರನ್ನು ಹುಡುಕುವುದು ಪ್ರಯಾಸವಾದಾಗ ಐದಕ್ಕೆ ಇಳಿಸಿದ್ದಾರೆ. ಮಿನಿಮಂ ಐದು ಮಂದಿ ಸಿಗಲೇ ಬೇಕು ಇಲ್ಲದಿದ್ದರೆ ಅವರೇ ಹುಚ್ಚರಾಗಿ ಬಿಡುತ್ತಾರೆ! ಅಂದ ಹಾಗೆ, ಇಂತಹವರಿಗೆ ಊಟವನ್ನು ಹೋಟೆಲ್‍ನಿಂದ ತಂದುಕೊಡುವುದಲ್ಲ. ಮನೆಯಲ್ಲೇ ತಯಾರಿಸಿದ ಬಿರಿಯಾನಿ, ಚಿಕನ್ ಪ್ರೈ, ಮೀನುಕರಿ, ಪಿಶ್ ಪ್ರೈ ಕೊಡುತ್ತಾರೆ. ಜೊತೆಗೆ ಒಂದು ಬಾಟಲ್ ಮಿನರಲ್ ವಾಟರ್.

ತಾವು ಮನೆಯಲ್ಲೇ ಉಣ್ಣುವುದನ್ನು ಅವರಿಗೆ ಕೊಡುವುದು. ಹುಚ್ಚರನ್ನು ಹುಡುಕುವ ಭರಾಟೆಯಲ್ಲಿ ಊಟದ ಪೊಟ್ಟಣ ಕೊಡುವಾಗ ಕಲ್ಲೆಸೆಯುವುದು, ಹೊಡೆಯುವುದು ಮುಂತಾದ ಅನಾಹುತಗಳಿಗೂ, ತುತ್ತಾದ ನಿದರ್ಶನಗಳಿವೆ. ಇವರ ಈ ಪುಣ್ಯ ಕಾರ್ಯಕ್ಕೆ ಮಡದಿ, ಮಕ್ಕಳು ಸಾಥ್ ನೀಡುತಿದ್ದರು.

ಹಮೀದಾಕ ಒಬ್ಬ ಅಪದ್ಬಾಂಧವ. ಯಾರೇ ಕಷ್ಟದಲ್ಲಿರಲಿ ಓಡೋಡಿ ಬರುವ ಹೃದಯವಂತ. 2010 ಮೇ 22ರಂದು ನಡೆದ ಭೀಕರ ವಿಮಾನ ಅಪಘಾತದಲ್ಲಿ ಮಡಿದವರ ಶವ ಗುರುತಿಸಲು ನಿರಂತರ ಮೂರು ದಿನಗಳ ಕಾಲ ಶವಾಗಾರದಲ್ಲಿ ಹಗಲಿರುಳೆನ್ನದೆ ನಿಂತ ಹಮೀದಾಕ ಮುಸ್ಲಿಂ ಸೆಂಟ್ರಲ್ ಕಮಿಟಿಯ ದ.ಕ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿಯಾಗಿ ಮುಸ್ಲಿಮರ ನಾಡಿಮಿಡಿತಕ್ಕೆ ತಟ್ಟನೆ ಮಿಡಿಯುವ ಭಾವುಕಜೀವಿ.

ಹಲವಾರು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿರುವ ಹಮೀದಾಕ ಪ್ರಮುಖವಾಗಿ ಜಿಲ್ಲಾಧಿಕಾರಿಯವರು ಕಾನೂನು ಸುವ್ಯವಸ್ಥೆಗಾಗಿ ಸಭೆ ಕರೆದಾಗ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಸಭೆಗೆ ಹಾಜರಾಗಿ ಸೂಕ್ತ ಸಲಹೆ, ಸೂಚನೆಗಳನ್ನು ನೀಡುತ್ತಿದ್ದರು. ಇದರಲ್ಲಿ ಯಾವುದೇ ಮುಲಾಜಿಲ್ಲದೆ ಕಾನೂನಿನ ಸುವ್ಯವಸ್ಥೆಗೆ ಉತ್ತಮ ಸಲಹೆ ನೀಡುವುದು ಹಮಿದಾಕರ ಹವ್ಯಾಸ.

ಕಳೆದ ವರ್ಷ ಉಳ್ಳಾಲ ಸಮೀಪದ ಸ್ಕೂಲ್‌ವೊಂದರ ಅಮಾಯಕ ಮಗುವಿನ ಅತ್ಯಾಚಾರ ಘಟನೆಯಲ್ಲಿ ಮಾಜಿ ಮೇಯರ್ ಕೆ.ಅಶ್ರಫ್ ಮತ್ತು ಸಮಾಜ ಸೇವಕ ಇಸ್ಮಾಯಿಲ್ ಬಬ್ಬುಕಟ್ಟೆಯವರ ಜೊತೆಗೂಡಿ ಮಗುವಿಗೆ ನ್ಯಾಯ ಕೊಡಿಸುವ ಹೋರಾಟದಲ್ಲಿ ಇವರು ಮುಂಚೂಣಿಯಲ್ಲಿದ್ದರು. ತಮ್ಮ ಬಿಡುವಿಲ್ಲದ ವ್ಯಾಪಾರದ ನಡುವೆ ಸಮಾಜ ಸೇವೆಯನ್ನು ಉಸಿರಾಗಿಸಿರುವ ಹಮೀದಾಕನಂತಹವರು ಸಮಾಜದ ನಿಜವಾದ ಅಸ್ತಿಯನ್ನು ಇಂದು ನಾವು ಕೂಡ ಕಳೆದುಕೊಂಡಿದ್ದೇವೆ. ಪರೋಪಕಾರಿಯಾಗಿದ್ದ ಹಮೀದಾಕ ಅವರ ಅತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ.

__ ಸತೀಶ್ ಕಾಪಿಕಾಡ್

Comments are closed.