ಕರಾವಳಿ

ಮಂಗಳೂರು : ಕಂಠಪೂರ್ತಿ ಕುಡಿದು ಜನನಿಬಿಡ ರಸ್ತೆಯಲ್ಲಿ ತೂರಾಡಿದ ಪೊಲೀಸ್ ಸಿಬ್ಬಂದಿ : ವ್ಯಾಪಕ ಆಕ್ರೋಷ – ವಿಡೀಯೋ ವೈರಲ್

Pinterest LinkedIn Tumblr

ಮಂಗಳೂರು, ಸೆಪ್ಟೆಂಬರ್. 19: ಪೊಲೀಸ್ ಸಿಬ್ಬಂದಿಯೊಬ್ಬರು ಕರ್ತವ್ಯದಲ್ಲಿದ್ದಾಗಲೇ ಕಂಠಪೂರ್ತಿ ಕುಡಿದು ತೂರಾಡಿದ ಘಟನೆ ಮಂಗಳೂರಿನ ಲಾಲ್‌ಭಾಗ್ ಸಮೀಪ ಬುಧವಾರ ಮಧ್ಯಾಹ್ನ ನಡೆದಿದ್ದು, ಸಮವಸ್ತ್ರ ಧರಿಸಿರುವ ಈ ಪೊಲೀಸಪ್ಪ ಕುಡಿದು ತೂರಾಡುತ್ತಿರುವ ವಿಡೀಯೋ ಇದೀಗ ಸಾಮಾಜಿಕ ಜಲತಾಣಗಳಲ್ಲಿ ವೈರಲ್ ಆಗಿದೆ.

https://www.youtube.com/watch?v=Fa8H4uGhzGg

 

ಡ್ಯೂಟಿಯಲ್ಲಿರುವಾಗಲೇ ಸಮವಸ್ತ್ರ ಧರಿಸಿ ಕಂಠಪೂರ್ತಿ ಕುಡಿದು ಕುಡಿದ ಮತ್ತಿನಲ್ಲಿ ಮಟಮಟ ಮಧ್ಯಾಹ್ನ ರಸ್ತೆಯಲ್ಲೆಲ್ಲಾ ತೂರಾಡುವ ಮೂಲಕ ಪೊಲೀಸ್ ಇಲಾಖೆಗೆ ಕಪ್ಪುಚುಕ್ಕೆ ತಂದಂತಹ ಈ ಪೊಲೀಸ್ ಸಿಬ್ಬಂದಿಯನ್ನು ಮಂಗಳೂರು ಪಶ್ಚಿಮ ಸಂಚಾರಿ ಠಾಣೆಯ (ಪಾಂಡೇಶ್ವರ) ಸಿಬ್ಬಂದಿ ಅಶೋಕ್ ಗೌಡ ಎಂದು ಗುರುತಿಸಲಾಗಿದೆ.

ಮಂಗಳೂರಿನ ಲಾಲ್ ಬಾಗ್ ಹಾಗು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಬಳಿಯ ಜನನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕರ್ತವ್ಯದಲ್ಲಿದ್ದಾಗಲೇ ಪೊಲೀಸ್ ಸಿಬ್ಬಂದಿ ಕುಡಿದ ಮತ್ತಿನಲ್ಲಿ ತೂರಾಡುತ್ತಿದ್ದ ದೃಶ್ಯವನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಕರ್ತವ್ಯದಲ್ಲಿರುವ ಮಧ್ಯೆ ಪೊಲೀಸರು ಕುಡಿಯುವುದು ನಿಷಿದ್ಧ. ಹಾಗಿದ್ದರೂ, ಇವರು ಸಮವಸ್ತ್ರ ಧರಿಸಿ ಕೊಂಡು ಕುಡಿದು ತೂರಾಡಿದ್ದಲ್ಲದೆ ರಸ್ತೆ ಮಧ್ಯೆ ವಾಹನಗಳನ್ನು ತಳ್ಳಿಕೊಂಡು ಹೋಗಿದ್ದಾರೆ. ಕುಡಿದ ಮತ್ತಿನಲ್ಲಿ ಇವರೇ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಿದ್ದರು ಎಂದು ಹೇಳಲಾಗಿದೆ.

ಒಂದು ಸಂದರ್ಭದಲ್ಲಿ ಫುಲ್ ಟೈಟ್ ಆಗಿದ್ದ ಪೊಲೀಸ್ ಸಿಬ್ಬಂದಿ ಅಶೋಕ್ ಗೌಡ ನನ್ನು ಸಾರ್ಜನಿಕರೇ ಎಳೆದು ತಂದು ರಕ್ಷಿಸಿದ್ದಾರೆ. ಸಾರ್ವಜನಿಕರೆಲ್ಲಾ ಸೇರಿ ಪೊಲೀಸ್ ಪೇದೆಯನ್ನು ಹಿಡಿದು ರಸ್ತೆ ಬದಿಯ ಬಸ್ ನಿಲ್ದಾಣದಲ್ಲಿ ಕುಳ್ಳಿರಿಸಿ ಕುಡಿಯಲು ನೀರನ್ನೂ ಕೂಡ ಕೊಟ್ಟಿದ್ದಾರೆ.

ಸಮವಸ್ತ್ರದಲ್ಲಿ ಕುಡಿದು ತೂರಾಡಿದ ಪೊಲೀಸ್ ಸಿಬ್ಬಂದಿ ವಿರುದ್ಧ ಇದೀಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿ ಹೊತ್ತು ಕುಡಿದು ವಾಹನ ಚಲಾಯಿಸುವವರನ್ನು ಹಿಡಿದು ದಂಡ ಹಾಕುವ ಟ್ರಾಫಿಕ್ ಪೊಲೀಸರೇ ಮಟಮಟ ಮಧ್ಯಾಹ್ನ ಕುಡಿದು ಹೀಗೆ ತೂರಾಡಿದರೆ ಜನತೆಗೆ ಯಾವ ಸಂದೇಶ ನೀಡ ಬಹುದು ಎಂದು ಪ್ರಶ್ನಿಸಿದ್ದಾರೆ.

Comments are closed.