ಕರಾವಳಿ

ಸೋದರನ ಕೊಂದು ಚಿತೆಯಲ್ಲಿ ಶವ ಸುಟ್ಟ ಇಬ್ಬರು ಆರೋಪಿಗಳಿಗೆ ಜಾಮೀನು!

Pinterest LinkedIn Tumblr

ಕುಂದಾಪುರ: ಮನೆಯಲ್ಲಿ ನಡೆದ ಜಗಳದ ತರುವಾಯ ಸ್ವಂತ ಸಹೋದರನನ್ನೇ ಕೊಂದು ಶವವನ್ನು ಕಾಡಿನಲ್ಲಿ ಸುಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ಆರೋಪಿಗಳಾಗಿರುವ ಇಬ್ಬರಿಗೆ ಕುಂದಾಪುರದಲ್ಲಿನ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯ ಜಾಮೀನು ನೀಡಿದೆ. ನ್ಯಾಯಾಧೀಶ ಪ್ರಕಾಶ ಖಂಡೇರಿ ಈ ತೀರ್ಪು ಪ್ರಕಟಿಸಿದ್ದಾರೆ. ಕುಂದಾಪುರದ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ್ ಆರೋಪಿಗಳ ಪರ ವಾದ ಮಂಡಿಸಿದ್ದಾರೆ.

(ಕೊಲೆಯಾದ ಮುತ್ತಯ್ಯ ನಾಯ್ಕ್)

2018 ಎಪ್ರಿಲ್ ತಿಂಗಳ 26 ರಂದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗೋಳಿಹೊಳೆ ಕಂಬಳಗದ್ದೆ ಎಂಬಲ್ಲಿ ಮುತ್ತಯ್ಯ ನಾಯ್ಕ್ (35) ಎನ್ನುವರನ್ನು ಅವರ ಸಹೋದರರಾದ ದುರ್ಗ ನಾಯ್ಕ್, ರಾಘವೇಂದ್ರ ನಾಯ್ಕ್ ಕೊಲೆ ಮಾಡಿದ್ದರು. ಅಂದಿನಿಂದ ಜೈಲು ವಾಸದಲ್ಲಿದ್ದ ಇಬ್ಬರು ಆರೋಪಿಗಳಿಗೆ ಸದ್ಯ ಜಾಮೀನು ಸಿಕ್ಕಿದೆ.

ಮುತ್ತಯ್ಯ ನಾಯ್ಕನನ್ನು ಕೊಂದ ಬಳಿಕ ಶವವನ್ನು ರಾತ್ರಿ ವೇಳೆ ಮನೆ ಸಮೀಪದ ಹಾಡಿಯಲ್ಲಿ ಮರದ ಕಟ್ಟಿಗೆ ಮೂಲಕ ಚಿತೆ ನಿರ್ಮಿಸಿ ದಹನ ಮಾಡಿದ್ದರು. ಶವದ ಜೊತೆಗೆ ಕೊಲೆಗೆ ಬಳಸಿದ ನೈಲಾನ್ ಹಗ್ಗವನ್ನು ಸುಟ್ಟಿದ್ದರು. ಒಂದೆರಡು ದಿನಗಳಬಳಿಕ ಈ ಪ್ರಕರಣ ಬೆಳಕಿಗೆ ಬಂದಿತ್ತು. ಮುಂಬೈನಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದ ಮುತ್ತಯ್ಯ ನಾಯ್ಕ್ ತಂದೆಯ ಮರಣದ ಗೋಳಿಹೊಳೆಯ ನಿವಾಸಕ್ಕೆ ಆಗಮಿಸಿದ್ದು ವಾಪಾಸ್ ಮುಂಬೈಗೆ ತೆರಳದೇ ಊರಲ್ಲಿಯೇ ಇದ್ದರು. ಯಾವುದೇ ಕೆಲಸ ಕಾರ್ಯ ಮಾಡಿಕೊಂಡಿರದ ಮುತ್ತಯ್ಯ ಕುಡಿತದ ಚಟ ಹೊಂದಿದ್ದು ಹಣಕ್ಕಾಗಿ ವೃದ್ಧ ತಾಯಿಯನ್ನು ಸಹೋದರಿಯರನ್ನು ಪೀಡಿಸುತ್ತಿದ್ದ. ಮನೆಯಲ್ಲಿ ನಿತ್ಯವೂ ಜಗಳ ಮಾಮೂಲಿಯಾಗಿತ್ತು. ಘಟನೆ ನಡೆದ ದಿನದಂದು ಮನೆಯಲ್ಲಿ ಗಲಾಟೆ ನಡೆದಿದೆ ಎನ್ನಲಾಗಿದ್ದು ಗಲಾಟೆಯ ನಡುವೆ ಈ ಕೊಲೆ ಸಂಭವಿಸಿತ್ತು. ಬಳಿಕ ಪ್ರಕರಣ ಮುಚ್ಚಿ ಹಾಕುವ ಸಲುವಾಗಿ ಶವವನ್ನು ಮನೆಯಿಂದ ಒಂದೂವರೆ ಕಿಲೋಮಿಟರ್ ದೂರದ ನಿರ್ಜನ ಕಾಡಿನಲ್ಲಿ ಸುಟ್ಟು ಹಾಕಲಾಗಿತ್ತು.

ಮನೆಯಿಂದ ದೂರದಲ್ಲಿರುವ ಗುಡ್ಡದ ತಪ್ಪಲಿನಲ್ಲಿ ನಿರ್ಜನ ಕಾಡಿನ ಸಮೀಪದಲ್ಲಿನ ಅವರಿಗೆ ಸಂಬಂಧಪಟ್ಟ ಜಾಗದಲ್ಲಿ ಶವವನ್ನು ಸಂಪೂರ್ಣ ಸುಟ್ಟು ಹಾಕಿದ ಬಗ್ಗೆ ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿಯಂತೆ ಸ್ಥಳಕ್ಕೆ ತೆರಳಿದ್ದು ಇದೊಂದು ಕೊಲೆಯೆಂದು ತಿಳಿದಾಗ ಇಬ್ಬರನ್ನು ಬಂಧಿಸಿದ್ದರು. ಬೈಂದೂರು ಸಿಪಿಐ ಪರಮೇಶ್ವರ ಗುನಗ ಆರೋಪಿಗಳ ವಿರುದ್ಧ ಕೊಲೆ ಹಾಗೂ ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಬೂದಿಯಲ್ಲಿ ಸಿಕ್ಕ ಮೂಳೆಯನ್ನು ಸದ್ಯ ಫೋರೆನ್ಸಿಕ್ ಲ್ಯಾಬಿಗೆ ಕಳುಹಿಸಲಾಗಿದೆ.

ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಹೋಮಕುಂಡ ಹತ್ಯೆ ಪ್ರಕರಣದಂತೆಯೇ ಇದು ಕೂಡ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ ಪ್ರಕರಣವಾಗಿತ್ತು.

(ವರದಿ- ಯೋಗೀಶ್ ಕುಂಭಾಸಿ)

ಇದನ್ನೂ ಓದಿರಿ:   ಕುಂದಾಪುರ(ಬೈಂದೂರು): ಸೋದರನನ್ನು ಕೊಂದು ಶವವನ್ನು ಸುಟ್ಟರೇ ಸಹೋದರರು?

 

 

Comments are closed.