ಕರಾವಳಿ

ಖ್ಯಾತ ಉದ್ಯಮಿ ಕಣಚೂರು ಮೋನು ಅವರಿಗೆ ರವಿ ಪೂಜಾರಿ ಹೆಸರಿನಲ್ಲಿ ಬೆದರಿಕೆ ಕರೆ : ದೂರು ದಾಖಲು

Pinterest LinkedIn Tumblr

ಮಂಗಳೂರು, ಸೆಪ್ಟಂಬರ್. 19: ಕಾಂಗ್ರೆಸ್ ಮುಖಂಡ ಮತ್ತು ನಗರದ ಖ್ಯಾತ ಉದ್ಯಮಿ ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಕಣಚೂರು ಮೋನು ಅವರಿಗೆ ಬೆದರಿಕೆ ಕರೆ ಹಾಕಿದ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರೂ ಆಗಿರುವ, ಉದ್ಯಮಿ ಕಣಚೂರು ಮೋನು ಅವರಿಗೆ ಭೂಗತ ದೊರೆ ರವಿ ಪೂಜಾರಿ ಹೆಸರಿನಲ್ಲಿ ಇಂಟರ್‌ನೆಟ್ ಮೂಲಕ ಬೆದರಿಕೆ ಕರೆ ಬಂದಿದ್ದು, ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆಪ್ಟಂಬರ್ ೧೫ರಂದು ಶನಿವಾರ ವಿದೇಶದಿಂದ ಕರೆ ಮಾಡಿರುವ ಅಪರಿಚಿತ ವ್ಯಕ್ತಿಯೊಬ್ಬ ರವಿ ಪೂಜಾರಿ ಹೆಸರಲ್ಲಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಮೋನು ಅವರ ದೂರವಾಣಿಗೆ ಇಂಟರ್‌ನೆಟ್ ಮೂಲಕ ಕರೆ ಮಾಡಿರುವ ವ್ಯಕ್ತಿಯು ಹಿಂದಿಯಲ್ಲಿ ಮಾತನಾಡಿ ಕಣಚೂರು ಮೋನು ಅವರ ಹೆಸರು ಕೇಳಿ ತಾನು ರವಿ ಪೂಜಾರಿ ಮಾತನಾಡುತ್ತಿರುವುದು.ನಾನು ಹೇಳಿದ ಹಾಗೆ ಕೇಳಬೇಕು.ತಾನು ಹೇಳಿದಂತೆ ಕೇಳದಿದ್ದಲ್ಲಿ ತನ್ನ ಹುಡುಗರನ್ನು ಬಿಡಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂದರ್ಭ ಮೋನು ಅವರು ದೂರವಾಣಿಯನ್ನು ಕಟ್ ಮಾಡಿದರೂ ಅ ವ್ಯಕ್ತಿ ಮತ್ತೆ ಮತ್ತೆ ಕರೆ ಮಾಡುತ್ತಿದ್ದು, ಮೋನು ಅವರು ಈ ಕರೆಗಳಿಗೆ ಉತ್ತರಿಸಲಿಲ್ಲ ಎನ್ನಲಾಗಿದೆ. ಥಾಲ್ಯಾಂಡ್ ಮತ್ತು ಲಾವೋಸ್‌ನಿಂದ ನಿರಂತರ ಒಂಬತ್ತು ಅಪರಿಚಿತ ಕರೆಗಳು ಕಣಚೂರು ಮೋನುಗೆ ಬಂದಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Comments are closed.