ಕರಾವಳಿ

ಪಣಂಬೂರ್ ಪೊಲೀಸರ ಕಾರ್ಯಚರಣೆ ; ಚಾಲಕನನ್ನ ಕೊಲೆ ಮಾಡಿ ಕಂಟೈನರ್‌ಲ್ಲಿದ್ದ 7 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ದೋಚಿ ಪರಾರಿಯಾಗಿದ್ದ ಆರೋಪಿ ಸೆರೆ

Pinterest LinkedIn Tumblr

ಆರೋಪಿ ಅಸಾದುಲ್ಲಾ ಷರೀಫ್                                               ಕೊಲೆಯಾದ ಅನಿಲ್ ಕುಮಾರ್ ನ ಮೃತದೇಹ

ಮಂಗಳೂರು : ಪಣಂಬೂರು ಠಾಣಾ ವ್ಯಾಪ್ತಿಯ ಬೈಕಂಪಾಡಿಯಲ್ಲಿರುವ ರುಚಿ ಸೋಯ ಇಂಡಸ್ಟ್ರೀಯಿಂದ ಸುಮಾರು 7,50,000 ಮೌಲ್ಯದ 1050 ಬಾಕ್ಷ್ ತಾಳೆ ಎಣ್ಣೆಯನ್ನು ಸಾಗಿಸುತ್ತಿದ್ದ ಕಂಟೈನರ್ ಚಾಲಕನನ್ನ ಕೊಲೆ ಮಾಡಿ ಕಂಟೈನರ್‌ಲ್ಲಿದ್ದ ಸೊತ್ತುಗಳನ್ನು ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಪಣಂಬೂರ್ ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬೆಂಗಳೂರಿನ ಕೆಂಪನಹಳ್ಳಿ, ಮಾಗಡಿ ತಾಲೂಕು ರಾಮನಗರ ಜಿಲ್ಲೆಯ ಅಸಾದುಲ್ಲಾ ಷರೀಪ್ ಯಾನೆ ರಹಮನ್ ಷರೀಪ್ (50) ಎಂದು ಗುರುತಿಸಲಾಗಿದೆ.

ಘಟನೆಯ ವಿವರ :

ದಿನಾಂಕ: 28-08-2018ರಂದು ಪಣಂಬೂರು ಠಾಣಾ ವ್ಯಾಪ್ತಿಯ ಬೈಕಂಪಾಡಿಯಲ್ಲಿರುವ ರುಚಿ ಸೋಯ ಇಂಡಸ್ಟ್ರೀಯಿಂದ ಸುಮಾರು 7,50,000 ಮೌಲ್ಯದ 1050 ಬಾಕ್ಷ್ ತಾಳೆ ಎಣ್ಣೆಯನ್ನು ಚಾಲಕ ಅನೀಲ್ ಕುಮಾರ್ ಇವರೊಂದಿಗೆ ಸುಗಮ ಕಂಪನಿಯ ಲಾರಿಯಲ್ಲಿ ಬೆಂಗಳೂರಿಗೆ ಕಳುಹಿಸಿಕೊಟ್ಟದನ್ನು ತಲುಪಿಸಬೇಕಾದ ಸ್ಥಳಕ್ಕೆ ತಲುಪಿಸದೇ ಮೋಸ ಮಾಡಿರುವ ಬಗ್ಗೆ ಶಿವಗಣೇಶ್ ಟ್ರಾನ್ಸ್ ಪೋರ್ಟ್ ಮಾಲೀಕರು ದಿನಾಂಕ: 30-08-2018ರಂದು ನೀಡಿದ ದೂರಿನಂತೆ ವಂಚನೆ ಪ್ರಕರಣ ದಾಖಲಿಸಿದ್ದರು.

ಈ ಬಗ್ಗೆ ಪಣಂಬೂರ್ ಉತ್ತರ ಉಪ ವಿಭಾಗದ ರೌಡಿ ನಿಗ್ರಹ ದಳದ ಪಣಂಬೂರು ಠಾಣಾ ಪಿ.ಐ ರಫೀಕ್.ಕೆ.ಎಂ. ಮತ್ತು ಪಿ.ಎಸ್.ಐ(ಕಾ,ಸು) ಉಮೇಶ್ ಕುಮಾರ್ ಎಂ.ಎನ್ ರವರು ತನಿಖೆಯನ್ನು ಮುಂದುವರಿಸಿದ್ದು, ಹಾಸನ,ಬೆಂಗಳೂರು, ಮಂಡ್ಯ,ಮಡಿಕೇರಿ ಮುಂತಾದ ಕಡೆಗಳಲ್ಲಿ ಪ್ರಕರಣದ ಬಗ್ಗೆ ತನಿಖೆ ಕೈಗೊಂಡು ದಿನಾಂಕ:16-09-2018ರಂದು ಕೆಂಗೇರಿ ಬಳಿ ಪ್ರಕರಣದ ಆರೋಪಿ ಅಸಾದುಲ್ಲಾ ಷರೀಫ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆತನು ತನ್ನ ಸಹಚರರೊಂದಿಗೆ ಸೇರಿಕೊಂಡು ಅನಿಲ್ ನನ್ನು ಕೊಲೆ ಮಾಡಿ ಶವವನ್ನು ರಾಮನಗರ ಜಿಲ್ಲೆಯ ಕುಂಬಳಗೋಡು ಎಂಬಲ್ಲಿ ಹೂತು ಹಾಕಿ ಲಾರಿಯಲ್ಲಿದ್ದ ಮಾಲನ್ನು ದೋಚಿ, ನಂತರ ಖಾಲಿ ಕಂಟೈನರ್ ಲಾರಿಯನ್ನ ಮಂಡ್ಯ ಸಮೀಪ ಬಿಟ್ಟು ಹೋಗಿದ್ದಾಗಿ ತಿಳಿಸಿರುತ್ತಾನೆ. ಅನಿಲ್ ಕುಮಾರ್ ನ ಶವವನ್ನು ಬೆಂಗಳೂರು ದಕ್ಷಿಣ ಉಪ-ವಿಭಾಗಾಧಿಕಾರಿ ಮೂಲಕ ಮಣ್ಣಿನಿಂದ ಹೊರತೆಗೆದು ಶವ ಪರೀಕ್ಷೆ ನಡೆಸಿ ವಾರೀಸುದಾರರಿಗೆ ಹಸ್ತಾಂತರಿಸಲಾಗಿದ್ದು, ಆರೋಪಿಗಳ ಮೇಲೆ ಕೊಲೆ ಪ್ರಕರಣ ದಾಖಲಾಗಿರುತ್ತದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ತೆ ಕಾರ್ಯಾಚರಣೆಯಲ್ಲಿ ಮಂಗಳೂರು ನಗರದ ಪೊಲೀಸು ಆಯುಕ್ತರಾದ ಟಿ. ಆರ್ ಸುರೇಶ್ ಇವರ ನಿರ್ದೇಶನದಂತೆ ಮಂಗಳೂರು ನಗರ ಪೊಲೀಸ್ ಉಪ-ಆಯುಕ್ತರು ಶ್ರೀಮತಿ ಉಮಾ ಪ್ರಶಾಂತ್ ಇವರ ಮಾರ್ಗದರ್ಶನದಂತೆ ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ರಾಜೇಂದ್ರ ಡಿ ಎಸ್ ಇವರ ನೇತೃತ್ವ್ವದಲ್ಲಿ ಪಣಂಬೂರು ಠಾಣಾ ಪೊಲೀಸು ನಿರೀಕ್ಷಕರಾದ ರಫೀಕ್.ಕೆ.ಎಮ್, ಪಣಂಬೂರು ಠಾಣಾ ಪಿ.ಎಸ್.ಐ(ಕಾ.ಸು) ಉಮೇಶ್ ಕುಮಾರ್.ಎಂ.ಎನ್ ಹಾಗೂ ಪಣಂಬೂರು ರೌಡಿ ನಿಗ್ರಹ ದಳದ ಅಧಿಕಾರಿ/ ಸಿಬ್ಬಂದಿಗಳು ಮತ್ತು ಪಣಂಬೂರು ಪೊಲೀಸ್ ಠಾಣಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Comments are closed.