ಕರ್ನಾಟಕ

ನಾಳೆ ನಡೆಯಲಿರುವ ಭಾರತ್ ಬಂದ್ ವೇಳೆ ಏನಿದೆ-ಏನಿಲ್ಲ ನೋಡಿ…

Pinterest LinkedIn Tumblr

ಬೆಂಗಳೂರು: ತೈಲೋತ್ಪನ್ನಗಳ ದರ ಏರಿಕೆ ವಿರೋಧಿಸಿ ನಾಳೆ ನಡೆಯಲಿರುವ ಭಾರತ್ ಬಂದ್ ಗೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಹಲವು ಸೇವೆಗಳು ವ್ಯತ್ಯಯವಾಗಲಿದೆ.

ಪ್ರಮುಖವಾಗಿ ಬಂದ್ ಕರೆಗೆ ಎಐಟಿಯುಸಿ ಸಂಯೋಜಿತ ಕೆಎಸ್ಆರ್’ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್, ಓಲಾ-ಉಬರ್ ಟ್ಯಾಕ್ಸಿ ಫಾರ್ ಶೂರ್ ಮಾಲೀಕರ ಸಂಘ, ಕೆಲ ಆಟೋ ಚಾಲಕರನ ಸಂಘಗಳು ಬಂದ್’ಗೆ ಬೆಂಬಲ ಘೋಷಿಸಿದ್ದು, ನಾಳೆ ಬೆಳಿಗ್ಗೆ 10ರಿಂದ ಸಂಜೆ 6ರವರೆಗೂ ವಾಹನಗಳನ್ನು ರಸ್ತೆಗೆ ಇಳಿಸದಿರಲು ತೀರ್ಮಾನಿಸಿವೆ.

ಇನ್ನು ಲಾರಿ ಮಾಲೀಕರು ಮತ್ತು ಏಜೆಂಟರುಗಳ ಸಂಘದ ಒಕ್ಕೂಟ, ಆಟೊ ಚಾಲಕರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ, ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘ ಮತ್ತು ಖಾಸಗಿ ಬಸ್‌ ಮಾಲೀಕರ ಸಂಘವು ಬಂದ್‌ಗೆ ಪರೋಕ್ಷ ಬೆಂಬಲ ಘೋಷಿಸಿವೆಯಾದರೂ ವಾಹನ ಸೇವೆ ಸ್ಥಗಿತಗೊಳಿಸಿಲ್ಲ. ಹೀಗಾಗಿ, ಆಟೊ, ಖಾಸಗಿ ಬಸ್‌, ಸರಕು ಸಾಗಣೆ ವಾಹನಗಳು ಎಂದಿನಂತೆ ಸಂಚರಿಸಲಿವೆ. ವಿಮಾನ ನಿಲ್ದಾಣ, ಐಟಿ-ಬಿಟಿ ಕಂಪನಿಗಳು ಮತ್ತು ಇತರೆ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಸೇವೆ ಒದಗಿಸುತ್ತಿರುವ ವಾಹನಗಳು ಕೂಡ ಪ್ರತಿ ದಿನದಂತೆ ಕಾರ್ಯಾಚರಣೆಗೊಳ್ಳಲಿವೆ. ಹೂವು, ಹಣ್ಣು, ತರಕಾರಿ, ಅಡುಗೆ ಅನಿಲ, ಸಿಮೆಂಟ್‌, ಸ್ಟೀಲ್‌, ಮರಳು, ಜಲ್ಲಿ ಮತ್ತು ಇನ್ನಿತರೆ ಸರಕುಗಳ ಸಾಗಣೆಯಲ್ಲೂ ಯಾವುದೇ ವ್ಯತ್ಯಯವಾಗುವುದಿಲ್ಲ.

ಗೈರಾದರೆ ಶಿಸ್ತು ಕ್ರಮ : ನೌಕರರಿಗೆ ಕೆಎಸ್‌ಆರ್‌ಟಿಸಿ ಎಚ್ಚರಿಕೆ
ಸಾರಿಗೆ ಸಂಸ್ಥೆಯ ನೌಕರರು ಬಸ್‌ ಸೇವೆ ಸ್ಥಗಿತಗೊಳಿಸಿ, ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ. ಈ ಮಧ್ಯೆ ‘ಸೆ. 10ರಂದು ಕರ್ತವ್ಯಕ್ಕೆ ಗೈರಾಗುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಹಾಗೆಯೇ, ಸಂಬಳ ಕಡಿತ ಮಾಡಲಾಗುವುದು’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ಇದಕ್ಕೆ ತದ್ವಿರುದ್ಧ ಎಂಬಂತೆ ಕೆಎಸ್‌ಆರ್‌ಟಿಸಿ ಸ್ಟಾಫ್‌ ಅಂಡ್‌ ವರ್ಕಸ್ಸ್‌ರ್‍ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಎಚ್‌.ವಿ.ಅನಂತಸುಬ್ಬರಾವ್‌ ಹೇಳಿಕೆ ನೀಡಿದ್ದು, ‘ಕೇಂದ್ರ ಸರ್ಕಾರವು ಇಂಧನ ಬೆಲೆ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಬದುಕಿನ ಮೇಲೆ ದಾಳಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ್‌ ಬಂದ್ ಗೆ ಬೆಂಬಲ ನೀಡಲಾಗಿದೆ. ಹೀಗಾಗಿ ಬಸ್‌ಗಳು ರಸ್ತೆಗಿಳಿಯುವುದಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಹೀಗಾಗಿ ಕೆಎಸ್ ಆರ್ ಟಿಸಿ ನೌಕರರ ಪರಿಸ್ಥಿತಿ ಇದೀಗ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.

ಮೆಟ್ರೊ, ರೈಲು ಸಂಚಾರ ಸ್ಥಗಿತವಿಲ್ಲ
ರೈಲುಗಳ ಸೇವೆ ಎಂದಿನಂತಿರಲಿದ್ದು, ಆದರೆ, ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಪರಿಸ್ಥಿತಿ ಆಧರಿಸಿ, ರೈಲುಗಳನ್ನು ಓಡಿಸಲು ತೀರ್ಮಾನಿಸಿದೆ.

Comments are closed.