ಕರಾವಳಿ

ಬಜಪೆ : ಮಕ್ಕಳ ಕಳ್ಳನೆಂದು ಶಂಕಿಸಿ ವ್ಯಕ್ತಿಯೋರ್ವರ ಮೇಲೆ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ : ಅಮಾನವೀಯ ವರ್ತನೆಗೆ ವ್ಯಾಪಕ ಖಂಡನೆ

Pinterest LinkedIn Tumblr

ಮಂಗಳೂರು, ಆಗಸ್ಟ್.20: ಮನೆಮನೆಗೆ ತೆರಳಿ ಹಣ ಸಂಗ್ರಹಿಸುತ್ತಿದ್ದ 63 ವರ್ಷ ಪ್ರಾಯದ ವ್ಯಕ್ತಿಯೊಬ್ಬರನ್ನು ಮಕ್ಕಳ ಕಳ್ಳನೆಂಬ ಶಂಕೆಯಲ್ಲಿ ಗುಂಪೊಂದು ಕಂಬಕ್ಕೆ ಕಟ್ಟಿ ಹಾಕಿ ಅಮಾನವೀಯವಾಗಿ ಥಳಿಸಿರುವ ಘಟನೆ ಬಜಪೆ ಠಾಣಾ ವ್ಯಾಪ್ತಿಯ ಕೈಕಂಬ ಸಮೀಪದ ಗುರುಕಂಬಳದಲ್ಲಿ ರವಿವಾರ ನಡೆದಿದೆ.

ಹಲ್ಲೆಗೊಳಗಾದವರನ್ನು ಕಾಟಿಪಳ್ಳ ನಿವಾಸಿ ಹಂಝ (63) ಎಂದು ಗುರುತಿಸಲಾಗಿದ್ದು, ಮಾಹಿತಿ ಪಡೆದ ಪೊಲೀಸರು ವ್ಯಕ್ತಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದಾರೆ.

ಹಂಝ ತನ್ನ ಸ್ನೇಹಿತ ತೌಸೀಫ್ ತಂಗಿಯ ಮದುವೆ ಸಾಲ ತೀರಿಸುವುದಕ್ಕಾಗಿ ಹಾಗೂ ಬಕ್ರಿದ್ ಹಿನ್ನೆಲೆಯಲ್ಲಿ ಹಣ ಸಂಗ್ರಹಿಸಲು ಗುರುಕಂಬಳದ ಮನೆಗಳಿಗೆ ತೆರಳಿದ್ದರು. ಹೊಸ ಆ್ಯಕ್ಟಿವಾ ವಾಹನದಲ್ಲಿ ತನ್ನ ಸ್ನೇಹಿತ ಜೊತೆ ಹೋಗಿದ್ದ ಅವರು ಆ್ಯಕ್ಟಿವಾ ನಿಲ್ಲಿಸಿದಾಗ ಅಲ್ಲೆ ಇದ್ದ ಮಕ್ಕಳಿಗೆ ತಮ್ಮ ಕಿಸೆಯಲ್ಲಿದ್ದ ಚಾಕಲೇಟ್ ನೀಡಿದ್ದರು ಎನ್ನಲಾಗಿದೆ. ಈ ವೇಳೆ ಇದನ್ನು ದೂರದಿಂದಲೇ ನೋಡಿದ ಗುಂಪೊಂದು ಇವರನ್ನು ಮಕ್ಕಳ ಕಳ್ಳನೆಂದು ಶಂಕಿಸಿ ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ.ಈ ವೇಳೆ ಘಟನೆಯಿಂದ ಹೆದರಿ ಇವರ ಜೊತೆ ಇದ್ದ ವ್ಯಕ್ತಿ ಪರಾರಿಯಾಗಿದ್ದಾರೆ.

ನಾನು ಅಮಾಯಕ, ನನ್ನ ಕಿಸೆಯಲ್ಲಿ ಐದು ಚಾಕ್ಲೆಟ್ ಗಳಿದ್ದವು ಇದನ್ನೇ ಶಂಕಿಸಿ, ಮಕ್ಕಳ ಕಳ್ಳ ಎಂದು ನನ್ನನ್ನು ಕಂಬಕ್ಕೆ ಕಟ್ಟಿ ಹಾಕಿದ ಸುಮಾರು 40 ಮಂದಿ ಇದ್ದ ತಂಡ ಗಂಭೀರ ಹಲ್ಲೆ ಮಾಡಿದೆ ಎಂದು ಹಲ್ಲೆಗೊಳಗಾದ ಕಾಟಿಪಳ್ಳ ನಿವಾಸಿ ಹಂಝ ಅವರು ದೂರಿದ್ದಾರೆ.
ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಈ ಘಟನೆ ಖಂಡಿಸಿರುವ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಘಟನೆಯಲ್ಲಿ ಭಾಗಿಯಾಗಿರುವ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಅರಿತ ‘ಎಫ್‌ಎಫ್‌ಇ’ ಸಂಘಟನೆಯ ಮುಖಂಡರು ಬಜ್ಪೆ ಠಾಣೆಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಸೂಕ್ತ ತನಿಖೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

ನಾನು ಯಾವುದೇ ತಪ್ಪು ಮಾಡಿಲ್ಲ : ಹಂಝ

“ನಾನು ನನ್ನ ಸ್ನೇಹಿತನೊಂದಿಗೆ ಜಾಗದ ವಿಷಯಕ್ಕೆ ಸಂಬಂಧಿಸಿ ಗುರುಕಂಬಳಕ್ಕೆ ಹೋಗಿದ್ದೆ. ಈ ಸಂದರ್ಭ ನನ್ನ ಕಿಸೆಯಲ್ಲಿ 5 ಚಾಕ್ಲೆಟ್ ಗಳಿದ್ದವು. ಅದರಲ್ಲಿ ಒಂದನ್ನು ನಾನು ತಿಂದಿದ್ದು, ನನ್ನಲ್ಲಿರುವ ಚಾಕ್ಲೆಟ್ ಕಂಡ ಅಲ್ಲಿದ್ದ ಮಕ್ಕಳು ನಮ್ಮ ಹತ್ತಿರ ಬಂದರು ಹಾಗು ನನ್ನ ಸ್ಕೂಟರ್ ಹೊಸತಾಗಿದ್ದು, ಅದಕ್ಕೆ ಇನ್ನಷ್ಟೇ ನಂಬರ್ ಪ್ಲೇಟ್ ಆಗಬೇಕಿದೆ. ಈ ಸಂದರ್ಭ ಅಲ್ಲಿ ಗೊಂದಲದ ವಾತಾವರಣ ಉಂಟಾಯಿತು.

ನನ್ನೊಂದಿಗಿದ್ದ ಸ್ನೇಹಿತ ಅಲ್ಲಿಂದ ಓಡಿ ಪರಾರಿಯಾಗಿದ್ದು ಇದು ಅಲ್ಲಿ ಸೇರಿದ್ದ ಗುಂಪಿನ ಆಕ್ರೋಶಕ್ಕೆ ಕಾರಣವಾಯಿತು. ಆಗ ಅಲ್ಲಿ ಸೇರಿದ್ದ ಗುಂಪು ನನ್ನ ಮೇಲೆ ಏಕಾಏಕಿ ದಾಳಿ ನಡೆಸಿ, ಗಂಭೀರವಾಗಿ ಹಲ್ಲೆ ಮಾಡಿದ್ದಲ್ಲದೆ, ಆತನನ್ನು ಕರೆ ತರಬೇಕು ಎಂದು ಒತ್ತಾಯಿಸಿ, ಕಂಬಕ್ಕೆ ಕಟ್ಟಿ ಹಾಕಿ ಗಂಭೀರ ಹಲ್ಲೆ ನಡೆಸಿದೆ. ಆತ ಬಾರದಿದ್ದಲ್ಲಿ ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಸಿ, ಮಾನಸಿಕವಾಗಿ ನಿಂದಿಸಿ ಗಂಭೀರವಾಗಿ ಹಲ್ಲೆ ಮಾಡಿದೆ. ಈ ವೇಳೆ ನಾನು, ನನ್ನಿಂದ ಯಾವುದೇ ತಪ್ಪು ಆಗಿಲ್ಲ. ನನಗೆ ಯಾವುದೇ ದುರುದ್ದೇಶ ಇರಲಿಲ್ಲ ಎಂದು ಅವರೊಂದಿಗೆ ಬೇಡಿಕೊಂಡರೂ ಅವರು ನನಗೆ ಹಲ್ಲೆ ನಡೆಸಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹಲ್ಲೆಗೊಳಗಾದ ಹಂಝ ಅವರು ಘಟನೆ ಬಗ್ಗೆ ವಿವರ ನೀಡಿದ್ದಾರೆ.

Comments are closed.