ಕರಾವಳಿ

ಪ್ರಕೃತಿ ವಿಕೋಪ ಸಂಭವಿಸಿರುವ ಜೋಡುಪಾಲದ ದುರ್ಗಮ ಸ್ಥಳಗಳಿಗೆ ಸಂಸದ ಕಟೀಲ್ ಭೇಟಿ : ನಿರಾಶ್ರಿತರಿಗೆ ನೆರವಿನ ಭರವಸೆ

Pinterest LinkedIn Tumblr

ಸುಳ್ಯ : ಮಂಗಳೂರು-ಮಡಿಕೇರಿ ಹೆದ್ದಾರಿ ಸಂಪಜೆ ಸಮೀಪದ ಜೋಡುಪಾಲದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಮತ್ತು ಜಲ ಪ್ರಳಯದಲ್ಲಿ ಸಂತ್ರಸ್ತರಾದ ನಿರಾಶ್ರಿತ ಶಿಬಿರಗಳಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್, ತಹಶೀಲ್ದಾರ್ ಕುಂಞಿಮ್ಮ ಹಾಗೂ ಇತರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಭೀಕರ ದುರಂತ ಉಂಟಾದ ಜೋಡುಪಾಲದ ದುರ್ಗಮ ಸ್ಥಳಗಳಿಗೆ ಹಾಗೂ ನಿರಾಶ್ರಿತ ಶಿಬಿರಗಳಿಗೆ ಭೇಟಿ ನೀಡಿದ ಸಂಸದ ನಳಿನ್ ಕುಮಾರ್ ಕಟೀಲ್ ನಿರಾಶ್ರಿತರಿಗೆ ನೆರವಿನ ಭರವಸೆ ನೀಡಿದ್ದಾರೆ.

ಇದೇ ವೇಳೆ ಜೋಡುಪಾಲದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಮತ್ತು ಜಲ ಪ್ರಳಯಕ್ಕೆ ಹಲವಾರು ಮಂದಿ ಕೊಚ್ಚಿ ಹೋಗಿರುವ ಶಂಕೆ ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. 5 ಜನ ಮಾತ್ರ ಸಾವಿಗೀಡಾದ ಬಗ್ಗೆ ದಾಖಲಾಗಿದೆ. ಆದರೆ ಶುಕ್ರವಾರ ಮಡಿಕೇರಿ ಸಂತೆಗೆ ವ್ಯಾಪಾರಕ್ಕಾಗಿ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದ ಸುಮಾರು 20 ರಿಂದ 25 ಮಂದಿ ಕೊಚ್ಚಿ ಹೋಗಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತ ಪಡಿಸಿದ್ದಾರೆ.

ಈಗಾಗಲೇ ಇಬ್ಬರ ಮೃತದೇಹ ಮಾತ್ರ ಸಿಕ್ಕಿದ್ದು ಉಳಿದ ನಾಪತ್ತೆಯಾದವರ ಹುಡುಕಾಟ ನಡೆಸುತ್ತಿದ್ದಾರೆ. ಭಾರೀ ಗುಡ್ಡ ಕುಸಿತದಿಂದ ಸಂತ್ರಸ್ತರಾಗಿರುವ ನೂರಾರು ಮಂದಿಯನ್ನು ವಿವಿಧ ನಿರಾಶ್ರಿತ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಅರಂತೋಡು ತೆಕ್ಕಿಲ್ ಹಾಲ್‌ನಲ್ಲಿ ಸುಮಾರು 120 ಮಂದಿ , ಕಲ್ಲುಗುಂಡಿ ಶಾಲೆಯಲ್ಲಿ ಸುಮಾರು 64 ಮತ್ತು ಕೊಡಗು ಸಂಪಾಜೆ ಶಾಲೆಯಲ್ಲಿ ಸುಮಾರು 170 ಮಂದಿ ಇದ್ದಾರೆ. ನಿರಾಶ್ರಿತರಿಗೆ ಊರವರು ಆಹಾರ ಪೂರೈಸುತ್ತಿದ್ದಾರೆ.

ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡುತ್ತಿದೆ. ಸುಳ್ಯದಿಂದ ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ತೆರಳಿ ನಿರಾಶ್ರಿತರಿಗೆ ಆಹಾರ, ದಿನಸು ಸಾಮಾಗ್ರಿ, ಬಟ್ಟೆಬರೆಗಳನ್ನು ನೀಡುತ್ತಿದ್ದಾರೆ. ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸುಳ್ಯದ ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳ ತಂಡ ಶಿಬಿರಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಸ್ಥಳೀಯ ಮುಖಂಡರು ಆಯಾ ನಿರಾಶ್ರಿತ ಕೇಂದ್ರಗಳ ಜವಾಬ್ದಾರಿ ವಹಿಸಿದ್ದಾರೆ.

ಈ ಸಂದರ್ಭದಲ್ಲಿ ಹತ್ತಿರದ ಊರಿನ ಹಲವಾರು ಸಂಘ ಸಂಸ್ಥೆಗಳು,ಊರ ನಾಗರಿಕರು,ದೇವಸ್ಥಾನ,ಚರ್ಚ್,ಮಸೀದಿಗಳು ಹಾಗೂ ಇತರ ದಾನಿಗಳು ಜಾತಿ,ಧರ್ಮ ಭೇದ ಮರೆತು ಸಂತ್ರಸ್ತರ ನೆರವಿಗೆ ಬಂದಿರುತ್ತಾರೆ.

Comments are closed.