ಕರಾವಳಿ

ಕುಂದಾಪುರ ಪುರಸಭೆ ಚುನಾವಣೆ: 11ನೇ ಸೆಂಟ್ರಲ್ ವಾರ್ಡ್ ‘ಸೆಂಟರ್ ಆಫ್ ಅಟ್ರಾಕ್ಷನ್’!

Pinterest LinkedIn Tumblr

ಕುಂದಾಪುರ: ಕುಂದಾಪುರ ಪುರಸಭೆಯ ಚುನಾವಣೆ ಕಾವು ರಂಗೇರಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ನಡೆದ ಪ್ರತಿ ಚುನಾವಣೆ ಸಂದರ್ಭದಲ್ಲಿನ ಬಿಜೆಪಿ ಭಿನ್ನಮತ ಈ ಚುನಾವಣೆಯಲ್ಲೂ ಮತ್ತಷ್ಟು ಸ್ಪೋಟಗೊಂಡಿದ್ದು ಬಿಜೆಪಿ ಕುಂದಾಪುರ ಕ್ಷೇತ್ರದ ಮಾಜಿ ಅಧ್ಯಕ್ಷ ಹಾಗೂ ಈ ಹಿಂದಿನ ಅವಧಿಯ ಕುಂದಾಪುರ ಪುರಸಭಾ ಉಪಾಧ್ಯಕ್ಷ ರಾಜೇಶ್ ಕಾವೇರಿ ಕುಂದಾಪುರ 11ನೇ ವಾರ್ಡ್ ಅಂದರೆ ಸೆಂಟ್ರಲ್ ವಾರ್ಡ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಿಂದ ಹಿರಿಯ ಮುಖಂಡ ಹಾಗೂ ಮಾಜಿ ಪುರಸಭಾಧ್ಯಕ್ಷ ಮೋಹನದಾಸ ಶೆಣೈ ಮತ್ತು ಕಾಂಗ್ರೆಸ್ ಪಕ್ಷದಿಂದ ಶಿವ ಕುಮಾರ್ ಪೂಜಾರಿ ನಾಮಪತ್ರ ಸಲ್ಲಿಸಿದ್ದಾರೆ.

  

(ಮೋಹನದಾಸ ಶೆಣೈ)

(ರಾಜೇಶ್ ಕಾವೇರಿ)

(ಶಿವ ಕುಮಾರ್ ಪೂಜಾರಿ)

   

ಅಂದು ಟಿಕೆಟ್ ನೀಡಿದ್ದೆ, ಇಂದು ನನಗಿಲ್ಲ-ಕಾವೇರಿ!
ಬಿ-ಫಾರ್ಮ್ ನೀಡದೇ ಇದ್ದ ಕಾರಣ ತಾನು ಅನಿವಾರ್‍ಯವಾಗಿ ಪಕ್ಷೇತರ ಅಭ್ಯರ್ಥಿಯಾಗಿ ನಾಪತ್ರ ಸಲ್ಲಿಸಿರುವೆ. ಕುಂದಾಪುರ ಕ್ಷೇತ್ರಾಧ್ಯಕ್ಷನಾಗಿದ್ದಾಗ ಈ ಹಿಂದಿನ ಅವಧಿಯಲ್ಲಿ ಎಲ್ಲರಿಗೂ ಟಿಕೆಟ್ ನೀಡಿದ್ದು ನಾನು. ಆದರೆ ಈ ಬಾರಿ ನನಗೆ ಪಕ್ಷದ ಟಿಕೆಟ್ ನೀಡಿಲ್ಲ. ಯಾರನ್ನೂ ವೈಯಕ್ತಿಕವಾಗಿ ದೂಷಿಸೋದಿಲ್ಲ. ಆದರೆ ಟಿಕೆಟ್ ತಪ್ಪಿಸಲು ಷಡ್ಯಂತ್ರ ನಡೆದಿದೆ. ನಾನೊಬ್ಬ ಪಕ್ಷದ ನಿಷ್ಟಾವಂತ ಕಾರ್ಯಕರ್ತ. ಪಕ್ಷದ ಮೇಲಿನ ನಂಬಿಕೆಯಿಂದ ಬಿಜೆಪಿ ಹಾಗೂ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿರುವೆ. ಪಕ್ಷ ಒಪ್ಪಿದರೆ ಮುಂದೆಯೂ ಬಿಜೆಪಿಯಿಂದ ಪಕ್ಷದ ಅಭ್ಯರ್ಥಿಯಗಿ ಸ್ಪರ್ಧಿಸುವೆ. ಇಲ್ಲವಾದಲ್ಲಿ ಸ್ಪರ್ಧೆಯಂತೂ ಖಚಿತ. ಸುಂದರ ಕುಂದಾಪುರದ ಕನಸು ನನಸು ಮಾಡುವ ಆಶಾವಾದವಿದೆ. ಈ ಹಿಂದಿನ ಅವಧಿಯಲ್ಲಿ ನಾನು ಮಾಡಿದ ಅಭಿವ್ರದ್ಧಿ ಕಾರ್ಯಗಳನ್ನು ಜನರು ಮೆಚ್ಚಿ ನನ್ನ ಕೈಹಿಡಿಯುವ ವಿಶ್ವಾಸವಿದೆ. ಮರು ಆಯ್ಕೆ ಆಗುತ್ತೇನೆಂಬ ಅಪಾರ ಧೈರ್ಯವಿದೆ ಎಂದು ರಾಜೇಶ್ ಕಾವೇರಿ ತಿಳಿಸಿದ್ದಾರೆ.

(ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ- ಕಾಡೂರು ಸುರೇಶ್ ಶೆಟ್ಟಿ)

ಅಧೀಕೃತ ಅಭ್ಯರ್ಥಿ ಅವರಲ್ಲ..ಇವರು!
ಕುಂದಾಪುರ ಪುರಸಭೆಯ ಚುನಾವಣೆಗೆ ಬಿಜೆಪಿಯಿಂದ ಎಲ್ಲಾ 23 ವಾರ್ಡುಗಳಿಗೆ ಅಧೀಕೃತ ಅಭ್ಯರ್ಥಿ ಘೋಷಣೆ ಮಾಡಿದ್ದು ನಾಮಪತ್ರ ಸಲ್ಲಿಕೆಯೂ ಮಾಡಿದ್ದಾರೆ. ಅದರಂತೆಯೇ 11ನೇ ಸೆಂಟ್ರಲ್ ವಾರ್ಡಿನಲ್ಲಿ ಬಿಜೆಪಿ ಹಿರಿಯ ಕಾರ್ಯಕರ್ತ ಮೋಹನದಾಸ ಶೆಣೈ ಅವರಿಗೆ ಬಿಜೆಪಿ ಬಿ-ಫಾರ್ಮ್ ನೀಡಿದ್ದು ಅವರೇ ನಮ್ಮ ಅಧೀಕೃತ ಅಭ್ಯರ್ಥಿ. ಅವರ ಬದಲಾಗಿ ಬೇರ್‍ಯಾರು ಇಲ್ಲ ಎಂದು ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

ಎಲ್ಲರ ಚಿತ್ತ ‘ಸೆಂಟ್ರಲ್ ವಾರ್ಡ್’ನತ್ತ!….
ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಪುರಸಭಾಧ್ಯಕ್ಷ ಮೋಹನದಾಸ ಶೆಣೈ ಸೆಂಟ್ರ್ಅಲ್ ವಾರ್ಡ್ ಬಿಜೆಪಿ ಅಭ್ಯರ್ಥಿ. ಈ ಹಿಂದೆ ಉಪಾಧ್ಯಕ್ಷ ಹಾಗೂ ಸದಸ್ಯರಾಗಿದ್ದ ರಾಜೇಶ್ ಕಾವೇರಿ ಪಕ್ಷೇತರ ಅಭ್ಯರ್ಥಿ. ಈ ಭಾಗದಲ್ಲಿ ಕೇಬಲ್ ನೆಟವರ್ಕ್ ಕಾರ್ಯ ಮಾಡಿಕೊಂಡು ಜನಸ್ನೇಹಿಯಾಗಿರುವ ಶಿವ ಪೂಜಾರಿ ಕಾಂಗ್ರೆಸ್ ಅಭ್ಯರ್ಥಿ. ಸೆಂಟ್ರಲ್ ವಾರ್ಡಿನಲ್ಲಿ ಜಿ.ಎಸ್.ಬಿ. ಹಾಗೂ ಅಲ್ಪಸಂಖ್ಯಾತ ಮತಗಳು ಜಾಸ್ಥಿ. ಉಳಿದಂತೆ ದೇವಾಡಿಗ, ರಾಮಕ್ಷತ್ರೀಯ, ವಿಶ್ವಕರ್ಮ, ಶೇಟ್, ಬಿಲ್ಲವ, ಬಂಟ್ ಬ್ರಾಹ್ಮಣ ಮತಗಳಿದೆ. ಕಾಂಗ್ರೆಸ್ ಬಿಲ್ಲವ, ಬಿಜೆಪಿ ಜಿ.ಎಸ್.ಬಿ. ಹಾಗೂ ಪಕ್ಷೇತರ ಅಭ್ಯರ್ಥಿ ರಾಮಕ್ಷತ್ರೀಯ ಸಮುದಾಯದವರಾಗಿದ್ದಾರೆ. ಜಾತಿವಾರು ಮತಗಳ ಲೆಕ್ಕಾಚಾರಕ್ಕೆ ಬಂದ್ರೆ ಮೇಲ್ನೋಟಕ್ಕೆ ಇಲ್ಲಿ ತ್ರಿಕೋನ ಸ್ಪರ್ಧೆಯಂತೆ ಕಂಡರೂ ಕೂಡ ಈ ಹಿಂದಿನ ಸಾಧನೆಗಳ ಲೆಕ್ಕಾಚಾರದಲ್ಲಿ ಇಲ್ಲಿನ ಬುದ್ಧಿವಂತ ಮತದಾರ ಯಾರನ್ನು ನೆಚ್ಚಿಕೊಳ್ಳುತ್ತಾನೆ ಎಂಬುದು ಸದ್ಯದ ಕುತೂಹಲ.

(ವರದಿ- ಯೋಗೀಶ್ ಕುಂಭಾಸಿ)

Comments are closed.