ಕರಾವಳಿ

ಪಟ್ಟದ ದೇವರನ್ನು ಪಡೆಯಲು ಕ್ರಿಮಿನಲ್ ಪ್ರಕರಣ ದಾಖಲಿಸಲು ಸಿದ್ಧ: ಶೀರೂರು ಲಕ್ಷ್ಮೀವರ ಶ್ರೀ

Pinterest LinkedIn Tumblr

ಉಡುಪಿ: ಉಡುಪಿ ಶ್ರೀಕೃಷ್ಣ ನನ್ನ ಸೊತ್ತಲ್ಲ, ರಾಮ ದೇವರೂ ಸಹ ನನ್ನ ಸೊತ್ತಲ್ಲ. ಆದರೆ, ವಿಠಲ ದೇವರು ಮಾತ್ರ ನನ್ನ ಸೊತ್ತು. ಪಟ್ಟದ ದೇವರನ್ನು ಪಡೆಯಲು ಅವಶ್ಯಕತೆ ಬಿದ್ದರೆ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಸಿದ್ಧ ಎಂದು ಶೀರೂರು ಮಠದ ಲಕ್ಷ್ಮೀವರ ಸ್ವಾಮೀಜಿ ತಿಳಿಸಿದರು.

ಶೀರೂರು ಮೂಲಮಠದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಜನರು ಬೇರೆಯ ಊರಿಗೆ ತೆರಳುವ ಸಂದರ್ಭ ತಮ್ಮಲ್ಲಿರುವ ಆಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ನಂಬಿಕಸ್ಥರಿಗೆ ನೀಡುವುದು ಸಹಜ. ಹಾಗೆಯೇ, ಊರಿಗೆ ಮರಳಿದ ನಂತರ ಅವರ ಸ್ವತ್ತನ್ನು ಮರಳಿಸುವುದು ಅವರ ಧರ್ಮ. ಒಂದುವೇಳೆ ಸ್ವತ್ತನ್ನು ನಿರಕಾರಿಸಿದರೆ ಅದು ದರೋಡೆಯಂತೆ. ಅಂತೆಯೇ ಕೃಷ್ಣಮಠದಲ್ಲಿ ಪೂಜೆಗೆ ಇಟ್ಟಿರುವ ಪಟ್ಟದ ದೇವರನ್ನು ಕೊಡಲು ನಿರಾಕರಿಸುತ್ತಿರುವುದು ಸಹ ದರೋಡೆಗೆ ಸಮಾನವಾಗಿದೆ ಎಂದರು.

ಉಡುಪಿಯ ಶ್ರೀಕೃಷ್ಣಮಠದ ಸಂಪ್ರದಾಯದ ಪ್ರಕಾರ ಅಷ್ಠಮಠಗಳಿಗೂ ಒಂದೊಂದು ಪಟ್ಟದ ದೇವರನ್ನು ಪೂಜಿಸುವುದು ಪ್ರತೀತಿ. ಪ್ರತಿನಿತ್ಯ ನಿಯಮ ನಿಷ್ಠೆಯಿಂದ ಪೂಜೆ ನಡೆಯಬೇಕು. ಒಂದುವೇಳೆ ಮಠದ ಸ್ವಾಮೀಜಿ ಅನಾರೋಗ್ಯಕ್ಕೀಡಾದರೆ, ಬೇರೆಡೆಗೆ ತೆರಳಿದರೆ ಮೂರ್ತಿಯನ್ನು ಹೊಂದಿರುವ ಪೆಟ್ಟಿಗೆಯನ್ನು ಶ್ರೀಕೃಷ್ಣ ಮಠದಲ್ಲಿ ಇಡುತ್ತಾರೆ.

ಸಂಪ್ರಾದಾಯದ ಪ್ರಕಾರ ದೇವರ ಪೆಟ್ಟಿಗೆಯನ್ನು ತೆರೆಯುವ ಅಧಿಕಾರ ಕೇವಲ ಸ್ವಾಮೀಜಿಗಳಿಗೆ ಮಾತ್ರ ಇರುತ್ತದೆ. ಮಠದಲ್ಲಿ ಕೆಲವು ಸ್ವಾಮೀಜಿಗಳು ವಿಮಾನದಲ್ಲಿ ತೆರಳುತ್ತಾರೆ. ಈ ವೇಳೆ ಪಟ್ಟದ ದೇವರನ್ನು ಅಲ್ಲಿನ ಸಿಬ್ಬಂದಿ ಮುಟ್ಟುತ್ತಾರೆ. ಇದು ಸರಿಯೇ ಎಂದು ಪ್ರಶ್ನಿಸಿದರು.‌

ಅಷ್ಠಮಠದಲ್ಲಿ ಏಳು ಸ್ವಾಮೀಜಿಗಳು ಒಂದಾಗಿ ಮಠದಲ್ಲಿ ಸಭೆ ನಡೆಸಿದ್ದಾರೆ. ಅವರಲ್ಲಿ ಒಬ್ಬರನ್ನು ನಾಯಕರನ್ನಾಗಿ ಮಾಡಿಕೊಂಡಿದ್ದಾರೆ. ಅವರು ಯಾರೆಂಬುವುದು ಎಲ್ಲರಿಗೂ ಗೊತ್ತಿದೆ ಎಂದು ಪೇಜಾವರ ಶ್ರೀಗಳ ವಿರುದ್ಧ ಪರೋಕ್ಷ ವಾಗ್ದಾಳಿ ನಡಸಿದರು.

‘ಶಿಷ್ಯ ಸ್ವೀಕಾರ ಮಾಡದ ಹೊರತು ಪಟ್ಟದ ದೇವರನ್ನು ಕೊಡುವುದಿಲ್ಲ ಎಂದು ಹೇಳಲು ಅವರು ಯಾರು. ಈ ಬಗ್ಗೆ ಸಭೆಗೆ ಕರೆದರೂ ನಾನು ಹೋಗುವುದಿಲ್ಲ. ಶ್ರೀಕೃಷ್ಣ ಮುಖ್ಯಪ್ರಾಣವಾದ ನನ್ನ ಪಟ್ಟದ ದೇವರನ್ನು ಪುನಃ ಮೂಲ ಮಠಕ್ಕೆ ಕರೆಸಿಕೊಳ್ಳುತ್ತಾನೆ’ ಎಂದು ಶೀರೂರು ಶ್ರೀಗಳು ಸವಾಲು ಹಾಕಿದರು.

Comments are closed.