ಕರಾವಳಿ

ವರುಣನ ಅರ್ಭಟಕ್ಕೆ ಕರಾವಳಿಯ ಅವಳಿ ಜಿಲ್ಲೆಗಳು ತತ್ತರ : ನಗರದ ತಗ್ಗು ಪ್ರದೇಶಗಳು ಜಲಾವೃತ : ಹಲವೆಡೆಗಳಲ್ಲಿ ಸೊತ್ತು ಹಾನಿ

Pinterest LinkedIn Tumblr

ಮಂಗಳೂರು, ಜುಲೈ.08: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಕಾರ ಮಳೆಗೆ ಕರಾವಳಿ ಜಿಲ್ಲೆಗಳ ಜನರ ಜನಜೀವನ ಅಸ್ತವ್ಯಸ್ತವಾಗಿದೆ. ಪುನರ್ವಸು ಮಳೆ ಆರಂಭವಾದಂದಿನಿಂದ ಕರ್ನಾಟಕ ಕರಾವಳಿಯುದ್ದಕ್ಕೂ ಮಳೆಯ ಹೊಡೆತ ಹೆಚ್ಚಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಎಲ್ಲೆಡೆ ಪ್ರವಾಹದ ವಾತಾವರಣ ಸೃಷ್ಟಿಯಾಗಿದೆ.

ಸ್ವಲ ದಿನ ವಿರಾಮ ಪಡೆದಿದ್ದ ಮಳೆ ಕಳೆದ ಮೂರು ದಿನಗಳಿಂದ ಚುರುಕುಗೊಂಡಿದೆ. ಶುಕ್ರವಾರದಿಂದ ಸುರಿಯಲು ಪ್ರಾರಂಭಿಸಿದ ಮಳೆ ಶನಿವಾರ ಹಾಗೂ ರವಿವಾರವೂ ಮುಂದುವರಿದಿದೆ. ಹೆಚ್ಚಿನ ಮಳೆ ನೀರಿನ ಪ್ರಮಾಣದಿಂದಾಗಿ ರಸ್ತೆಗಳು ಕರೆಗಳಂತೆ ಭಾಸವಾಗುತ್ತಿವೆ. ಸತತವಾಗಿ ಭೋರ್ಗರೆಯುತ್ತಿರುವ ವರಣನ ಅರ್ಭಟಕ್ಕೆ ಕರಾವಳಿಯ ಜನತೆ ತತ್ತರಿಸಿ ಹೋಗಿದ್ದಾರೆ.

ನಗರದ ತಗ್ಗು ಪ್ರದೇಶಗಳಾದ ಕೊಟ್ಟಾರಚೌಕಿ, ಕೂಳೂರು, ಜೆಪ್ಪಿನಮೊಗರು, ಪಂಪ್‌ವೆಲ್, ಉಳ್ಳಾಲ ಸೇತುವೆ ಆಸುಪಾಸಿನ ಪ್ರದೇಶದಲ್ಲಿ ಮಳೆನೀರು ನಿಂತಿದೆ. ಕೆಲವೆಡೆ ಮಳೆನೀರಿನ ಪ್ರವಾಹ ಉಂಟಾಗಿದೆ. ರಸ್ತೆ-ಚಂರಂಡಿಗಳು ತುಂಬಿ ಹರಿಯುತ್ತಿವೆ. ಏತನ್ಮಧ್ಯೆ ರಕ್ಷಣಾ ಕಾರ್ಯವೂ ಸಮರೋಪಾದಿಯಲ್ಲಿ ನಡೆದಿದೆ.

ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಉರ್ವ ಬಳಿಯ ಗಾಂಧಿನಗರದಲ್ಲಿ ಸರಕಾರಿ ಶಾಲೆಯ ಕಂಪೌಂಡ್ ಕುಸಿದಿದೆ. ಬಾವುಟೆಗುಡ್ಡ ಸಮೀಪದ ಸಾರ್ವಜನಿಕರ ಕೇಂದ್ರ ಗ್ರಂಥಾಲಯ ಸಮೀಪದ ಗೋಡೆಯೊಂದು ಕುಸಿದಿದೆ. ಮಣ್ಣಗುಡ್ಡ ಸಮೀಪದಲ್ಲಿ ಬೃಹತ್ ಮರವೊಂದರ ಕೊಂಬೆಗಳು ವಿದ್ಯುತ್ ತಂತಿಯ ಮೇಲೆ ಬಿದ್ದು ವಿದ್ಯುತ್ ಸಂಚಾರದಲ್ಲಿ ಕೆಲಹೊತ್ತು ವ್ಯತ್ಯಯ ಉಂಟಾಗಿತ್ತು. ವಾಹನ ಸಂಚಾರದಲ್ಲೂ ಕೆಲಹೊತ್ತು ಗೊಂದಲ ಉಂಟಾಗಿ ವಾಹನ ಸವಾರರು, ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಮಹಾನಗರ ಪಾಲಿಕೆ, ಮೆಸ್ಕಾಂ ಸಿಬ್ಬಂದಿ ಮರದ ಕೊಂಬೆಗಳನ್ನು ತೆರವುಗೊಳಿಸಿದರು.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ಮರವೂರು ರಸ್ತೆಯು ಕುಸಿದಿದೆ. ಇದರಿಂದ ಹಲವು ಮರಗಳು ಧರಾಶಾಹಿಯಾಗಿವೆ. ಕುಸಿತಗೊಂಡ ರಸ್ತೆಯು ಅಪಾಯಕಾರಿಯಾಗಿ ಪರಿಣಮಿಸಿದ್ದು, ಅಪಘಾತ ತಡೆಗಾಗಿ ಕಂಬಗಳನ್ನು ನೆಟ್ಟು, ಬ್ಯಾರಿಕೇಡ್‌ಗಳನ್ನು ಇಡಲಾಗಿದೆ. ವಾಹನ ಸಂಚಾರದಲ್ಲಿ ಅಸ್ತವ್ಯಸ್ಥಗೊಂಡಿದೆ. ಮತ್ತೆ ರಸ್ತೆ ಕುಸಿಯುವ ಭೀತಿಯಿದ್ದು, ಸಾರ್ವಜನಿಕರು ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.

ಭಾರೀ ಮಳೆಯಿಂದಾಗಿ ಮೂಲ್ಕಿಯ ಮಾನಂಪಾಡಿ ಗ್ರಾಮದ ಹೊರವವಲಯದಲ್ಲಿ ತೆಂಗಿನ ತೋಟವೊಂದರಲ್ಲಿ 2-3 ಅಡಿಗಳ ಎತ್ತರಕ್ಕೆ ಮಳೆನೀರು ನಿಂತಿದೆ. ಮಂಗಳೂರು ತಾಲೂಕಿನ ಸೂರಿಂಜೆ, ಶಿಬರೂರು ಬಳಿ ನದಿಯಲ್ಲಿ ನೀರಿನ ಹರಿವು ಪ್ರಮಾಣ ಏರಿಕೆಯಾಗಿದೆ. ಈ ಪ್ರದೇಶದಲ್ಲಿದ್ದ 18 ಮಂದಿಯನ್ನು ದೋಣಿಗಳ ಮೂಲಕ ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು, ಮಕ್ಕಳು, ವೃದ್ಧರು ಮಹಿಳೆಯರು ಇದ್ದರು. ಎಲ್ಲರನ್ನೂ ರಕ್ಷಿಸಲಾಗಿದೆ.

ಮಂಗಳೂರು ತಾಲೂಕಿನ ಗುರುಪುರದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗುರುಪುರಕ್ಕೆ ಹತ್ತಿದ ಬಂಗ್ಲೆಗುಡ್ಡೆಯ ಮಸೀದಿಗೆ ಹತ್ತಿರದ ಮನೆಗಳ ಪಕ್ಕದಲ್ಲಿ ಭಾರಿ ಭೂಕುಸಿತ ಉಂಟಾಗಿದೆ. ಜೊತೆಗೆ ಹಲವು ಗಿಡ-ಮರಗಳು ಧರಾಶಾಹಿಗಳಾಗಿವೆ. ಸ್ಥಳೀಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಭೂಕುಸಿತ ಹೆಚ್ಚಾದಲ್ಲಿ ಮೇಲ್ಭಾಗದಲ್ಲಿರುವ ಮನೆಗಳು ಕುಸಿದು ಬೀಳುವ ಅಪಾಯವಿದೆ. ಸ್ಥಳಕ್ಕೆ ಭೇಟಿ ನೀಡಿದ ಗುರುಪುರ ಗ್ರಾಪಂ ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಜಿ.ಎಂ. ಉದಯ ಭಟ್, ಪಿಡಿಒ ಅಬೂಬಕ್ಕರ್, ಜಿಪಂ ಸದಸ್ಯ ಯು.ಪಿ. ಇಬ್ರಾಹೀಂ, ಕಂದಾಯ ಅಧಿಕಾರಿಗಳು ಪರಿಶೀಲನೆ ನಡೆಸಿ, ಇಲ್ಲಿ ತಡೆಗೋಡೆ ನಿರ್ಮಿಸುವ ಅಗತ್ಯದ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಬಂಟ್ವಾಳ ತಾಲೂಕಿನಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಹಲವೆಡೆಗಳಲ್ಲಿ ಗುಡ್ಡ ಕುಸಿತ, ಗೋಡೆ ಕುಸಿತ, ತೋಟಗಳಿಗೆ ನೀರು ನುಗ್ಗಿದ ಘಟನೆಗಳು ನಡೆದಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಜೀವನದಿ ನೇತ್ರಾವತಿ ಅಪಾಯಮಟ್ಟದಲ್ಲಿ ಹರಿಯುತ್ತಿದೆ.

ಕೆದಿಲ ಗ್ರಾಮದ ಪೂವಮ್ಮ ಎಂಬವರು ಗೋಡೆ ಕುಸಿತದಿಂದ ಕಾಲು ಮುರಿತಕ್ಕೆ ಒಳಗಾಗಿದ್ದು, ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 8 ಮೀಟರ್ ಎತ್ತರದಲ್ಲಿ ನೇತ್ರಾವತಿ ನದಿ ಹರಿಯುತ್ತಿದ್ದು (ಗರಿಷ್ಠ 9 ಮೀ.) ಅಪಾಯದ ಕರೆಗಂಟೆ ಬಾರಿಸುತ್ತಿದೆ. ಶನಿವಾರ ತಾಲೂಕಿನ ಹಲವು ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿತ್ತು.

ಬಂಟ್ವಾಳ ಪುರಸಭಾ ವ್ಯಾಪ್ತಿ ಸಹಿತ ತಾಲೂಕಿನ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಭಂಡಾರಿಬೆಟ್ಟು ರಾಜಾಕಾಲುವೆ ಉಕ್ಕಿ ಹರಿದಿದ್ದು ಮತ್ತೆ ದ್ವೀಪಸದೃಶ ವಾತಾವರಣ ನಿರ್ಮಾಣಗೊಂಡಿದೆ. ಪಾಣೆಮಂಗಳೂರಿನ ಆಲಡ್ಕ ಎಂಬಲ್ಲಿ ನೇತ್ರಾವತಿ ನದಿ ಏರಿಕೆಯಿಂದಾಗಿ ಮೈದಾನ ಪಕ್ಕದ ನಾಲ್ಕೈದು ಮನೆಗಳನ್ನು ಸ್ಥಳಾಂತರಿಸಲಾಗಿದೆ.

ಪುರಸಭಾ ವ್ಯಾಪ್ತಿಯ ಪಲ್ಲಮಜಲ್ ಎಂಬಲ್ಲಿ ಹಸನಬ್ಬ ಎಂಬವರ ಮನೆಯ ಆವರಣ ಕುಸಿದಿದ್ದು, ಮನೆ ಅಪಾಯದಲ್ಲಿದೆ. ಸುಮಾರು 50 ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಪಲ್ಲಮಜಲ್ ಎಂಬಲ್ಲಿ ಅಬೂಬಕರ್ ಹಾಜಿ ಬ್ಯಾರಿ ಎಂಬವರ ಆವರಣ ಗೋಡೆ ಕುಸಿದು 30 ಸಾವಿರ ರೂ. ನಷ್ಟ, ಬಿ.ಮೂಡ ಗ್ರಾಮದ ಮದ್ವ ಎಂಬಲ್ಲಿ ಅಬ್ದುಲ್ ಲತೀಫ್ ಎಂಬರ ಮನೆಗೆ ತಡೆಗೋಡೆ ಕುಸಿದು ಹಾನಿಯಾಗಿದ್ದು, ಸುಮಾರು 50 ಸಾವಿರ ನಷ್ಟ ಉಂಟಾಗಿದೆ. ಶಂಭೂರು ಎಎಂಆರ್ ಡ್ಯಾಂಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದ್ದು ಬಂದಿದ್ದು, ನೀರು ಬಿಡುಗಡೆ ಮಾಡುವ ಸಲುವಾಗಿ ಯಾರೂ ನದಿ ತೀರಕ್ಕೆ ಬಾರದಂತೆ ಶನಿವಾರ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡಿದೆ.

ಪುದು ಬದಿಗುಡ್ಡೆ ಎಂಬಲ್ಲಿ ಸೇಸಮ್ಮ ಎಂಬವರ ಮನೆ ತಡೆಗೋಡೆ ಕುಸಿದಿದ್ದು, ಚಂದ್ರಾವತಿ ಎಂಬವರ ಮನೆಗೆ ಬಿದ್ದು ನಷ್ಟ ಉಂಟಾಗಿದೆ. ಉಳಿ ಊರಿಂಜೆ ಮನೆ ಚೆನ್ನಪ್ಪ ಕುಲಾಲ್ ಅವರ ಮನೆಗೆ ಹಾನಿಯಾಗಿದ್ದರೆ, ನಾವುರ ಎಂಬಲ್ಲಿ ಯಶೋಧರ ಪೂಜಾರಿ ಎಂಬವರ ಮನೆಯೊಂದು ಕುಸಿಯುವ ಹಂತದಲ್ಲಿದೆ. ಅಮ್ಟಾಡಿ ಗ್ರಾಮದ ಉದಲೆಕೋಡಿ ಎಂಬಲ್ಲಿ ಗುಡ್ಡ ಜರಿದು, ತೋಡಿನ ನೀರು ಸ್ಥಗಿತಗೊಂಡಿದ್ದು, ಸಮೀಪದ ಮನೆಯ ಅಂಗಳ ಜಲಾವೃತವಾಗಿದೆ. ತೆಂಕಕಜೆಕಾರು ಗ್ರಾಮದ ಕಜೆಕಾರು ದೇವಸ್ಥಾನ ಸಮೀಪ ಗುಡ್ಡೆ ಕುಸಿದು ಹಾನಿಯಾಗಿದೆ. ರಾಜಕಾಲುವೆ ಒತ್ತುವರಿಯಂದಾಗಿ ಹಲವರ ಜಮೀನು ಜಲಾವೃತಗೊಂಡಿದ್ದು, ಅಪಾರ ಪ್ರಮಾಣದ ಕೃಷಿ ನಾಶವಾದ ಘಟನೆ ನರಿಕೊಂಬು ಗ್ರಾಮದ ನಾಯಿಲದಲ್ಲಿ ನಡೆದಿದೆ.

ನಾಯಿಲ ನಿವಾಸಿಗಳಾದ ಬಾನು ಪೂಜಾರಿ, ಪ್ರಕಾಶ, ರಾಮಚಂದ್ರ, ರಾಮಮೂಲ್ಯ, ನಿಕಿಲ್ ಕೊಲ್ಪೆ, ಜತ್ತಪ್ಪ ಶೆಟ್ಟಿ, ದಯಾನಂದ, ಬೋಜ, ಚೆನ್ನಪ್ಪ, ಉಮನಾಥ, ಶಿವಪ್ಪ, ವಿಶ್ಬನಾಥ, ವೆಂಕಪ್ಪ, ಲಕ್ಷಣ, ಜಯ, ರಂಗಪ್ಪ ಎಂಬವರ ಅಡಿಕೆ ಕ್ರಷಿ, ಭತ್ತದ ಕ್ರಷಿ, ತೆಂಗು ತೋಟ ಕ್ರತಕ ನೀರಿನ ನೆರೆಯಿಂದ ಸುಮಾರು 15 ದಿನಗಳಿಂದ ಮುಳುಗಡೆಯಾಗಿದೆ.

ವರುಣನ ಅಬ್ಬರಕ್ಕೆ ವಿಟ್ಲ ಭಾಗದಲ್ಲಿ ರಸ್ತೆಗಳು ಜಲವೃತಗೊಂಡಿದೆ. ಗುಡ್ಡಗಳು ಕುಸಿದು, ರಸ್ತೆಗೆ ಮರಗಳು ಬಿದ್ದು ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ವಿಟ್ಲ-ಸಾಲೆತ್ತೂರು-ಮಂಗಳೂರು ರಸ್ತೆಯ ಕುಡ್ತಮುಗೇರು ಎಂಬಲ್ಲಿ ಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ವಿಟ್ಲ-ಸಾಲೆತ್ತೂರು-ಮಂಗಳೂರು ಸಂಪರ್ಕಿಸುವ ರಸ್ತೆ ಸಂಪೂರ್ಣವಾಗಿ ಜಲವೃತಗೊಂಡಿದೆ. ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಅಬೂಬಕರ್ ಹಾಜಿ ಎಂಬವರ ತೋಟಕ್ಕೆ ನೀರು ನುಗ್ಗಿ ಬೆಳೆ ನಾಶಗೊಂಡಿದೆ. ಮೂರುಕಜೆ ಎಂಬಲ್ಲಿ ತೋಟಕ್ಕೆ, ಕಾಪುಮಜಲು ದೇವಸ್ಥಾನ, ಪರ್ತಿಪ್ಪಾಡಿ ಮಸೀದಿ ಆವರಣಕ್ಕೆ ನೀರು ನುಗ್ಗಿದೆ. ಹಲವೆಡೆ ಕೃಷಿಗೆ ಹಾನಿಯಾಗಿದೆ.

ಮುಲ್ಲರಪಟ್ನ ತೂಗುಸೇತುವೆ ಮುಳುಗಡೆ :

ಇತ್ತೀಚಿಗೆ ಸೇತುವೆ ಕುಸಿದ ಮುಲ್ಲರಪಟ್ನದಲ್ಲಿ ಸಾರ್ವಜನಿಕರಿಗೆ ಪರ್ಯಾಯ ವ್ಯವಸ್ಥೆಗೆ ಇದ್ದ ಏಕೈಕ ಮಾರ್ಗವಾದ ತೂಗುಸೇತುವೆ ಸಂಪರ್ಕ ರಸ್ತೆಯೂ ಜಲಾವೃತವಾಗಿದ್ದು, ನಡೆಯಲು ಕಷ್ಟವಾಗಿದೆ. ಇಲ್ಲಿಗೆ ಸಹಾಯಕ ಕಮೀಷನರ್ ರೇಣುಕಾ ಪ್ರಸಾದ್ ಭೇಟಿ ನೀಡಿ ಅಧಿಕಾರಿಗಳಿಗೆ ಸುಗಮ ಸಂಚಾರಕ್ಕೆ ಸೂಚನೆ ನೀಡಿದ್ದಾರೆ.

ಭಾರೀ ಮಳೆಯ ಮುನ್ಸೂಚನೆ :

ಮುಂದಿನ 24 ಗಂಟೆಗಳಲ್ಲಿ ಕರಾವಳಿ ಕರ್ನಾಟಕ, ದಕ್ಷಿಣ ಕರ್ನಾಟಕದ ಒಳನಾಡಿನಲ್ಲಿ, ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಕರ್ನಾಟಕದಲ್ಲಿ ಮುಂದಿನ 48 ಗಂಟೆಗಳ ಕಾಲ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

Comments are closed.