ಕರಾವಳಿ

ಮೀನಿಗೆ ವಿಷಕಾರಿ ರಾಸಾಯನಿಕ ಬಳಕೆ ವದಂತಿ, ವಿಡೀಯೋ ವೈರಲ್ ; ಆತಂಕಕ್ಕೀಡಾದ ಮೀನು ಮಾರಾಟಗಾರರು

Pinterest LinkedIn Tumblr

ಮಂಗಳೂರು, ಜೂನ್. 25: ಮೀನಿಗೆ ವಿಷಕಾರಿ ರಾಸಾಯನಿಕ ಬಳಕೆ ಮಾಡಿ ಮಾರಾಟ ಮಾಡುತ್ತಾರೆ ಎನ್ನುವ ವದಂತಿ ಸಾಮಾಜಿಕ ಜಾಲ ತಾಣಗಳ ಮೂಲಕ ಹರಡುತ್ತಿದ್ದು, ಇದರಿಂದ ಮೀನು ಮಾರಾಟಗಾರರು ಆತಂಕಕ್ಕೀಡಾಗಿದ್ದಾರೆ.

ಮೀನಿಗೆ ರಾಸಾಯನಿಕ ಸಿಂಪಡಣೆ ಮಾಡಿ ಮಾರಾಟ ಮಾಡುತ್ತಾರೆ ಎಂದು ಆಕ್ಷೇಪಣೆ ಮಾಡುವ ಸಂಭಾಷಣೆಯ ವೀಡಿಯೊವೊಂದು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಓರ್ವ ಗ್ರಾಹಕ ಮೀನು ಮಾರಾಟಗಾರರ ಬಳಿ ಮೀನಿಗೆ ರಾಸಾಯನಿಕ ಸಿಂಪಡಣೆ ಮಾಡಿರುವ ಬಗ್ಗೆ ವಾಗ್ವಾದ ನಡೆಸುವ ವೀಡಿಯೊ ಇದಾಗಿದ್ದು,ಇದನ್ನು ವಾಟ್ಸಪ್ ಗುಂಪಿನಲ್ಲಿ ಹರಿಯಬಿಡಲಾಗಿದೆ.

ಈ ಸಂಭಾಷಣೆಯ ವೀಡಿಯೊ ವೈರಲ್ ಆಗಿರುವುದರಿಂದ ಕಳೆದ ಎರಡು ದಿನಗಳಿಂದ ಜಿಲ್ಲೆಯ ಸ್ಥಳೀಯ ಬಿಡಿ ಮೀನು ಮಾರಾಟಗಾರರ ಬಳಿ ನಿತ್ಯ ಮೀನು ಖರೀದಿಸುವ ಗ್ರಾಹಕರು ಮೀನಿಗೆ ಕೆಮಿಕಲ್ ಹಾಕಿದೆಯೇ ?ಎಂದು ಪ್ರಶ್ನಿಸುತ್ತಾರೆ. ಮೀನು ಮಾರಾಟಗಾರರು ತಾನು ಆ ರೀತಿ ಯಾವೂದೇ ಕೆಮಿಕಲ್ ಬಳಸಿಲ್ಲ .ಹೊರಗಿನಿಂದ ಮೀನು ಬರುತ್ತದೆ. ನಾವು ಮಾರಾಟ ಮಾಡುತ್ತಿದ್ದೇವೆ ಎನ್ನುವ ಉತ್ತರವನ್ನು ನೀಡುತ್ತಾರೆ.ಆದರೆ ಹೆಚ್ಚಿನವರು ಈ ವಿಡೀಯೋ ನೋಡಿದ ಬಳಿಕ ಕೆಲವು ದಿನ ಮೀನು ಬೇಡ ಎನ್ನುವ ನಿರ್ಧಾರಕ್ಕೆ ಬಂದಿರುವುದು ಮೀನು ಮಾರಾಟದಲ್ಲಿ ಇಳಿಕೆಯಾಗಿರುವುದಕ್ಕೆ ಕಾರಣವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆ ರಜೆ ಇರುವುದರಿಂದ ಸ್ಥಳೀಯವಾಗಿ ಮೀನು ಮಾರುಕಟ್ಟೆಗೆ ಬಾರದೆ ಇರುವ ಕಾರಣ ಜಿಲ್ಲೆಗೆ ಮದ್ರಾಸು, ತಮಿಳುನಾಡು, ಹೈದರಾಬಾದ್ ಮೊದಲಾದ ಕಡೆಗಳಿಂದ ಮೀನು ಪೂರೈಕೆಯಾಗುತ್ತಿದೆ. ಈ ಸಂದರ್ಭ ಮೀನು ಕೆಡದಂತೆ ಸಂರಕ್ಷಿಸಲು ಕೆಲವೊಂದು ರಾಸಾಯನಿಕಗಳ ಬಳಕೆ ಮಾಡುತ್ತಾರೆ ಎನ್ನುವ ಬಗ್ಗೆ ವದಂತಿ ಹರಡಿದೆ. ಕೇರಳದಲ್ಲಿ ಹೈದರಾಬಾದಿನಿಂದ ಪೂರೈಕೆಯಾದ ಮೀನಿನಲ್ಲಿ ಈ ರೀತಿ ಆಗಿದೆ ಎನ್ನುವ ವದಂತಿ ಹರಡಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಕರಾವಳಿಯಲ್ಲಿ ಮೀನು ಮಾರಾಟಗಾರರು ಸಮಸ್ಯೆ ಎದುರಿಸುವಂತಾಗಿದೆ.

ಜಿಲ್ಲೆಯಲ್ಲಿ ತಿಂಗಳ ಹಿಂದೆ ನಿಫಾಹ್ ಜ್ವರದ ಭೀತಿಯ ಜೊತೆ ಹರಡಿದ ವದಂತಿಯಿಂದ ಹಣ್ಣಿನ ಮಾರಾಟಗಾರರು ಸಾಕಷ್ಟು ನಷ್ಟ ಹೊಂದಿದ್ದಾರೆ. ಇದೀಗ ಮೀನಿಗೆ ರಾಸಾಯನಿಕ ಬಳಕೆ ಮಾಡಿ ಮಾರಾಟ ಮಾಡುತ್ತಾರೆ ಎನ್ನುವ ವದಂತಿ ಸಾಮಾಜಿಕ ಜಾಲ ತಾಣಗಳಮೂಲಕ ಹರಡುತ್ತಿರುವುದರಿಂದ ಮೀನು ಮಾರಾಟಗಾರರು ಸಂಕಷ್ಟಕ್ಕೀಡಾಗಿದ್ದಾರೆ.

Comments are closed.