ಕರಾವಳಿ

ಬಾರ್ಕೂರಿನಲ್ಲಿ ಫೆ.19-22; ದೇವಾಡಿಗ ಸಮಾಜದ ಶ್ರೀ ಏಕನಾಥೇಶ್ವರೀ ದೇವಿಯ ಪ್ರತಿಷ್ಠಾಪನೆ, ಬ್ರಹ್ಮಕುಂಭಾಭಿಷೇಕ ಸಂಭ್ರಮ

Pinterest LinkedIn Tumblr

ಕುಂದಾಪುರ: ಶ್ರೀ ಏಕನಾಥೇಶ್ವರೀ ದೇವಸ್ಥಾನ ಬಾರ್ಕೂರು ಇಲ್ಲಿನ ನೂತನ ಶಿಲಾಮಯ ಗರ್ಭಗುಡಿ, ರಕ್ತೇಶ್ವರೀ, ಗುಳಿಗ, ಬ್ರಹ್ಮ, ನಾಗದೇವರ ಗುಡಿ, ಮತ್ತು ಸುತ್ತು ಪೌಳಿ ಸಮರ್ಪಣೆಯ ಜೊತೆಗೆ ಶ್ರೀ ಏಕನಾಥೇಶ್ವರೀ ದೇವಿಯ ‘ಪ್ರತಿಷ್ಟಾಪನೆ ಮತ್ತು ಬ್ರಹ್ಮ ಕುಂಭಾಭಿಷೇಕ’ ಕಾರ್ಯಕ್ರಮವು ಫೆ.19ರಿಂದ ಆರಂಭಗೊಂಡು ಫೆ.22 ರವರೆಗೆ ನಡೆಯಲಿದ್ದು ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದೆ.

`ಏಕನಾಥೇಶ್ವರೀ’… ಸಮಾಜದ ಮೂಲ ದೇವರು
ಧಾರ್ಮಿಕ ಮನೋಭಾವದ ಜೊತೆಗೆ ಆತ್ಮವಿಶ್ವಾಸ, ತಾಳ್ಮೆ ದೇವಾಡಿಗ ಸಮುದಾಯದ ಗುಣ. ಸಮುದಾಯದವರ ಮೂಲ ದೇವರು ಯಾರು? ಎಂಬ ಪ್ರಶ್ನೆ ಇತ್ತೀಚೆಗೆ ಕೇಳಿ ಬಂದಂತೆ, ಅಷ್ಟಮಂಗಲ ಪ್ರಶ್ನೆ ಹಾಕಿ ಕೇಳಿದಾಗ ಏಕನಾಥೇಶ್ವರೀ ದೇವಿಯ ಹೆಸರು ಬಂದಿತ್ತು. ಚರಿತ್ರೆಯ ಪ್ರಕಾರ ಬಾರ್ಕೂರು ಸಂಸ್ಥಾನವನ್ನು ಭೂತಾಳಪಾಂಡ್ಯ ಎಂಬ ರಾಜನು ಆಳುತ್ತಿದ್ದ ಕಾಲದಲ್ಲಿ ಶ್ರೀ ಏಕನಾಥೇಶ್ವರೀ ದೇವಿಯನ್ನು ದೇವಾಡಿಗರು ಆರಾಧಿಸುತ್ತಿದ್ದರು ಎಂದು ತಿಳಿದು ಬಂದಿದೆ. ಇದು ಬರಿ ನಂಬಿಕೆಯಲ್ಲ ಕೆಲವು ಸರಕಾರಿ ದಾಖಲೆಗಳು ಕೂಡಾ ಇದನ್ನು ದೃಢಪಡಿಸಿವೆ. ಅಲ್ಲದೇ ದೇವಸ್ಥಾನ ಉಂಬಳಿಗಾಗಿ 11.56 ಎಕ್ರೆ ಭೂಮಿಯಿದ್ದು ಕಾರಣಾಂತರಗಳಿಂದ ಭೂಮಿಯನ್ನು ಪರಭಾರೆ ಮಾಡಿದ್ದು ತಿಳಿದು ಬಂದಿದೆ. ಇವತ್ತಿಗೂ ಇದನ್ನು ದೃಡೀಕರಿಸುವ ಏಕನಾಥೀ ಕೆರೆ, ಏಕನಾಥೀ ಗದ್ದೆ ಮಾತ್ರವಲ್ಲದೇ ತಮ್ಮ ಹೆಸರಿನ ಪ್ರಾರಂಭದಲ್ಲಿ ಏಕನಾಥೀಯನ್ನು ಸೇರಿಸಿಕೊಂಡ ವ್ಯಕ್ತಿಗಳು ಇದ್ದರು ಎಂಬುದು ದೃಢಪಟ್ಟಿದೆ. ಅಲ್ಲದೇ ಸರ್ಕಾರದಿಂದ ದೇವಸ್ಥಾನಕ್ಕೆ ತಸ್ತೀಕು ಹಣ ಬರುತ್ತಿದ್ದ ಬಗ್ಗೆಯೂ ಉಲ್ಲೇಖವಿದೆ. ನಂತರದ ದಿನಗಳಲ್ಲಿ ದೇವಸ್ಥಾನದ ಭೂಮಿಯೆಲ್ಲವೂ ಪರಭಾರೆಯಾಗಿ ದೇವಸ್ಥಾನಕ್ಕೆ ಸರ್ಕಾರದಿಂದ ಬರುತ್ತಿದ್ದ ತಸ್ತೀಕು ಹಣವೂ ಬಾರದಿದ್ದಾಗ ದೇವಸ್ಥಾನದಲ್ಲಿ ನಡೆಯುತ್ತಿದ್ದ ಪೂಜೆ ಪುನಸ್ಕಾರಗಳು ನಿಂತು ಹೋಗಿದೆ. ಬಡತನ, ಅನಕ್ಷರತೆ, ಮುಗ್ದತೆಯಿಂದಾಗಿ ಎಲ್ಲವೂ ಕೈತಪ್ಪಿ ಹೋಗಿರುವುದು ತಿಳಿದು ಬರುತ್ತದೆ.

6 ಕೋಟಿ ವೆಚ್ಚದಲ್ಲಿ ದೇವಿಗೆ ಮಂದಿರ ನಿರ್ಮಾಣ….
ದೇವಸ್ಥಾನ ಪುನರ್ ನಿರ್ಮಾಣ ಮಾಡಬೇಕೆನ್ನುವ ದೃಷ್ಟಿಯಿಂದ 20.06.2013ರಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿಯೂ ಯಾರಿಗೂ ಯಾವುದೇ ಸಂಶಯಕ್ಕೆ ಎಡೆ ಇಲ್ಲದಂತೆ ಇವುಗಳು ದೃಢಪಟ್ಟಿದೆ. ಹಾಗಾಗಿ ಭಕ್ತಾಭಿಮಾನಿಗಳು ಸೇರಿ ಸಂಪೂರ್ಣವಾಗಿ ಏಕನಾಥೇಶ್ವರೀ ದೇವಿಯ ದೇವಸ್ಥಾನವನ್ನು ನಿರ್ಮಿಸಬೇಕೆನ್ನುವ ತೀರ್ಮಾನವನ್ನು ತೆಗೆದುಕೊಂಡದ್ದಲ್ಲದೇ ಅದಕ್ಕಾಗಿ ಸೂಕ್ತವಾದ ಸ್ಥಳವನ್ನು ಖರೀದಿಸಿ ಮೇ 10, 2015ರಂದು ಇದಕ್ಕೆ ಸಂಬಂಧಪಟ್ಟಂತೆ ಸ್ಥಳ ಶುದ್ಧೀಕರಣದ ಅಂಗವಾಗಿ ಉಳುವ ಮತ್ತು ಬಿತ್ತುವ ಕಾರ್ಯಕ್ರಮವನ್ನು ದೇವಸ್ಥಾನ ಕಟ್ಟುವ ಸ್ಥಳದಲ್ಲಿ ನಡೆಸಿದರು. ಎಲ್ಲಾ ಊರುಗಳಲ್ಲಿನ ದೇವಾಡಿಗ ಸಮಾಜ ಬಾಂಧವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ದೇವಸ್ಥಾನವು ಆದಷ್ಟು ಶೀಘ್ರವೇ ಆಗಬೇಕೆನ್ನುವ ದೃಷ್ಟಿಯಿಂದ ಮುಷ್ಟಿಕಾಣಿಕೆ ಅರ್ಪಿಸಿದ್ದರುಯ್. ಆ ನಂತರ ಪರಿಹಾರ ಕಾರ್ಯಕ್ರಮದ ಅಂಗವಾಗಿ ವಿಶೇಷ ಪೂಜೆಗಳನ್ನು ನಿರಂತರವಾಗಿ ಭಜನಾ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದು ಶ್ರೀ ದೇವಸ್ಥಾನದ ಶಿಲಾನ್ಯಾಸವು 21-01-2016ರಂದು ಪಲಿಮಾರು ಮಠ ಉಡುಪಿಯ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ನೆರವೇರಿಸಲಾಗಿತ್ತು. ದೇವಸ್ಥಾನ ನಿರ್ಮಿಸಲು ಒಟ್ಟು ವೆಚ್ಚ ಸುಮಾರು 6 ಕೋಟಿ ಎಂದು ಅಂದಾಜಿಸಲಾಗಿದೆ. ಪಬ್ಲಿಕ್ ಟ್ರಸ್ಟ್ ಕಾನೂನು ಪ್ರಕಾರ ಭಕ್ತಾಧಿಗಳು ಸೇರಿ ಟ್ರಸ್ಟ್ ಒಂದನ್ನು ರಚಿಸಿದ್ದು ಟ್ರಸ್ಟ್ ಮುಖಾಂತರವೇ ದೇವಸ್ಥಾನ ನಿರ್ಮಾಣ ಸಮಿತಿಯನ್ನು ರಚನೆ ಮಾಡಿದ್ದು ಈ ಸಮಿತಿಯನ್ನು ಧನಸಹಾಯ ಸಂಗ್ರಹಿಸುವುದಕ್ಕಾಗಿ ಮತ್ತು ದೇವಸ್ಥಾನ ನಿರ್ಮಾಣದ ನಿರ್ವಹಣೆಯನ್ನು ಮಾಡುವುದಕ್ಕಾಗಿ ನೇಮಿಸಲಾಗಿತ್ತು.

ಶ್ರೀ ಏಕನಾಥೇಶ್ವರೀ ದೇವಸ್ಥಾನ ಟ್ರಸ್ಟ್ (ರಿ.), ಬಾರ್ಕೂರು ಇದರ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾಗಿ ಅಣ್ಣಯ್ಯ ಶೇರಿಗಾರ್ ಪುಣೆ, ಗೌರವ ಕಾರ್ಯದರ್ಶಿಯಾಗಿ ನರಸಿಂಹ ಬಿ. ದೇವಾಡಿಗ ಉಡುಪಿ, ಗೌರವ ಕೋಶಾಧಿಕಾರಿಯಾಗಿ ಬಿ. ಜರ್ನಾಧನ ದೇವಾಡಿಗ ಬಾರ್ಕೂರು, ದೇವಸ್ಥಾನ ನಿರ್ಮಾಣ ಸಮಿತಿ ಗೌರವ ಅಧ್ಯಕ್ಷರಾಗಿ ಧರ್ಮಪಾಲ್ ಯು. ದೇವಾಡಿಗ ಮುಂಬೈ, ಮುಖ್ಯ ಸಂಚಾಲಕರಾಗಿ ಹಿರಿಯಡ್ಕ ಮೋಹನ್‌ದಾಸ್, ವಿಶ್ವಸ್ಥರಾಗಿ ಸುರೇಶ ಡಿ. ಪಡುಕೋಣೆ ಮುಂಬೈ, ಹರೀಶ್ ಶೇರಿಗಾರ್ ದುಬೈ, ನಾರಾಯಣ ಎಂ. ದೇವಾಡಿಗ ದುಬೈ, ದಿನೇಶ್ ಸಿ. ದೇವಾಡಿಗ ದುಬೈ, ಜನಾರ್ಧನ ಎಸ್. ದೇವಾಡಿಗ ಮುಂಬೈ, ಎನ್. ರಘುರಾಮ ದೇವಾಡಿಗ ಶಿವಮೊಗ್ಗ ಇವರ ನೇತೃತ್ವದಲ್ಲಿ ಸಮಸ್ತ ದೇವಾಡಿಗ ಸಂಘಟನೆಗಳ ಸದಸ್ಯರು ಹಾಗೂ ದೇವಾಡಿಗ ಬಂಧುಗಳೆಲ್ಲರೂ ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.

ಕಾರ್ಯಕ್ರಮಕ್ಕೆ ಸಕಲ ಸಜ್ಜು…
ಪ್ರತಿಷ್ಠಾ ಕಾರ್ಯಕ್ರಮಗಳು ಫೆ.19 ರಿಂದ ಮೊದಲ್ಘೊಂಡು ಫೆ.22ರವೆರೆಗೆ ಸಾಗಿದರೂ ಕೂಡ ಪ್ರತಿಷ್ಠಾ ಪೂರ್ವಾಹಿ ಕಾರ್ಯಕ್ರಮಗಳು ಫೆ.15ರಿಂದಲೇ ನಡೆಯಲಿದೆ. ಫೆ.15 ಗುರುವಾರ ಶ್ರೀ ದೇವಿ ಬಿಂಬ ತರುವಕಾರ್ಯಕ್ರಮ, ಫೆ.17 ಉಡುಪಿ ಹಾಗೂ ಕುಂದಾಪುರ ಭಾಗದಿಂದ ಹೊರೆಕಾಣಿಕೆ ಸಮರ್ಪಣೆ, ಫೆ.18ಕ್ಕೆ ಸಾಮೂಹಿಕ ಫಲ ಸಮರ್ಪಣೆ ಪ್ರಾರ್ಥನೆ ನಡೆಯಲಿದೆ. ನಿರಂತರ ಭಜನೆಗಳು ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದೆ. ಫೆ.15 ಗುರುವಾರ ಸಂಜೆ ಯುವರಾಜ್ ದೇವಾಡಿಗ ದುಬೈ ಮತ್ತು ಜನಾರ್ಧನ ದೇವಾಡಿಗ ಪಡು ಪಣಂಬೂರು ರಚಿಸಿದ ಶ್ರೀ ಏಕನಾಥೇಶ್ವರೀ ದೇವಿಯ ಸುಪ್ರಭಾತ ಹಾಗೂ ಭಕ್ತಿಗೀತೆಗಳ ಸಿಡಿ ಬಿಡುಗಡೆಯೂ ನಡೆಯಲಿದೆ.

ಪೂರ್ವಭಾವಿ ಸಭೆ ಸಮಾಪನ:
ಭಾನುವಾರ ದೇವಸ್ಥಾನದ ಆವರಣದಲ್ಲಿ ಪೂರ್ವಭಾವಿ ಸಭೆಯು ಟ್ರಸ್ಟಿಗಳ ನೇತ್ರತ್ವ ನಡೆಯಿತು. ಈ ಸಂದರ್ಭ ಆಗಮಿಸಿದ ಭಕ್ತಾಧಿಗಳು ಹಾಗೂ ಸಮಾಜ ಬಾಂಧವರಲ್ಲಿ ಸಲಹೆ ಹಾಗೂ ಸಹಕಾರ ಕೇಳಲಾಯಿತು. ವಿವಿಧ ಸಂಘಗಳು ಹಾಗೂ ವೈಯಕ್ತಿಕವಾಗಿ ನೀಡಿದ ಧನಸಹಾಯವನ್ನು ಸ್ವೀಕರಿಸಲಾಯಿತು.

ವಿಶೇಷ ಸೇವಾರ್ಪಣೆ..
ಭಕ್ತಾಭಿಮಾನಿಗಳು ಬ್ರಹ್ಮಕಲಶೋತ್ಸವದ ಬೆಳ್ಳಿ ಕಲಶ ಒಂದರ ರೂ.25000/-, ತಾಮ್ರ ಕಲಶ ಒಂದರ ರೂ.3000/- ನೀಡಿ ರಶೀದಿ ಪಡೆದುಕೊಳ್ಳಬಹುದು. ತಾವು ಇಚ್ಚಿಸಿದ ದಿನ (ವರ್ಷಕ್ಕೊಮ್ಮೆ) ಶಾಶ್ವತ ಪೂಜೆಗಾಗಿ ರೂ.5000/- ಮತ್ತು ಒಂದು ದಿನದ ತ್ರಿಕಾಲ ಪೂಜೆಗಾಗಿ ರೂ.1000/- ದೇವಸ್ಥಾನದ ಕಾರ್ಯಾಲಯದಲ್ಲಿ ಪಾವತಿಸಿ ರಶೀದಿ ಪಡೆದುಕೊಳ್ಳಬಹುದು.

ದೇಣಿಗೆ ನೀಡುವ ದಾನಿಗಳಿಗಳಲ್ಲಿ ಮನವಿ…..
ಭಕ್ತಾಭಿಮಾನಿಗಳು ತಮ್ಮ ಉದಾರ ದೇಣಿಗೆಯನ್ನು Shree Ekanatheshwari Temple Trust (R.), Canara Bank, Barkur Branch, A/c No. 3747101001893 (IFSC No. CNRB0003747) ಪಾವತಿಸಬಹುದು. ದೇಣಿಗೆ ಕಳುಹಿಸುವವರು ಅವರ ವಿಳಾಸ ಮತ್ತು ವಿವರಗಳನ್ನು ಖಡ್ಡಾಯವಾಗಿ ದೇವಸ್ಥಾನದ ಕಛೇರಿಗೆ ಇ-ಮೇಲ್/ಎಸ್.ಎಮ್.ಎಸ್/ಪತ್ರ ಮುಖೇನ ತಿಳಿಸಬೇಕಾಗಿ ವಿನಂತಿ.
Email: sriekanatheshwaritemplebarkur@gmail.com/Mob.No.9740062645/7026809338.

(ಚಿತ್ರಗಳು: ಯೋಗೀಶ್ ಕುಂಭಾಸಿ)

Comments are closed.