ಕರ್ನಾಟಕ

ಗುಜರಾತ್‌ ಮಾದರಿ ತಂತ್ರಕ್ಕೆ ರಾಹುಲ್‌ ಚಿಂತನೆ

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್‌ ಗುಜರಾತ್‌ ಚುನಾವಣೆಯಲ್ಲಿ ಸೋತಿದ್ದರೂ ಅಲ್ಲಿ ಚುನಾವಣೆ ತಂತ್ರಗಾರಿಕೆ ಕುರಿತು ನಡೆಸಿದ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ಅದೇ ಮಾದರಿಯನ್ನು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ಬಳಸಿಕೊಳ್ಳಲು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ತೀರ್ಮಾನಿಸಿದ್ದಾರೆ.

ಗುಜರಾತ್‌ನಲ್ಲಿ ಹಿಂದೂ ದೇವಾಲಯಗಳಿಗೆ ಭೇಟಿ ನೀಡಿದ್ದು ಯಶಸ್ವಿಯಾದ ಹಿನ್ನೆಲೆಯಲ್ಲಿ ಕರ್ನಾಕಟದಲ್ಲಿಯೂ ಅದನ್ನು ಅಳವಡಿಸಿಕೊಳ್ಳಲು ರಾಹುಲ್‌ ಗಾಂಧಿ ನಿರ್ಧರಿಸಿದ್ದಾರೆ. ಅದರಂತೆ ಚುನಾವಣೆಗೆ ಪಕ್ಷದ ಪ್ರಣಾಳಿಕೆ ರಚಿಸುವುದಕ್ಕೂ ಗುಜರಾತ್‌ ಮಾದರಿ ಅನುಸರಿಸುವಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ.

ಏಪ್ರಿಲ್‌ ಅಂತ್ಯ ಅಥವಾ ಮೇ ತಿಂಗಳಾರಂಭದಲ್ಲಿ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ಈಗಾಗಲೇ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅಧ್ಯಕ್ಷತೆಯಲ್ಲಿ ಪ್ರಣಾಳಿಕೆ ಸಮಿತಿ ರಚನೆ ಮಾಡಿದ್ದು, ಈ ಬಾರಿ “ಜನ ಸಾಮಾನ್ಯರ ಪ್ರಣಾಳಿಕೆ’ ಸಿದ್ದಪಡಿಸುವಂತೆ ರಾಜ್ಯದ ಮುಖಂಡರಿಗೆ ರಾಹುಲ್‌ ಗಾಂಧಿ ಸೂಚಿಸಿದ್ದಾರೆ.

ಗುಜರಾತ್‌ ಚುನಾವಣೆಗೂ ಮೊದಲು ಸ್ಯಾಮ್‌ ಪಿತ್ರೋಡಾ ನೇತೃತ್ವದಲ್ಲಿ ಗುಜರಾತ್‌ನ ವಡೋದರಾ, ಅಹಮದಾಬಾದ್‌, ರಾಜಕೋಟ್‌, ಜಾಮ್‌ನಗರ ಮತ್ತು ಸೂರತ್‌ನಲ್ಲಿ ಸಾರ್ವಜನಿಕರೊಂದಿಗೆ ಚರ್ಚಿಸಿ ಅವರ ಬೇಡಿಕೆಗಳನ್ನು ಆಲಿಸಿ ಪ್ರಣಾಳಿಕೆಯಲ್ಲಿ ಸೇರ್ಪಡೆಗೊಳಿಸಿದ್ದರು. ಅದೇ ರೀತಿ ರಾಜ್ಯದ ಪ್ರಮುಖ ನಗರ ಮತ್ತು ಪಟ್ಟಣಗಳಲ್ಲಿ ಎಲ್ಲ ವರ್ಗದ ಜನರ ನಿರೀಕ್ಷೆಗಳನ್ನು ಆಲಿಸಿ, ಅವರ ಅಭಿಪ್ರಾಯ ಸಂಗ್ರಹಿಸಿ ಜನಪರವಾದ ಪ್ರಣಾಳಿಕೆ ಸಿದ್ಧ ಪಡಿಸುವಂತೆ ರಾಹುಲ್‌ ಗಾಂಧಿ ಸಲಹೆ ನೀಡಿದ್ದಾರೆ.

ಪಕ್ಷದ ಮುಖಂಡರು ಕಚೇರಿಯಲ್ಲಿ ಕುಳಿತು ಚರ್ಚಿಸಿ ಪ್ರಣಾಳಿಕೆ ರಚಿಸದಂತೆ ರಾಹುಲ್‌ ಸೂಚಿಸಿದ್ದು, ಜನರ ಭಾವನೆಗಳನ್ನು ಅರಿತು ಪ್ರಣಾಳಿಕೆ ಸಿದ್ದಪಡಿಸಬೇಕೆಂದು ಹೇಳಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರು ತಿಳಿಸಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕಳೆದ ನಾಲ್ಕೂವರೆ ವರ್ಷದಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ, ಇಂದಿರಾ ಕ್ಯಾಂಟೀನ್‌ ನಂತಹ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದು, ರಾಜ್ಯದ ಎಲ್ಲ ವರ್ಗದ ಮತ್ತು ಸಾಮಾನ್ಯ ಜನರಿಗೆ ಹೆಚ್ಚು ಅನುಕೂಲವಾಗುವ ಯೋಜನೆಗಳನ್ನು ನೀಡಿದ್ದಾರೆ ಎನ್ನುವ ಅಭಿಪ್ರಾಯವನ್ನು ರಾಹುಲ್‌ ಗಾಂಧಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯ ಕಮಿಟಿ 7 ಸಭೆ: ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಅಧ್ಯಕ್ಷತೆಯ ರಾಜ್ಯ ಚುನಾವಣಾ ಪ್ರಣಾಳಿಕೆ ಸಮಿತಿ ಈಗಾಗಲೇ ಬೆಂಗಳೂರು, ಮಂಗಳೂರು, ಕಲಬುರಗಿ, ಹುಬ್ಬಳ್ಳಿ, ಮೈಸೂರು, ಚಿತ್ರದುರ್ಗ, ಶಿವಮೊಗ್ಗ ನಗರಗಳಲ್ಲಿ ಸ್ಥಳೀಯ ಕೈಗಾರಿಕೋದ್ಯಮಿಗಳು, ರೈತ ಮುಖಂಡರು, ಮಹಿಳಾ ಹಾಗೂ ಪ್ರಗತಿಪರ ಸಂಘಟನೆಗಳು, ಶಿಕ್ಷಣ ತಜ್ಞರು, ವೈದ್ಯರು ಸೇರಿದಂತೆ ವೃತ್ತಿಪರ ಜನರೊಂದಿಗೆ ಸಭೆ ನಡೆಸಿ ಅವರ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ.

ಅಲ್ಲದೇ ಪಕ್ಷದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳಿಗೂ ತಾಲೂಕು ಮತ್ತು ಜಿಲ್ಲೆಗಳ ಸಮಸ್ಯೆಗಳ ಪಟ್ಟಿ ಮಾಡಿ ನೀಡುವಂತೆ ಪತ್ರ ಬರೆದು ಸೂಚಿಸಿದ್ದಾರೆ.

ಸಚಿವರೊಂದಿಗೆ ಸಭೆ: ಇದಲ್ಲದೇ ಸರ್ಕಾರದ ಮಟ್ಟದಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಯಾವ ರೀತಿ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಸೇರ್ಪಡೆ ಮಾಡಬೇಕೆಂಬ ಕುರಿತು ಸಚಿವರೊಂದಿಗೂ ಚರ್ಚಿಸಲು ಪ್ರಣಾಳಿಕೆ ಸಮಿತಿ ನಿರ್ಧರಿಸಿದೆ. ಶನಿವಾರವೂ ಬೆಂಗಳೂರಿನಲ್ಲಿ ಶಿಕ್ಷಣ ತಜ್ಞರು ಮತ್ತು ಕೈಗಾರಿಕೋದ್ಯಮಿಗಳೊಂದಿಗೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಫೆಬ್ರವರಿ ಅಂತ್ಯಕ್ಕೆ ಪ್ರಣಾಳಿಕೆ ಸಮಿತಿ ವರದಿ ನೀಡುವ ಸಾಧ್ಯತೆ ಇದೆ.

ಈಗಾಗಲೇ ರಾಜ್ಯದ ಪ್ರಮುಖ ನಗರಗಳಲ್ಲಿ ಸಮಿತಿ ಸಭೆ ನಡೆಸಿ ಉದ್ಯಮಿಗಳು, ರೈತರು, ವೃತ್ತಿಪರರು ಸೇರಿದಂತೆ ಬೇರೆ ಬೇರೆ ವರ್ಗದ ಜನರ ಅಭಿಪ್ರಾಯ ಸಂಗ್ರಹ ಮಾಡಿದ್ದೇವೆ. ಪ್ರಣಾಳಿಕೆ ಹೀಗೆ ಇರಬೇಕು ಎಂದು ಯಾರೂ ಸಲಹೆ ನೀಡಿಲ್ಲ. ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಣಾಳಿಕೆ ರಚನೆ ಮಾಡುವ ಪ್ರಯತ್ನ ನಡೆದಿದೆ.
– ಬಿ.ಎಲ್‌. ಶಂಕರ್‌, ಪ್ರಣಾಳಿಕೆ ರಚನಾ ಸಮಿತಿ ಉಪಾಧ್ಯಕ್ಷ.

-ಉದಯವಾಣಿ

Comments are closed.