ಕರ್ನಾಟಕ

ಎಲ್ಲ ಧರ್ಮಗಳ ಮುಗ್ಧರ ಮೇಲಿನ ಕೇಸ್‌ ವಾಪಸ್‌

Pinterest LinkedIn Tumblr


ಬೆಂಗಳೂರು: ಅಲ್ಪಸಂಖ್ಯಾಕ ಸಮುದಾಯದವರ ವಿರುದ್ಧದ ಪ್ರಕರಣ ವಾಪಸ್‌ ಪಡೆಯುವ ಸುತ್ತೋಲೆಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸರಕಾರ ಯೂಟರ್ನ್ ಹೊಡೆದಿದ್ದು, ಎಲ್ಲ ಸಮುದಾಯದ ಮುಗ್ಧರ ಮೇಲಿನ ಪ್ರಕರಣಗಳನ್ನು ವಾಪಸ್‌ ಪಡೆಯಲಾಗುವುದು ಎಂದಿದೆ.

ಕೋಮುಗಲಭೆಗೆ ಜಾತಿ-ಧರ್ಮ ಅಡ್ಡ ಬರಲ್ಲ ಎಂದ ಅವರು, ಕಣ್ತಪ್ಪಿನಿಂದ “ಅಲ್ಪಸಂಖ್ಯಾಕ‌’ ಸಮುದಾಯ ಎಂದಾಗಿದೆ ಎಂದು ಗೃಹ ಸಚಿವ ರಾಮ ಲಿಂಗಾರೆಡ್ಡಿ ಸಮಜಾಯಿಷಿ ನೀಡಿದ್ದಾರೆ. ಈ ಹಿಂದೆ 2017 ಡಿಸೆಂಬರ್‌ 22ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿದ್ದ “ಕೋಮು ಗಲಭೆಗಳಲ್ಲಿ ಮತ್ತು ಇತರೆ ಪ್ರಕರಣಗಳಲ್ಲಿ ಮುಗ್ಧ ಅಲ್ಪಸಂಖ್ಯಾಕ ಸಮುದಾಯದವರ ವಿರುದ್ಧ ದಾಖ ಲಾಗಿರುವ ಪ್ರಕರಣಗಳನ್ನು ಅಭಿ ಯೋಜನೆಯಿಂದ ಹಿಂಪಡೆಯುವ ಬಗ್ಗೆ’ ಎಂದಿದ್ದ ವಾಕ್ಯವನ್ನು “ಕೋಮು ಗಲಭೆಗಳಲ್ಲಿ ಮತ್ತು ಇತರ ಪ್ರಕರಣಗಳಲ್ಲಿ ಮುಗ್ಧ ಜನರ ವಿರುದ್ಧ ದಾಖ ಲಾಗಿರುವ ಪ್ರಕರಣಗಳನ್ನು ಅಭಿ ಯೋಜನೆಯಿಂದ ಹಿಂಪಡೆಯುವ ಬಗ್ಗೆ’ ಎಂದು ಬದಲಾಯಿಸಿ ಹೊಸದಾಗಿ ಶನಿವಾರ ಸುತ್ತೋಲೆ ಹೊರಡಿಸಲಾಗಿದೆ.

ಸುತ್ತೋಲೆಯನ್ನು ಪ್ರಧಾನ ಕಾರ್ಯದರ್ಶಿ ಒಳಾಡಳಿತ ಇಲಾಖೆ, ಡಿಜಿಪಿ, ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆ ನಿರ್ದೇಶಕರಿಗೆ ಕಳುಹಿಸಲಾಗಿದೆ. ಈ ಹಿಂದೆ 2017 ಡಿಸೆಂಬರ್‌ 22ರಂದು ಹೊರಡಿಸಿದ್ದ ಸುತ್ತೋಲೆ ಹಿಂಪಡೆಯಲಾಗಿದೆ.

ಶನಿವಾರ ವಿಕಾಸಸೌಧದಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದ ಅನಂತರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪ್ರಕರಣ ವಾಪಸ್‌ ಪಡೆಯುವ ಸಂಬಂಧ ಅಲ್ಪಸಂಖ್ಯಾಕ‌ ಸಮುದಾಯ ಎಂಬ ಪದ ನನ್ನ ಇಲಾಖೆಯ ಕಾರ್ಯದರ್ಶಿ ಗಮನಕ್ಕೆ ಬಂದಿಲ್ಲ ಎಂದು ಹೇಳಿದರು.

ರೈತ ಚಳವಳಿ, ವಿದ್ಯಾರ್ಥಿ ಚಳವಳಿ, ಕನ್ನಡ ಹೋರಾಟ ಸಂದರ್ಭದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ವಾಪಸ್‌ ಪಡೆಯಲು ಸರಕಾರ ಸಿದ್ಧ ಎಂದು ತಿಳಿಸಿದರು. ಚಳವಳಿಗಳ ಸಂಬಂಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ದಾಖಲೆ ಹಾಗೂ ಅಭಿಪ್ರಾಯ ನೀಡುವಂತೆ ಎಲ್ಲ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ರಿಯಲ್‌ ಎಸ್ಟೇಟ್‌ನಿಂದ ದೂರವಿರಿ: ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ಸಹಿತ ನಗರ ವ್ಯಾಪ್ತಿಯಲ್ಲಿ ಬರುವ ಎಲ್ಲ ಡಿಸಿಪಿ, ಎಸಿಪಿ, ಇನ್ಸ್‌ಪೆಕ್ಟರ್‌ಗಳ ಸಭೆ ನಡೆಸಿದ ಗೃಹ ಸಚಿವರು, ಕಾನೂನು ಸುವ್ಯವಸ್ಥೆ ಪಾಲನೆ, ಅಪರಾಧ ಪ್ರಕರಣ
ಗಳ ನಿಯಂತ್ರಣಕ್ಕೆ ಹೆಚ್ಚು ಒತ್ತು ಕೊಡಿ. ಚುನಾವಣೆ ಹತ್ತಿರ ಬರುತ್ತಿರುವುದರಿಂದ ರೌಡಿಗಳ ಉಪಟಳ ಹೆಚ್ಚಾಗಲಿದೆ. ಆ ಬಗ್ಗೆ ನಿಗಾವಹಿಸಿ ಹಳೆಯ ರೌಡಿ ಶೀಟರ್‌ಗಳ ಚಲನವಲನಗಳ ಮೇಲೆ ಕಣ್ಣಿಡಿ ಎಂದು ಸೂಚನೆ ನೀಡಿದರು. ಠಾಣಾ ಮಟ್ಟದಲ್ಲಿ ಪೊಲೀಸ್‌ ಅಧಿಕಾರಿಗಳು ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ತೊಡಗದಂತೆ ತಾಕೀತು ಮಾಡಿದರು. ಆಯಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಘಟನೆಗಳಿಗೆ ಇನ್ಸ್‌ಪೆಕ್ಟರ್‌ ಹೊಣೆಗಾರರಾಗಿರುತ್ತಾರೆ ಎಂದು ಹೇಳಿ ದರು ಎಂದು ಹೇಳಲಾಗಿದೆ.

3,164 ಆರೋಪಿಗಳು ಮುಕ್ತ
2015ರಿಂದ 2017ರ ವರೆಗೆ ಪ್ರಕರಣ ವಾಪಸ್‌ ಪಡೆದಿರುವ ಮಾಹಿತಿಯನ್ನೂ ಗೃಹ ಸಚಿವ ರಾಮಲಿಂಗಾರೆಡ್ಡಿ ಬಿಡುಗಡೆ ಮಾಡಿದ್ದು, ಒಟ್ಟು 414 ಪ್ರಕರಣಗಳಲ್ಲಿ 3,164 ಆರೋಪಿಗಳ ವಿರುದ್ಧದ ಪ್ರಕರಣ ಕೈ ಬಿಡಲಾಗಿದೆ. ಆ ಪೈಕಿ 2,806 ಹಿಂದೂಗಳು ಹಾಗೂ 358 ಮುಸ್ಲಿಮರು ಎಂದು ತಿಳಿಸಿದರು. 2017 ಫೆ. 2ರಂದು 94 ಪ್ರಕರಣ, 2016 ಜು. 29ರಂದು 123 ಪ್ರಕರಣ, 2015 ಮೇ 6 ರಂದು 32 ಪ್ರಕರಣ, 2015 ಮಾರ್ಚ್‌ 12 ರಂದು 175 ಪ್ರಕರಣ ವಾಪಸ್‌ ಪಡೆಯಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.

-ಉದಯವಾಣಿ

Comments are closed.