ಕರ್ನಾಟಕ

ಕೋಮು ಗಲಭೆಗೆ ಪ್ರಚೋದನೆ ನೀಡುವವರ ವಿರುದ್ಧ ಗೂಂಡಾ ಕಾಯ್ದೆ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

Pinterest LinkedIn Tumblr

ಬೆಂಗಳೂರು: ಕೋಮು ಗಲಭೆಗೆ ಪ್ರಚೋದನೆ ನೀಡುವವರ ವಿರುದ್ಧ ಮತ್ತು ಮೂಲಭೂತವಾದಿ ಶಕ್ತಿಗಳ ವಿರುದ್ಧ ಅಗತ್ಯಬಿದ್ದರೆ ಗೂಂಡಾ ಕಾಯ್ದೆ ಜಾರಿ ಮಾಡಿ ಗಡಿಪಾರು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇಂದು ರಾಜ್ಯ ಪೊಲೀಸ್ ಮಹಾ ನಿದೇರ್ಶಕರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶಕ್ಕೆ ಚಾಲನೆ ನೀಡಿದ ಬಳಿಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಮೂಲಭೂತ ಸಂಘಟನೆ ಯಾವುದೇ ವಿಭಾಗಕ್ಕೆ ಸೇರಿದರೂ ಅವುಗಳ ಮೇಲೆ ಸೂಕ್ಷ್ಮ ನಿಗಾವಹಿಸಬೇಕು. ಇನ್ನು ಮೂರು ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ೫೦೦೦೦ಕ್ಕೂ ಅಧಿಕ ಬೂತ್‌ಗಳಿರುತ್ತವೆ. ಅವುಗಳಲ್ಲಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಎಂದು ಪರಿಗಣಿಸಿ ಅವುಗಳ ಮೇಲೆ ವಿಶೇಷಗಮನ ಹರಿಸಬೇಕು ಎಂದು ಸೂಚಿಸಿದರು.

ಇತ್ತೀಚಿನ ದಿನಗಳಲ್ಲಿ ಮೂಲಭೂತವಾದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಪ್ರಚೋದನಾಕಾರಿ ಬರಹಗಳ ಮೂಲಕ ಅವರು ಕೋಮು ಭಾವನೆ ಕೆರಳಿಸುವ ಹಾಗೂ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ. ಅಂತಹವರ ಬಗ್ಗೆ ವಿಶೇಷ ನಿಗಾ ಇರಿಸುವುದರ ಜೊತೆಗೆ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಡ್ರಗ್ಸ್ ಮತ್ತು ಗಾಂಜಾ ಮಾರಾಟಗಾರರ ಮೇಲೆ ನಿಗಾ ವಹಿಸಬೇಕು. ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದು, ಇದರ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸಬೇಕು. ಆರೋಪಿಗಳು ಎಷ್ಟೇ ಶಕ್ತಿಶಾಲಿಯಾಗಿದ್ದರೂ ಅವರನ್ನು ದಮನ ಮಾಡಬೇಕು ಎಂದು ಸೂಚಿಸಿರುವುದಾಗಿ ಸಿಎಂ ಹೇಳಿದರು.

ಮಂಗಳೂರಿನಲ್ಲಿ ನಡೆದ ದೀಪಕ್ ರಾವ್ ಮತ್ತು ಮಹಮ್ಮದ್ ಬಶೀರ್ ಕೊಲೆಯ ಹಿಂದೆ ಮೂಲಭೂತವಾದಿ ಶಕ್ತಿಗಳ ಕೈವಾಡವಿರುವುದು ದೃಢಪಟ್ಟಿದೆ. ಅಲ್ಲಿನ ಪೊಲೀಸರು ಸ್ವಲ್ಪ ಮುಂಜಾಗೃತಾ ಕ್ರಮ ಕೈಗೊಂಡಿದ್ದರೆ ಈ ಕೊಲೆಗಳನ್ನು ತಪ್ಪಿಸಬಹುದಿತ್ತು ಎಂದರು. ಅಲ್ಲದೆ ಮೂಲಭೂತವಾದಿಗಳಿಂದ ಇನ್ನು ಮುಂದೆ ಈ ರೀತಿಯ ಕೃತ್ಯ ನಡೆದರೆ ಅಲ್ಲಿನ ಪೊಲೀಸ್ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದರು.

ಅಪರಾಧ ಪ್ರಮಾಣ ರಾಷ್ಟ್ರಮಟ್ಟದಲ್ಲಿ ಶೆ.೬ರಷ್ಟಿದೆ. ನಮ್ಮಲ್ಲಿ ಶೇ.1ರಷ್ಟು ಕಡಿಮೆಯಾಗಿದೆ. ಇದನ್ನು ಗಣನೀಯವಾಗಿ ಇಳಿಸಲು ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದ ಅವರು, ಕಳೆದ ಒಂದು ವರ್ಷದಲ್ಲಿ ಏನೇನು ಹಾಗಿದೆ ಎಂಬುದನ್ನು ಹಾಗೂ ಕಾನೂನು ಸುವ್ಯವಸ್ಥೆ ಉತ್ತಮಗೊಳಿಸಲು ಸುದೀರ್ಘ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.

Comments are closed.